ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2000 ಶಾಲೆ ಮುಚ್ಚದಂತೆ 11 ವರ್ಷದಬಾಲಕನ ಏಕಾಂಗಿ ಹೋರಾಟ

By Staff
|
Google Oneindia Kannada News

ಬೆಂಗಳೂರು : ಬೆಂಗಳೂರಿನ ಗಾಂಧಿ ಪ್ರತಿಮೆ ಬಳಿ ವಿನೂತನವಾದ್ದೊಂದು ಪ್ರತಿಭಟನೆ. ಸ್ಕೂಲ್‌ ಈಸ್‌ ಅವರ್‌ ಟೆಂಪಲ್‌, ಡೋಂಟ್‌ ಕ್ಲೋಸ್‌ ಇಟ್‌, ನೋ ಟು ಸ್ಕೂಲ್‌ ಷೇಮ್‌ ಷೇಮ್‌, ಎಸ್‌ ಟಿ ಬಿಯರ್‌ ಬ್ಯಾಡ್‌ ಬ್ಯಾಡ್‌, ಶಾಲೆ ಮುಚ್ಚಿ ವಿದ್ಯಾರ್ಥಿಗಳನ್ನು ಬಲಿ ಕೊಡಬೇಡಿ ಎಂಬಿತ್ಯಾದಿ ಫಲಕಗಳ ನಡುವೆ ಪುಟ್ಟ ಬಾಲಕನೊಬ್ಬ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದ.

ವಿದ್ಯಾರ್ಥಿಗಳ ಕೊರತೆ ಇರುವ 2000 ಶಾಲೆಗಳನ್ನು ಮುಚ್ಚುವುದಾಗಿ ಮೊದಲು ಹೇಳಿಕೆ ನೀಡಿ ಆನಂತರ ವಿಲೀನದ ಮಾತನಾಡಿದ ರಾಜ್ಯದ ಶಿಕ್ಷಣ ಸಚಿವ ವಿಶ್ವನಾಥ್‌ ಹೇಳಿಕೆಯನ್ನು ಸೈನಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಟಿ.ಎಂ. ಸೋಮನಾಥ್‌ ಜೋಷಿ ಧರಣಿ ನಡೆಸುವ ಮೂಲಕ ಖಂಡಿಸಿದ. ಅಂಗಡಿಗಳಲ್ಲಿ ಬಿಯರ್‌ ಮಾರುವ ಸರಕಾರ ಶಾಲೆ ಮುಚ್ಚುವ ನಿರ್ಧಾರ ಕೈಗೊಂಡಿದ್ದು ಈ ಪುಟ್ಟ ಬಾಲಕನನ್ನೂ ರೊಚ್ಚಿಗೆಬ್ಬಿಸಿತ್ತು.

ಈ ಬಾಲಕನೇನೂ ಸಾಮಾನ್ಯನಲ್ಲ. ಅಮೆರಿಕದ ಈಗಿನ ಅಧ್ಯಕ್ಷರಾದ ಜಾರ್ಜ್‌ ಬುಷ್‌ರಿಗೇ ಚುನಾವಣೆ ಖರ್ಚಿಗೆ ಹಣ ಕೊಟ್ಟ ಭೂಪ, ಫ್ರಾನ್ಸ್‌ನಲ್ಲಿ ದೇವಾಲಯ ಕಟ್ಟಲು ಅನುಮತಿ ನೀಡಿದ ಫ್ರಾನ್ಸ್‌ ಅಧ್ಯಕ್ಷರಿಗೆ ಪತ್ರ ಬರೆದು ಅಭಿನಂದಿಸಿ, ಫ್ರಾನ್ಸ್‌ನಲ್ಲಿ ದೇಗುಲ ಕಟ್ಟುವ ಬದಲು, ಭಾರತದಲ್ಲಿ ಒಂದೆರಡು ಒಳ್ಳೆ ಶಾಲೆ ಕಟ್ಟುವಂತೆ ಅಲ್ಲಿನ ಭಾರತೀಯರಿಗೆ ಸಲಹೆಕೊಟ್ಟ ಶೂರ.

ಜಗತ್ತಿನ ಬಡತನಕ್ಕೆ ಅನಕ್ಷರತೆಯೇ ಕಾರಣ ಎಂಬ ತತ್ವವನ್ನು ವಿಶ್ವಸಂಸ್ಥೆ ಕಾರ್ಯದರ್ಶಿ ಕೋಫಿ ಅನ್ನಾನ್‌ರಿಗೇ ತಿಳಿಸಿಕೊಟ್ಟ ಧೀರ. ಎಲ್ಲ ರಾಷ್ಟ್ರಗಳಲ್ಲೂ ಎಲ್ಲರಿಗೂ ಮೂಲಭೂತ ಶಿಕ್ಷಣ ದೊರಕುವಂತೆ ನಿರ್ದೇಶನ ನೀಡಬೇಕು ಎಂದು ಅನ್ನಾನ್‌ರಿಗೇ ಪತ್ರ ಬರೆದು ಪ್ರಾರ್ಥಿಸಿದ ವಿಶ್ವದ ಕಳಕಳಿಯುಳ್ಳ ಪೋರ.

ಅಲಸೂರಿನ ಅನಿತಾ ಹಾಗೂ ನರಸಿಂಹ ಮೂರ್ತಿ ಅವರ ಮಗನಾದ ಸೋಮನಾಥ ಕಳೆದ ವರ್ಷ ಅಮೆರಿಕಾ ಚುನಾವಣೆಯ ಸಂದರ್ಭದಲ್ಲಿ ಜಾರ್ಜ್‌ ಬುಷ್‌ರ ಚುನಾವಣೆ ಖರ್ಚಿಗೆ 5 ಡಾಲರ್‌ ಕಳಿಸಿದ್ದ. ಬುಷ್‌ ಅವರು ತಮ್ಮ ಬಗ್ಗೆ ಇಟ್ಟಿರುವ ಕಾಳಜಿಗೆ ಬಾಲಕನನ್ನು ಅಭಿನಂದಿಸಿ, ಈ ಹಣವನ್ನು ಪುಸ್ತಕ ಕೊಳ್ಳಲು ಬಳಸು, ವಿದ್ಯಾಭ್ಯಾಸ ಮುಖ್ಯ ಎಂದು ಪತ್ರ ಬರೆದಿದ್ದರು. ಈಗ ಸೋಮನಾಥ ರಾಜ್ಯ ಸರಕಾರ 2000 ಶಾಲೆ ಮುಚ್ಚುವ ಸಂಬಂಧ ನೀಡಿರುವ ಹೇಳಿಕೆಯ ವಿರುದ್ಧ ಸಿಡಿದೆದ್ದು ನಿಂತಿದ್ದಾನೆ. ಹೋರಾಟದ ಹಾದಿ ಹಿಡಿದಿದ್ದಾನೆ.

ಹತ್ತಿರದಲ್ಲಿ ಶಾಲೆಗಳು ಇಲ್ಲದಿದ್ದರೆ, ಮತ್ತಷ್ಟು ಹುಡುಗರು ಶಾಲೆ ಬಿಡುತ್ತಾರೆ. ಹೀಗಾಗಿ ಸರಕಾರ ತನ್ನ ಈ ನಿರ್ಧಾರವನ್ನು ಪುನರ್‌ ಪರಿಶೀಲಿಸಬೇಕು ಎಂಬುದು ಈತನ ಆಗ್ರಹ. ವಿಜ್ಞಾನಿ ರಾಜಾ ರಾಮಣ್ಣ ಅವರ ವಿನಾ ಮತ್ತಾರೂ ಸರ್ಕಾರದ ಈ ನಿರ್ಧಾರವನ್ನು ಖಂಡಿಸಿಲ್ಲ. ವಸ್ತು ಸ್ಥಿತಿ ಹೀಗಿರುವಾಗ, ಬಾಲಕನ ಈ ಕಳಕಳಿ ಮೆಚ್ಚತಕ್ಕಂಥದ್ದೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X