ಅ.19ರಂದು ಬೆಂಗಳೂರಲ್ಲಿ ಇಂಟೆಲ್ ಡೆವೆಲಪರ್ ಫೋರಮ್ ಸಮಾವೇಶ
ನವದೆಹಲಿ : ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ವಿನ್ಯಾಸಕಾರರು ಭೇಟಿ ಕೊಡಲೇಬೇಕಾದಂಥ ಇಂಟೆಲ್ ಡೆವೆಲಪರ್ ಫೋರಮ್(ಐಡಿಎಫ್)ನ ಸಮಾವೇಶ ಇದೇ ಮೊದಲ ಬಾರಿಗೆ ಭಾರತದಲ್ಲಿ, ಅದೂ ಬೆಂಗಳೂರಲ್ಲಿ ನಡೆಯಲಿದೆ.
(ವಿಶ್ವ ಡಿಜಿಟಲ್ ಶಿಲ್ಪಕಲೆ) ಆರ್ಕಿಟೆಕ್ಟಿಂಗ್ ದಿ ಡಿಜಿಟಲ್ ಯೂನಿವರ್ಸ್ ಎಂಬ ವಿಷಯ ಕುರಿತ ವಿಚಾರ ಸರಣಿ ಅಕ್ಟೋಬರ್ 19ರಂದು ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಆಯೋಜಿತವಾಗಿದೆ. ಇಂಟೆಲ್ ಏಷ್ಯ ಇಲೆಕ್ಟ್ರಾನಿಕ್ಸ್, ದಕ್ಷಿಣ ಏಷ್ಯಾ ವಿಭಾಗದ ನಿರ್ದೇಶಕ ಅವ್ತಾರ್ ಸಯಾನಿ ಈ ವಿಷಯ ತಿಳಿಸಿದರು.
ತಾಂತ್ರಿಕ ಕಲೆಗಾರಿಕೆಯನ್ನು ಸದಾ ಸಾಣೆಗೊಡ್ಡುವವರಿಗೆ ಐಡಿಎಫ್ ಬುದ್ಧಿವರ್ಧಕ. ಎಂಜಿನಿಯರ್‌ಗಳು ತಮ್ಮ ಕೌಶಲ್ಯದ ಹರವನ್ನು ವಿಸ್ತರಿಸಿಕೊಳ್ಳುವುದರ ಜೊತೆಗೆ ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ವೇಗ ದೊರಕಿಸಿಕೊಡಬಹುದು. ಐಡಿಎಫ್ ಈ ನಿಟ್ಟಿನಲ್ಲಿ ಸಾಕಷ್ಟು ಎರಕ ಹೊಯ್ಯಲಿದೆ.
ಇಂಟೆಲ್ ಆರ್ಕಿಟೆಕ್ಚರ್ ಸೊಲ್ಯುಶನ್ಸ್ ಎನೇಬ್ಲಿಂಗ್ ಗ್ರೂಪ್‌ನ ಅಸಿಸ್ಟೆಂಟ್ ಜನರಲ್ ಮೇನೇಜರ್ ಡೇನಿಯಲ್ ರಸೆಲ್, ಮೈಕ್ರೋಕಂಪ್ಯೂಟರ್ ಸಾಫ್ಟ್‌ವೇರ್ ಲ್ಯಾಬ್‌ನ ನಿರ್ದೇಶಕ ರಿಚರ್ಡ್ ವರ್ಟ್, ಇಂಟೆಲ್‌ನ ಕಾರ್ಯಕಾರಿ ಅಧಿಕಾರಿಗಳು ತಮ್ಮ ತಂತ್ರಜ್ಞಾನವನ್ನು ಹಂಚಿಕೊಳ್ಳಲಿದ್ದಾರೆ. ಅವ್ತಾರ್ ಕೂಡ ಮಾತನಾಡಲಿದ್ದಾರೆ. ‘ಪೆಂಟಿಯಂ 4’ ಬಗ್ಗೆ ಸಾಕಷ್ಟು ಮಾಹಿತಿ ದೊರಕಲಿರುವುದು ಸಮಾವೇಶದ ವಿಶೇಷಗಳಲ್ಲೊಂದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)












Click it and Unblock the Notifications