ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್‌ನಿಂದ ಹೊಸ ಕ್ಯಾಸೆಟ್‌ : ಕ್ಷಮಾದಾನಕ್ಕೆ ಕೋರಿಕೆ

By Staff
|
Google Oneindia Kannada News

ಚೆನ್ನೈ: ತನಗೆ ಕ್ಷಮಾದಾನ ನೀಡಿದರೆ, ಶರಣಾಗಲು ಸಿದ್ಧ ಎಂದು ಕಾಡುಗಳ್ಳ ವೀರಪ್ಪನ್‌ ಮತ್ತೊಮ್ಮೆ ಸಾರಿದ್ದಾನೆ. ನೆಡುಮಾರನ್‌ ಮೂಲಕ ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳಿಗೆ ನರಹಂತಕ ಕಳುಹಿಸಿರುವ ಹೊಸ ಕ್ಯಾಸೆಟ್‌ನಲ್ಲಿ ಅವನು ಈ ಮನವಿ ಮಾಡಿದ್ದಾನೆ.

ನಾನು ಶರಣಾಗತನಾಗುವ ತೀರ್ಮಾನ ಕೈಗೊಂಡಿದ್ದೇನೆ. ಈ ವಿಷಯವನ್ನು ನೀವು ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳ ಮುಖ್ಯಮಂತ್ರಿಗಳಿಗೆ ತಿಳಿಸಿ ಎಂದು ನೆಡುಮಾರನ್‌ಗೆ ವೀರಪ್ಪನ್‌ ಕಳುಹಿಸಿರುವ ಕ್ಯಾಸೆಟ್‌ನಲ್ಲಿ ತಿಳಿಸಿದ್ದಾನೆ. ಈ ಸುದ್ದಿ ಬಹುತೇಕ ಎಲ್ಲ ತಮಿಳು ದೈನಿಕಗಳಲ್ಲೂ ಪ್ರಕಟವಾಗಿದೆ.

ಎದೆಗುಂದಿಲ್ಲ : ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳು ಜಂಟಿಯಾಗಿ ನಡೆಸುತ್ತಿರುವ ಕಾರ್ಯಾಚರಣೆಯಿಂದ ನಾನೇನು ಎದೆಗುಂದಿಲ್ಲ ಎಂದು ವೀರಪ್ಪನ್‌ ಕ್ಯಾಸೆಟ್‌ನಲ್ಲಿ ಸ್ಪಷ್ಟಪಡಿಸಿದ್ದಾನೆ. ಹಿಂದೆ ತನ್ನ ವಿರುದ್ಧ ಕಾರ್ಯಾಚರಣೆ ನಡೆದಾಗ ಕಾರ್ಯಪಡೆಯ ಸಿಬ್ಬಂದಿ ಗಿರಿಜನರ ಮೇಲೆ ದಬ್ಬಾಳಿಕೆ - ದೌರ್ಜನ್ಯ ನಡೆಸಿದ್ದರು. ಈಗಲೂ ಹಾಗೇ ಆಗುತ್ತದೆ. ಇದನ್ನು ತಪ್ಪಿಸಲು ನಾನು ಶರಣಾಗಲು ನಿರ್ಧರಿಸಿದ್ದೇನೆ ಎಂದು ವೀರಪ್ಪನ್‌ ತಿಳಿಸಿದ್ದಾನೆ.

ಕ್ಯಾಸೆಟ್‌ನಲ್ಲಿರುವ ವಿವರ ಇದು : ‘ಎರಡೂ ರಾಜ್ಯಗಳ ಮಾನ್ಯ ಮುಖ್ಯಮಂತ್ರಿಗಳಿಗೆ ನನ್ನ ನಮಸ್ಕಾರಗಳು... ಎಸ್‌.ಟಿ.ಎಫ್‌. ಹಾಗೂ ಬಿ.ಎಸ್‌.ಎಫ್‌. ಕಾರ್ಯಾಚರಣೆಗೆ ನಾನು ಹೆದರಿದ್ದೇನೆ ಎಂದು ತಿಳಿಯಬೇಡಿ. ಮಿಲಿಟರಿ ಕರೆಸಿಯೂ ನಿಮಗೆ ನನ್ನನ್ನು ಹಿಡಿಯಲಾಗಿಲ್ಲ. ಆದರೆ, ಗಿರಿಜನರಿಗೆ ತೊಂದರೆಯಾಯಿತು. ಅವರು ಕೊಲೆ - ಅತ್ಯಾಚಾರ ನಡೆಸಿದರು. ಈಗಲೂ ಹಾಗೇ ಆಗುತ್ತದೆ.

ನನ್ನಿಂದ ಈ ರೀತಿ ಗಿರಿಜನರಿಗೆ ಅನ್ಯಾಯ ಆಗುವುದನ್ನು ನ್ನು ಸಹಿಸೆ. ನೀವು ಒಮ್ಮತದಿಂದ ನನಗೆ ಕ್ಷಮಾದಾನ ನೀಡಲು ಸಮ್ಮತಿಸಿದರೆ, ನಾನು ಶರಣಾಗುವೆ. ಆದರೆ, ಈ ಪ್ರಕ್ರಿಯೆ ಸಾರ್ವಜನಿಕರ ಸಮಕ್ಷಮವೇ ನಡೆಯಬೇಕು. ಎಸ್‌ಟಿಎಫ್‌ ಹಾಗೂ ಬಿಎಸ್‌ಎಫ್‌ ಪಡೆ ನನ್ನನ್ನು ಹಿಡಿಯಲು ಕಾಡೆಲ್ಲಾ ಅಲೆಯುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಆದರೆ ಅವರ ಮೇಲೆ ದಾಳಿ ಮಾಡಿಲ್ಲ.

ನಾನೀಗ ಶಾಂತಿಯಿಂದಿರಲು ಬಯಸುತ್ತೇನೆ. ರಕ್ತ - ಹಿಂಸಾಚಾರ ನನಗೀಗ ಬೇಡವಾಗಿದೆ. ಶರಣಾಗುವ ನನ್ನ ತೀರ್ಮಾನದ ಬಗ್ಗೆ ನಿಮ್ಮ ಅಭಿಪ್ರಾಯವೇನೆಂದು ಸಂಧಾನಕಾರನ ಮೂಲಕ ತಿಳಿಸಿ. ಗೋಪಾಲ್‌ ತಂಡವಾದರೂ ಸರಿ. ಆದರೆ, ನೆಡುಮಾರನ್‌ ಹಾಗೂ 10 ಜನರ ತಂಡ ಕಳುಹಿಸಿದರೆ ಉತ್ತಮ. ನೀವು ನನ್ನೀ ಕೋರಿಕೆ ತಿರಸ್ಕರಿಸಿದರೆ, ನನ್ನ ರಕ್ಷಣೆಗಾಗಿ ನಾನು ಕಾರ್ಯಪಡೆಯ ಮೇಲೆ ದಾಳಿ ಮಾಡುತ್ತೇನೆ’. ಇದು ವೀರಪ್ಪನ್‌ ಕ್ಯಾಸೆಟ್‌ನಲ್ಲಿರುವ ಒಕ್ಕಣೆ.

ನೆಡುಮಾರನ್‌ ಒತ್ತಾಯ : ಗುರುವಾರ ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನೆಡುಮಾರನ್‌ ಕ್ಯಾಸೆಟ್‌ ವಿಷಯ ಬಹಿರಂಗಪಡಿಸಿರಲಿಲ್ಲ. ಆದರೆ, ವೀರಪ್ಪನ್‌ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆ ನಿಲ್ಲಿಸಿ, ಆತ ಕೋರಿರುವಂತೆ ಶರಣಾಗತನಾಗಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.

ವೀರಪ್ಪನ್‌ ಪ್ರಕರಣಕ್ಕೆ ಕಾರ್ಯಾಚರಣೆ ಪರಿಹಾರವಲ್ಲ. ವಿಶೇಷ ಕಾರ್ಯಪಡೆಗೆ ಈವರೆಗೆ 300 ಕೋಟಿ ರುಪಾಯಿ ಖರ್ಚು ಮಾಡಿದ್ದೀರಿ. ಇನ್ನೂ ಹಣ ಪೋಲು ಮಾಡದೆ, ವೀರಪ್ಪನ್‌ಗೆ ಕ್ಷಮಾದಾನ ನೀಡಿ ಎಂದು ಅವರು ತಮಿಳುನಾಡು ಸರಕಾರವನ್ನು ಒತ್ತಾಯಿಸಿದ್ದಾರೆ.

ಒಪ್ಪಲಾಗುವುದಿಲ್ಲ : ಈ ಮಧ್ಯೆ ವೀರಪ್ಪನ್‌ ಕ್ಷಮಾದಾನ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ತಮಿಳುನಾಡು ಪೊಲೀಸ್‌ ಮಹಾ ನಿರ್ದೇಶಕ ಎ. ರವೀಂದ್ರನಾಥ್‌ ಶರಣಾಗತಿಯನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮಹತ್ಕಾರ್ಯಕ್ಕೆ ತಮಿಳು ರಾಷ್ಟ್ರೀಯವಾದಿ ಚಳವಳಿ ನಾಯಕ ನೆಡುಮಾರನ್‌ ಮಧ್ಯಸ್ಥಿಕೆಯ ಅಗತ್ಯವೂ ಇಲ್ಲ ಎಂದು ಅವರು ನುಡಿದಿದ್ದಾರೆ. ಮಾನವೀಯತೆಯ ಪರಿವೆಯೇ ಇಲ್ಲದ ಕಾಡುಗಳ್ಳನೊಂದಿಗೆ ಮಾತುಕತೆ ನಡೆಸುವ ಪ್ರಸ್ತಾಪವನ್ನು ಅವರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ಇರುವವರು ಐವರೇ: ಸೇತುಕುಳಿ ಸೇರಿದಂತೆ ಈಗ ವೀರಪ್ಪನ್‌ ತಂಡದಲ್ಲಿ ಇರುವವರು ಕೇವಲ ಐವರು ಮಾತ್ರ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಡಾ. ಕೆ. ಶ್ರೀನಿವಾಸನ್‌ ತಿಳಿಸಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ವೀರಪ್ಪನ್‌ ಈಗ ಶಕ್ತಿಗುಂದಿದ್ದಾನೆ. ಅವನ ಪಡೆಯೂ ಕೃಶವಾಗಿದೆ ಎಂದು ಹೇಳಿದ್ದಾರೆ.

(ಇನ್‌ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X