ಬೆಮೆಲ್ ಅಧ್ಯಕ್ಷ ಗಾದಿಗೆ ಗಗನಮುಖಿ ನಟರಾಜನ್
ಬೆಂಗಳೂರು : ಭೂ ಕೆಲಸಗಳಿಗೆ ಬೇಕಾಗುವ ಉಪಕರಣ ತಯಾರಿಕೆಯಲ್ಲಿ ಏಷ್ಯಾದಲ್ಲಿ ಎರಡನೇ ದೊಡ್ಡ ಕಂಪನಿ ಎಂಬ ಅಗ್ಗಳಿಕೆಗೆ ಪಾತ್ರವಾಗಿರುವ ಭಾರತ್ ಅರ್ತ್‌ಮೂವರ್ಸ್ ಲಿಮಿಟೆಡ್ (ಬೆಮೆಲ್) ಇನ್ನೆರಡು ವರ್ಷಗಳಲ್ಲಿ 500 ಕೋಟಿ ರುಪಾಯಿ ಅಂತರರಾಷ್ಟ್ರೀಯ ವಹಿವಾಟು ನಡೆಸುವ ಯೋಜನೆ ಸಿದ್ಧಪಡಿಸಿದೆ.
ಕಂಪನಿಯ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ವಿ.ಆರ್.ಎಸ್.ನಟರಾಜನ್ ಸೋಮವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಕಂಪನಿ ಈಗ 115 ಕೋಟಿ ರುಪಾಯಿ ಅಂತರರಾಷ್ಟ್ರೀಯ ವಹಿವಾಟು ಹೊಂದಿದೆ. ಕಂಪನಿ ತಯಾರಿಸುತ್ತಿರುವ ಅರ್ತ್‌ಮೂವಿಂಗ್ ಉಪಕರಣಗಳಿಗೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಬಹಳ ಬೇಡಿಕೆಯಿದೆ. ವಿಶೇಷವಾಗಿ ಆಗ್ನೇಯ ಏಷ್ಯಾ, ಯು.ಎ.ಇ ಮತ್ತು ಮಧ್ಯ ಪ್ರಾಚ್ಯದ ರಾಷ್ಟ್ರಗಳಲ್ಲಿ ಉಪಕರಣಗಳಿಗೆ ಸಾಕಷ್ಟು ಬೇಡಿಕೆಯಿದೆ. ಸದ್ಯಕ್ಕೆ ಅರ್ತ್‌ಮೂವಿಂಗ್ ಅಲ್ಲದೆ ರಕ್ಷಣಾ ಉಪಕರಣಗಳು ಮತ್ತು ರೈಲ್ವೆ ಕೋಚ್‌ಗಳನ್ನು ಕಂಪನಿ ತಯಾರಿಸುತ್ತಿದೆ. ಇನ್ನು ಮುಂದೆ ಮೂಲಭೂತ ಸೌಕರ್ಯ ಕ್ಷೇತ್ರಕ್ಕೆ ಬೇಕಾದ ಉಪಕರಣಗಳನ್ನೂ ಕಂಪನಿ ತಯಾರಿಸಲಿದೆ ಎಂದು ನಟರಾಜನ್ ಹೇಳಿದರು.
ಪ್ರಸಕ್ತ ವಿತ್ತ ವರ್ಷ (2002- 03) ದಲ್ಲಿ ಬೆಮೆಲ್ 1675 ಕೋಟಿ ರುಪಾಯಿ ನಿವ್ವಳ ವಹಿವಾಟಿನ ಗುರಿ ಹೊಂದಿದೆ. ಕಳೆದ ವರ್ಷ 1,424 ಕೋಟಿ ರುಪಾಯಿ ಒಟ್ಟಾರೆ ವಹಿವಾಟು ನಡೆಸಿತ್ತು. ವಾರ್ಷಿಕ 8 ಪ್ರತಿಶತ ಅಭಿವೃದ್ಧಿಯಂತೆ ಮುಂದಿನ ಐದು ವರ್ಷಗಳಲ್ಲಿ (2002- 07) ದಾಪುಗಾಲಿಕ್ಕುವುದು ಕಂಪನಿಯ ಯೋಜನೆ. ಹೀಗೇ ಸಾಗಿ 2014ನೇ ಇಸವಿ ಹೊತ್ತಿಗೆ 5,000 ಕೋಟಿ ರುಪಾಯಿಯ ಕಂಪನಿಯನ್ನಾಗಿ ಬೆಮೆಲ್ಲನ್ನು ಪರಿವರ್ತಿಸುವುದು ನಟರಾಜನ್ ಉಮೇದಿ.
(ಪಿಟಿಐ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications