ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸವನಗುಡಿ ಕ್ಷೇತ್ರದ ಶಾಸಕರ ಗ್ರಹಚಾರ ಬಿಡಿಸಿದ ಉದಯ ಟೀವಿ

By Staff
|
Google Oneindia Kannada News

(ವಿಶೇಷ ವರದಿ)
ಬೆಂಗಳೂರು : ನೀವು ಗೆದ್ದು, ಒಂದೂವರೆ ವರ್ಷವೇ ಕಳೆಯಿತು. ಈವರೆಗೆ ನೀವು ಕ್ಷೇತ್ರಕ್ಕೆ ಮಾಡಿರುವುದೇನು? ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆಯಂತಹ ಮೂಲಭೂತ ಸೌಕರ್ಯಗಳ ಬಗ್ಗೆಯಾದರೂ ಯೋಚಿಸಿದ್ದೀರಾ? ಸುಮ್ಮನೆ ಪ್ರಚಾರಗಿಟ್ಟಿಸಿದರೆ, ಸಾಲದು, ಕೆಲಸ ಮಾಡಿ ಎಂದು ಬಸವನಗುಡಿಯ ಪ್ರಜ್ಞಾವಂತ ಮತದಾರರು ತಮ್ಮ ಕ್ಷೇತ್ರದ ಶಾಸಕರಾದ ನ್ಯಾಯವಾದಿ ಕೆ.ಎನ್‌. ಸುಬ್ಬಾರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು.

ನಮ್ಮ ಶಾಸಕರು ಕ್ಷೇತ್ರಕ್ಕೆ ಆಗಾಗ್ಗೆ ಭೇಟಿ ಕೊಡುತ್ತಾರೆ. ಆದರೆ, ಯಾರನ್ನೂ ಭೇಟಿ ಮಾಡುವುದಿಲ್ಲ, ನಮ್ಮ ಗೋಳು ಕೇಳುವುದಿಲ್ಲ. ಸುಮ್ಮನೆ ಕಾರಿನಲ್ಲಿ ಕುಳಿತು ಹಾಗೇ ಕಣ್ಣು ಹಾಯಿಸಿ ಕಣ್ಮರೆಯಾಗುತ್ತಾರೆ ಎಂದು ಮತದಾರರು ಆರೋಪಿಸಿದರು. ಕೊಚ್ಚೆಗುಂಡಿಯಾಗಿರುವ ರಸ್ತೆಗಳು, ಮಳೆ ಬಂದಾಗ ಪ್ರವಾಹದಂತೆ ತುಂಬಿ ಹರಿದು ಕಾಡುವ ಒಳಚರಂಡಿ, ಬಾಗಿಲು ಕಿಟಕಿ ಇಲ್ಲದ ಶಾಲೆ, ಶುಚಿತ್ವದ ಪರಿಚಯವೇ ಇಲ್ಲದೆ ಗಬ್ಬುನಾಥ ಬೀರುವ ಸರಕಾರಿ ಶಾಲೆ- ಕಾಲೇಜಿನ ಶೌಚಾಲಯ ಎಲ್ಲವೂ ಕ್ಷೇತ್ರದ ಶಾಸಕರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು.

ಭಾರತೀಯ ಜನತಾಪಕ್ಷದಿಂದ ಬಸವನಗುಡಿ ಕ್ಷೇತ್ರದಿಂದ ಗೆದ್ದುಬಂದ ಶಾಸಕ ಸುಬ್ಬಾರೆಡ್ಡಿ ಅವರೊಂದಿಗೆ ಕ್ಷೇತ್ರವನ್ನು ಒಂದು ಸುತ್ತು ಹಾಕಿದ ಉದಯ ಟೆಲಿವಿಷನ್‌ ಚಾನೆಲ್‌, ತನ್ನ ‘ಜನಪ್ರತಿನಿಧಿ’ ಕಾರ್ಯಕ್ರಮದಲ್ಲಿ ಈ ಕ್ಷೇತ್ರದ ಎಲ್ಲ ಸಮಸ್ಯೆಗಳನ್ನೂ ತೆರೆದಿಟ್ಟಿತು. ಬಿ.ಜೆ.ಪಿಯ ಕಾರ್ಯಕರ್ತರೇ ಟೀವಿ ಕ್ಯಾಮರಾ ಎದುರು ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ಭಾನುವಾರ ರಾತ್ರಿ 9.30ಕ್ಕೆ ಈ ಕಾರ್ಯಕ್ರಮ ಪ್ರಸಾರವಾಯಿತು.

ನಾವೇನು ನಿಮ್ಮನ್ನು ಸೀರೆ, ಜಾಕೀಟು ತೆಗೆದುಕೊಡಿ ಎಂದು ಕೇಳಿದೆವೇ? ರಸ್ತೆ ಸರಿ ಮಾಡ್ಸಿ, ಕುಡಿಯಲು ನೀರು ಕೊಡಿ, ಮಳೆ ಬಂದಾಗ ಮನೆಗೆ ನುಗ್ಗುವ ಒಳಚರಂಡಿ ನೀರನ್ನು ತಡೆಯಲು ಕ್ರಮ ಕೈಗೊಳ್ಳಿ, ಇಷ್ಟು ಮಾಡಲು ಆಗದಿದ್ದರೆ, ಶಾಸಕರಾಗಿ ಏಕೆ ಇದ್ದೀರಿ ಎಂಬ ನೇರ ಪ್ರಶ್ನೆ. ಶಾಸಕರಿಂದ ಜಾರಿಕೆ ಉತ್ತರ.

ಹದಗೆಟ್ಟ ಪಾರ್ಕ್‌ : ಕೆ.ಆರ್‌. ರಸ್ತೆಯಲ್ಲಿರುವ ಎಂ.ಎನ್‌. ಕೃಷ್ಣರಾವ್‌ ಪಾರ್ಕ್‌ ಅಂತೂ ಸಂಪೂರ್ಣ ಹಾಳಾಗಿ ಹೋಗಿದೆ. ನಾಯಿ ನರಿಗಳ ಕೊಂಪೆಯಾಗಿದೆ. ಹತ್ತಾರು ವರ್ಷದಿಂದ ಬಸವನಗುಡಿ ಜನತೆಯ ಹೃದಯದಂತಿದ್ದ ಈ ಪಾರ್ಕ್‌ ಇಂದು ಕೊಚ್ಚೆಗುಂಡಿ, ಕಸದಕುಪ್ಪೆಯಾಗಿದೆ. ಕುಳಿತುಕೊಳ್ಳಲು ಒಂದು ಸರಿಯಾದ ಕಲ್ಲುಬೆಂಚಿಲ್ಲ.

ಮಳೆ ಬಂದರಂತೂ ಪಾರ್ಕ್‌ ಕೊಚ್ಚೆಗುಂಡಿಯಾಗುತ್ತದೆ. ಮಕ್ಕಳು ಆಡುವ ಜಾರುಬಂಡೆಯೆಲ್ಲಾ ಕಿತ್ತುಹೋಗಿದೆ. ಈ ವಿಷಯ ಶಾಸಕರಿಗೆ ತಿಳಿಯದ್ದೇನಲ್ಲ. ಹೇಳಿ ಕೇಳಿ ನ್ಯಾಯವಾದಿಗಳಾದ ಶಾಸಕರು, ಈ ಪಾರ್ಕ್‌ ಉಳಿಸಿ ಎಂದು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಂದನ್ನು ಗುಜರಾಯಿಸಿ ತೆಪ್ಪಗಾಗಿದ್ದಾರೆ. ಹೀಗೆ ಬರೀ ಪ್ರಚಾರಕ್ಕೆ ಕೆಲಸ ಮಾಡಿದರೆ ಹೇಗೆ? ಕ್ಷೇತ್ರದ ಬಗ್ಗೆ ಗಮನಕೊಟ್ಟು ದುಡಿಯಲಿ ಎಂಬುದು ಮತದಾರರ ಅಳಲು.

ನೋಡಿ ಸ್ವಾಮಿ ಪಕ್ಕದ ಹನುಮಂತನಗರದಲ್ಲಿ ಕರ್ನಾಟಕಕ್ಕೆ ಮಾದರಿಯಾದ ಸುಂದರ ಉದ್ಯಾನ ಇದೆ. ಶಾಸಕರ ಸಹಾಯವೇ ಇಲ್ಲದೆ, ಕೇವಲ ನಗರಪಾಲಿಕೆ ಸದಸ್ಯರಾದ ಚಂದ್ರಶೇಖರ್‌ ಎಷ್ಟು ಚೆನ್ನಾಗಿ ಪಾರ್ಕ್‌ ಮೇಂಟೇನ್‌ ಮಾಡಿದ್ದಾರೆ. ಒಬ್ಬ ಪಾಲಿಕೆ ಸದಸ್ಯರಿಂದ ಆಗುವ ಕೆಲಸ ಶಾಸಕರಿಂದ ಏಕೆ ಆಗಲ್ಲ ಎನ್ನುವ ಪ್ರಶ್ನೆ ಮತದಾರರದ್ದು.

ಶ್ರೀನಗರದ ಜನತೆಯಂತೂ ಬಿ.ಜೆ.ಪಿಯ ಶಾಸಕರು ಹಾಗೂ ಅದೇ ಪಕ್ಷದ ನಗರಪಾಲಿಕೆ ಸದಸ್ಯರ ನಿರ್ಲಕ್ಷ್ಯದ ವಿರುದ್ಧ ಕಿಡಿ ಕಾರಿದರು. ಟಿ.ಆರ್‌. ಶಾಮಣ್ಣ ಕೊಳಗೇರಿಯ ಜನತೆ, ಈ ಹಿಂದೆ ಕುಸಿದುಬಿದ್ದ, ಕಟ್ಟಡದ ಜಾಗದಲ್ಲಿಯೇ ಕಟ್ಟುತ್ತಿರುವ ಕಟ್ಟಡ ಹಾಗೂ ಚರಂಡಿ ಮೇಲಿನ ಸೇತುವೆಯ ಕಳಪೆ ಕಾಮಗಾರಿ ಬಗ್ಗೆ ಶಾಸಕರನ್ನು ಹಳಿದರು. ಇಲ್ಲಿನ ರಸ್ತೆಗಳ ಕಸ ಗುಡಿಸಿ ತಿಂಗಳುಗಳೇ ಕಳೆದಿವೆ ಎಂದರು.

ನಾಡಪ್ರಭು ಕೆಂಪೇಗೌಡರು ಕಟ್ಟಿಸಿದ ಕೆಂಪಾಂಬುಧಿ ಕೆರೆಯ ದುರವಸ್ಥೆ, ಸೊಳ್ಳೆಗಳ ಕಾಟ, ಹಾಳಾದ ರಸ್ತೆ, ಉದ್ಯಾನ, ಖಾಲಿ ಕೊಡಗಳು, ಹದಗೆಟ್ಟ ಸರ್ಕಾರಿ ಶಾಲೆ ಕಾಲೇಜುಗಳ ಸಮ್ಯಕ್‌ನೋಟ ನ್ಯಾಯವಾದಿಗಳೂ ಆದ ಶಾಸಕರಿಂದ ಮತದಾರರಿಗೆ ನ್ಯಾಯಸಿಕ್ಕೀತೆ ಎಂದು ಪ್ರಶ್ನಿಸುತ್ತಿದ್ದವು. ಛಾವಣಿಯೇ ಕುಸಿಯುತ್ತಿರುವ ಪಾಲಿಕೆಯ ಬಾಲಕಿಯ ಪದವಿಪೂರ್ವ ಕಾಲೇಜು, ನೀರೇ ಇಲ್ಲದ, ದುರ್ನಾತ ಬೀರುವ ಶೌಚಾಲಯ, ಮುರಿದ ಬೆಂಚು, ಕುರ್ಚಿ, ಬಾಗಿಲೇ ಇಲ್ಲದ ಶಾಲೆಯನ್ನು ಶಾಸಕರು ನೋಡಿದ್ದೇ ಈ ಕಾರ್ಯಕ್ರಮದ ದಿನ ಎನ್ನುವುದು ಸ್ಪಷ್ಟವಾಗಿತ್ತು. ಒಟ್ಟಾರೆಯಾಗಿ ಈ ಕ್ಷೇತ್ರದ ಮತದಾರರು ಹೇಳಿದ್ದು, ನಮ್ಮ ಶಾಸಕರು ಈ ಕ್ಷೇತ್ರಕ್ಕೆ ಏನೂ ಮಾಡಿಲ್ಲ ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X