ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಯುಪ್ರೆಶರ್‌: ಚಿಕಿತ್ಸೆ ಹಳತಾದರೂ ಪರಿಣಾಮ ಪ್ರಖರ,ನೋವುಗಳಿಗೆ ರಾಮಬಾಣ!

By Staff
|
Google Oneindia Kannada News

ಬೆಂಗಳೂರು : ಈತ ಜಾದೂ ಬೆರಳುಗಳ ಮಾಂತ್ರಿಕ ! ಬೆರಳುಗಳಿಂದ ನೋವನ್ನು ಉಪಶಮನಗೊಳಿಸುವ ಡಾ. ವಿನಯ್‌ ಸರ್ವೋತ್ತಮ್‌ ನಂಬಿರುವುದು ಆಧುನಿಕ ವೈದ್ಯಕೀಯ ವಿಜ್ಞಾನವನ್ನಲ್ಲ , ಪ್ರಾಚೀನ ಆಕ್ಯುಪ್ರೆಶರ್‌ ವಿಜ್ಞಾನವನ್ನು . ನೋವನ್ನು ಉಪಶಮನಗೊಳಿಸುವ ಅತ್ಯುತ್ತಮ ವಿಧಾನವೆಂದೇ ಆಕ್ಯುಪ್ರೆಶರ್‌ ಹೆಸರಾಗಿದೆ.

‘ನಾನು ಈ ಪದ್ಧತಿಯ ಮೂಲಕ ಕೇವಲ ರೋಗ ಚಿಕಿತ್ಸೆ ಮಾತ್ರ ಮಾಡುತ್ತಿಲ್ಲ , ಆಕ್ಯುಪ್ರೆಶರ್‌ ವಿಜ್ಞಾನದ ಸುತ್ತಲಿನ ಭ್ರಮೆಗಳನ್ನು ನಿವಾರಿಸಲು ಯತ್ನಿಸುತ್ತಿದ್ದೇನೆ’ ಎನ್ನುತ್ತಾರೆ ಡಾ. ವಿನಯ್‌. ಅಂದಹಾಗೆ ಅವರು ತರಬೇತಿ ಪಡೆದದ್ದು ಸಿಂಗಪೂರ್‌ನಲ್ಲಿ ನ ಆಕ್ಯುಪಂಕ್ಚರ್‌ ಹಾಗೂ ಆಕ್ಯುಪ್ರೆಶರ್‌ ಸಂಸ್ಥೆಯಲ್ಲಿ .

ರೋಗಿಯ ನೋವಿನ ಭಾಗವನ್ನು ಸ್ಪರ್ಶಿಸುವ ಮೂಲಕವೇ ರೋಗ ಗುಣಪಡಿಸುವುದು ವಿನಯ್‌ರ ಚಿಕಿತ್ಸೆಯ ವಿಶೇಷ. ಕೈ ಹಾಗೂ ಕಾಲುಗಳಿಗೆ ಸಂಬಂಧಿಸಿದ ಎಲ್ಲ ಬಗೆಯ ನೋವಿನ ರೋಗಗಳನ್ನು ಆಕ್ಯುಪ್ರೆಶರ್‌ ಗುಣಪಡಿಸಬಲ್ಲುದು. ರೋಗಿಗಳು ಆಕ್ಯುಪ್ರೆಶರ್‌ ಚಿಕಿತ್ಸೆಗೆ ಒಳಪಡುವುದಕ್ಕೆ ಯಾವುದೇ ರೀತಿ ಹಿಂಜರಿಯಬೇಕಿಲ್ಲ . ಮೂರ್ನಾಲ್ಕು ಸಲ ಚಿಕಿತ್ಸೆಗೆ ಒಳಗಾಗಿ ನೋವು ಇಳಿಮುಖವಾಗುವುದರಿಂದ ಚಿಕಿತ್ಸೆಯ ಬಗ್ಗೆ ಆತ್ಮ ವಿಶ್ವಾಸ ತಂತಾನೇ ಮೂಡುತ್ತದೆ ಎನ್ನುತ್ತಾರೆ ವಿನಯ್‌.

ಸಾಫ್ಟ್‌ವೇರ್‌ ತಜ್ಞರ ಆಕರ್ಷಿಸುತ್ತಿರುವ ಆಕ್ಯುಪ್ರೆಶರ್‌
ಕನಿಷ್ಠ 25 ಸಾರಿ ಆಕ್ಯುಪ್ರೆಶರ್‌ಗೊಳಗಾಗುವುದರಿಂದ ನೋವನ್ನು ಪೂರ್ಣವಾಗಿ ಗುಣಪಡಿಸಬಹುದು. ಕೆಲವು ಪ್ರಕರಣಗಳು ಮಾತ್ರ 40 ಸುತ್ತುಗಳಿಗೆ ಮುಂದುವರಿಯುತ್ತದಂತೆ. ದೈಹಿಕ ಶ್ರಮದಿಂದ ಉಂಟಾಗುವ ಕೆಲವು ನೋವುಗಳು ಹಾಗೂ ಮಾನಸಿಕ ಒತ್ತಡವನ್ನು ಕೂಡ ಆಕ್ಯುಪ್ರೆಶರ್‌ನಿಂದ ಗುಣಪಡಿಸಬಹುದು. ಮೆದುಳಿನ ಒತ್ತಡವನ್ನು ಕಡಿಮೆ ಮಾಡುವ ಈ ಚಿಕಿತ್ಸೆ ತಕ್ಷಣದ ಉಪಶಮನ ನೀಡುತ್ತದೆ. ಈ ಕಾರಣದಿಂದಲೇ ಒತ್ತಡದಿಂದ ನರಳುವ ಬಹಳ ಮಂದಿ ಅದರಲ್ಲೂ ಸಾಫ್ಟ್‌ವೇರ್‌ ತಜ್ಞರು ಆಕ್ಯುಪ್ರೆಶರ್‌ ಚಿಕಿತ್ಸೆಗೆ ಹೆಚ್ಚಿನ ಒಲವು ತೋರುತ್ತಿರುವುದು ಡಾ. ವಿನಯ್‌ರ ಅನುಭವಕ್ಕೆ ಬಂದಿದೆ.

ಆಕ್ಯುಪ್ರೆಶರ್‌ ಎಲ್ಲ ರೋಗಗಳನ್ನು ಗುಣಪಡಿಸುತ್ತದೆ ಎನ್ನುವ ಕೆಲವು ವೈದ್ಯರ ಹೇಳಿಕೆಗಳನ್ನು ವಿನಯ್‌ ಅಲ್ಲಗೆಳೆಯುತ್ತಾರೆ. ಅವರು ಹೇಳುವ ಪ್ರಕಾರ- ಚರ್ಮ ರೋಗಗಳು, ಶೀತ, ಜ್ವರ, ಕಣ್ಣಿನ ದೋಷ ಹಾಗೂ ಸ್ಥೂಲಕಾಯಕ್ಕೆ ಆಕ್ಯುಪ್ರೆಶರ್‌ನಲ್ಲಿ ಚಿಕಿತ್ಸೆಯಿಲ್ಲ . ಆದರೆ, ಸ್ಲಿಪ್‌ಡಿಸ್ಕ್‌ ಗೆ ಆಕ್ಯುಪ್ರೆಶರ್‌ ರಾಮಬಾಣ. ಆರ್ಥೈಟಿಸ್‌ ಗುಣಪಡಿಸಲಿಕ್ಕೆ ಸಾಧ್ಯವಿಲ್ಲ .

ಆಕ್ಯುಪ್ರೆಶರ್‌ ಚಿಕಿತ್ಸೆಯಲ್ಲಿ ರೋಲರ್‌ ಬಳಸುವ ಬಗ್ಗೆ ಡಾ. ವಿನಯ್‌ರಿಗೆ ನಂಬಿಕೆಯಿಲ್ಲ . ಅದರಿಂದಾಗಿ ತಾತ್ಕಾಲಿಕ ಉಪಶಮನವಷ್ಟೇ ಸಾಧ್ಯ ಎನ್ನುತ್ತಾರೆ. ಎಲ್ಲ ಬಗೆಯ ಹಳೆಯ ನೋವುಗಳನ್ನು , ಒತ್ತಡ ಸಂಬಂಧಿ ಕಾಯಿಲೆಗಳನ್ನು ಗುಣಪಡಿಸುವುದರಲ್ಲಿ ಅವರು ಎತ್ತಿದ ಕೈ.

ನಮಕೋಶಿ ಸ್ಟೈಲ್‌ನಲ್ಲಿ ನೋವಿನ ಉಪಶಮನ
ಮೊದಲಿಗೆ ರೋಗಿಯ ದೈಹಿಕ ಹಾಗೂ ಮಾನಸಿಕ ವ್ಯಕ್ತಿತ್ವಗಳನ್ನು ಅಂದಾಜು ಮಾಡುವುದರೊಂದಿಗೆ ಚಿಕಿತ್ಸೆ ಪ್ರಾರಂಭವಾಗುತ್ತದೆ. ರೋಗಿಯನ್ನು ಸ್ಟೂಲ್‌ ಮೇಲೆ ವೈದ್ಯರಿಗೆ ಹಿಮ್ಮುಖವಾಗಿ ಕೂರಲು ಹೇಳಲಾಗುತ್ತದೆ. ಆನಂತರ ಬೆನ್ನಿನ ಮೇಲೆ ಹೆಬ್ಬರಳನ್ನು ಕ್ರಮಬದ್ಧವಾಗಿ ಒತ್ತುವುದರಿಂದ ರೋಗಿಯ ದೇಹದಲ್ಲಿ ಚೈತನ್ಯ ಪ್ರವಹಿಸುವಿಕೆಗೆ ಅವಕಾಶವಾಗುತ್ತದೆ. ಇದರಿಂದಾಗಿ ತಕ್ಷಣವೇ ನೋವಿನ ಉಪಶಮನ ಕಾಣಿಸುತ್ತದೆ.

5000 ವರ್ಷಗಳ ಹಿಂದೆ ಭಾರತದಲ್ಲಿ ಕಾಣಿಸಿಕೊಂಡ ಆಕ್ಯುಪ್ರೆಶರ್‌ ಒಂದು ಪ್ರಾಚೀನ ವೈದ್ಯ ಪದ್ಧತಿ ಎನ್ನುವ ವಿನಯ್‌- ಚೀನೀಯರು ಈ ವಿಜ್ಞಾನದಲ್ಲಿ ಅದ್ವಿತೀಯರೆನ್ನುತ್ತಾರೆ. ಆಕ್ಯುಪ್ರೆಶರ್‌ ಚಿಕಿತ್ಸೆ ರೋಗದ ಉಪಶಮನಕ್ಕೆ ಸ್ವಲ್ಪ ಹೆಚ್ಚಿನ ಕಾಲಾವಕಾಶ ಬೇಡುತ್ತದಾದರೂ, ನೋವನ್ನು ಪೂರ್ಣವಾಗಿ ಗುಣಪಡಿಸುತ್ತದೆ. ಹೆಬ್ಬರಳಿನಿಂದ ಆಕ್ಯು ಪಾಯಿಂಟ್‌ಗಳನ್ನು ಲಯಬದ್ಧವಾಗಿ ಒತ್ತುವ ಶೈಲಿಗೆ ನಮಕೋಶಿ ಸ್ಟೈಲ್‌ ಎಂದು ಹೆಸರು.

ಡಾ. ವಿನಯ್‌ ಅವರನ್ನು ಮೆಡಿನೋವಾ, ಇನ್‌ಫ್ಯಾಂಟ್ರಿ ರಸ್ತೆ, ಬೆಂಗಳೂರು- ಈ ವಿಳಾಸದಲ್ಲಿ ಅಥವಾ ದೂರವಾಣಿ ಸಂಖ್ಯೆ 080- 5599782,5367702, 5541461 ಗಳಲ್ಲಿ ಸಂಪರ್ಕಿಸಬಹುದು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X