• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೆಲದ ಸಿರಿಯ ನೋಡಿಲ್ಲಿ

By ವಿಶಾಖ ಎನ್‌
|

ದಿನೇದಿನೇ ಎಗ್ಗಿಲ್ಲದೆ ವ್ಯಾಪಾರಿ ಕೇಂದ್ರವಾಗಿ ಬೆಳೆಯುತ್ತಾ, ಬಾಡಿಗೆ ಮನೆಯಲ್ಲಿ ಕಂಡ ಕನಸಿನರಮನೆಯ ನನಸಾಗಿಸಲು ಬೆಂಗಳೂರು ನಗರದಿಂದ ಗುಳೇ ಹೊರಟವರ ಕೈಬೀಸಿ ಕರೆಯುತ್ತಾ ಈ ತಾಲ್ಲೂಕು ಉದ್ದಗಲ ಬೆಳೆಯುತ್ತಲೇ ಇದೆ. ಡಾಬಾಗಳು, ಸಾಮಿಲ್ಲುಗಳು, ಕಾರ್ಖಾನೆಗಳನ್ನೇ ಕಣ್ಣಿಗೆ ರಾಚಿಸಿದರೂ, ಒಡಲಲ್ಲಿ ಸುಂದರವಾದ ಪ್ರಾಚೀನ ದೇವಾಲಯಗಳನ್ನಿಟ್ಟುಕೊಂಡಿದೆ. ಇದೇ ನೆಲಮಂಗಲ.

ಬೆಂಗಳೂರನ್ನು ಎಡವಿದರೆ (27 ಕಿ.ಮೀ.) ಸಿಗುವ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 4 (ಬೆಂಗಳೂರು- ಪೂನಾ) ಹಾಗೂ 48 (ಬೆಂಗಳೂರು- ಮಂಗಳೂರು) ರ ಜಂಕ್ಷನ್‌. ಕಣ್ಣಿಗೆ ಅಷ್ಟೇನೂ ವಿಶೇಷವಾಗಿ ಕಾಣದಿದ್ದರೂ ತನ್ನೊಳಗೆ ಸಿಹಿ ಹೂರಣ ಹುದುಗಿಸಿಟ್ಟಿಕೊಂಡಿದೆ ಈ ತಾಲ್ಲೂಕು. ಹೆದ್ದಾರಿ ಬದಿಯಲ್ಲಿರುವ ಕಾರಣಕ್ಕಾಗೇ ವಾಣಿಜ್ಯ ಕ್ಷೇತ್ರದಲ್ಲಿ ಬೆಳೆಯುತ್ತಿದೆ, ಮತ್ತೊಂದು ಬದಿಯಲ್ಲಿ ಸೊಗಡ ಮಾಸಿಕೊಂಡು ಸೊರಗುತ್ತಿದೆ. ಎಷ್ಟೋ ಉಳುವ ಯೋಗಿಗಳು ಇವತ್ತು ರಿಯಲ್‌ ಎಸ್ಟೇಟು, ಚೀಟಿ (ಅ) ವ್ಯವಹಾರಕ್ಕೆ ಇಳಿದುಬಿಟ್ಟಿದ್ದಾರೆ. ಜಮೀನನ್ನು ಬಡಾವಣೆಯಾಗಿಸು, ನಿವೇಶನಗಳ ಮಾರು ಎಂಬುದು ಇವರ ತಾರಕ ಮಂತ್ರವಾಗುತ್ತಿದೆ.

ಹೇಗಿತ್ತು ಹೇಗಾಯ್ತು ಗೊತ್ತಾ ?

ಹದಿನೈದು ವರ್ಷಗಳ ಹಿಂದಿನ ಮಾತು. ಆಗ ಹೆದ್ದಾರಿಗಳ ಸಂಪರ್ಕಿಸಲು ಬೈಪಾಸ್‌ ರಸ್ತೆಗಳಿರಲಿಲ್ಲ. ಸಾಮಿಲ್ಲುಗಳೂ ಎಲ್ಲೋ ಅಲ್ಲೊಂದು ಇಲ್ಲೊಂದು ಇದ್ದವು. ಡಾಬಾ ಹೆಸರೇ ಆಗ ಅಪರಿಚಿತ. ಇಂದು ನೆಲಮಂಗಲ ಅಂದರೆ ಡಾಬಾಗಳ ತಾಣ ಅನ್ನುವಂತಾಗಿಬಿಟ್ಟಿದೆ. ಉತ್ತರ ಭಾರತದ ಮಂದಿಯೂ ಇಲ್ಲಿಗೆ ಬಂದು ಸಾಮಿಲ್ಲು, ಜವಳಿ ವಗೈರೆ ವ್ಯಾಪಾರ ಶುರುವಿಟ್ಟುಕೊಂಡಿದ್ದಾರೆ. ಸರ್ಕಾರಿ ಶಾಲೆ- ಕಾಲೇಜು ಬಿಟ್ಟು ಇನ್ನೊಂದು ವಿದ್ಯಾಸಂಸ್ಥೆ ಇಲ್ಲದ ನೆಲಮಂಗಲ ಪಟ್ಟಣದಲ್ಲಿ ಇವತ್ತು ಎರಡು- ಮೂರು ಪದವಿ ಪೂರ್ವ ಕಾಲೇಜುಗಳೆದ್ದಿವೆ. ಕಾನ್ವೆಂಟುಗಳೂ ಬೇರೂರಿವೆ. ಬೇಲಿ ಮಠ ಒಂದು ಎಂಜಿನಿಯರಿಂಗ್‌ ಕಾಲೇಜನ್ನೂ ತೆರೆದಿದೆ. ಪಾಲಿಟೆಕ್ನಿಕ್ಕು ಕಾಲೇಜೂ ಉಂಟು. ಇವೆಲ್ಲಾ ತಲೆ ಎತ್ತಿದ್ದು ಬೈಪಾಸ್‌ ರಸ್ತೆಯ ನಿರ್ಮಾಣದ ನಂತರವೇ.

ವಿಠ್ಠಲ ವಿಠ್ಠಲ ಪಾಂಡುರಂಗ : ಈ ಎಲ್ಲಾ ಬದಲಾವಣೆಗಳೊಟ್ಟಿಗೆ ತಲೆ ಎತ್ತಿದ್ದು ವಿಜಯ ವಿಠ್ಠಲನ 36 ಅಡಿ ಎತ್ತರದ ಮೂರ್ತಿ. ನೆಲಮಂಗಲಕ್ಕೆ 4 ಕಿ.ಮೀ. ಮುನ್ನವೇ ಅರಿಶಿನಕುಂಟೆ ಬಳಿಯಲ್ಲಿ ಭದ್ರಗಿರಿ ಕೇಶವದಾಸರು ವಿದೇಶಗಳಿಂದ ನಿಧಿ ಸಂಗ್ರಹಿಸಿ ಕಟ್ಟಿದ ದೇಗುಲವಿದು. ಈ ದೇವಾಲಯ ನಿರ್ಮಾಣದಿಂದ ತಾಲ್ಲೂಕು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಂಡಿತು. ವಿಠ್ಠಲನ ತಾಣದಲ್ಲಿ ಈಗ ಈ ಮೂರ್ತಿ ಆಕರ್ಷಣೆಯಾಗಿ ಉಳಿದಿಲ್ಲ. ಇದೇ ಆವರಣದಲ್ಲಿ ಅದರ ಬಗಲಲ್ಲೇ ಎದ್ದಿರುವ ಶ್ರೀಕೃಷ್ಣನ ವಿಶ್ವರೂಪ ದರ್ಶನ ಬಿಂಬಿಸುವ ಭಗವದ್ಗೀತಾ ಮಂದಿರ ಈಗ ಸೌಂದರ್ಯದ ಕಲೆ- ಸೆಲೆ. ಮಂದಿರದ ಒಳ- ಹೊರ ಗೋಡೆಯಲ್ಲಿ ಗ್ರೆನೈಟ್‌ ಕಲ್ಲಿನ ಮೇಲೆ ಭಗವದ್ಗೀತಾ ಶ್ಲೋಕಗಳನ್ನು ಕೆತ್ತಲಾಗಿದೆ. ಈ ತಾಣದಲ್ಲಿ ಹನುಮಂತ, ಗಣೇಶನ ಮಂದಿರಗಳೂ ಉಂಟು. ವಿಠ್ಠಲ ಮೂರ್ತಿ ಸುತ್ತ ಅಷ್ಟಲಕ್ಷ್ಮಿಯರನ್ನು ಪ್ರತಿಷ್ಠಾಪಿಸಲಾಗಿದೆ.

ಚೋಳರ ಮುಕ್ತಿನಾಥೇಶ್ವರ ನೋಡಬನ್ನಿ : ವಿಠ್ಠಲನ ತಾಣದಿಂದ ಕಾಲ್ನಡಿಗೆಯಲ್ಲೇ ಹೋಗಬಹುದಾದ ಮತ್ತೊಂದು ಐತಿಹಾಸಿಕ ಆಕರ್ಷಣೆ ಮುಕ್ತಿ ನಾಥೇಶ್ವರ ದೇವಾಲಯ. ಭಿನ್ನಮಂಗಲದ ಈ ದೇವಾಲಯ ಚೋಳರ ಕಾಲದಲ್ಲಿ ನಿರ್ಮಿತವಾಗಿದೆ (ಕ್ರಿ.ಶ. ಸುಮಾರು 1610). ತಾಲ್ಲೂಕಿನ ಅತ್ಯಂತ ಪ್ರಾಚೀನ ದೇವತಾಣಗಳಲ್ಲಿ ಒಂದಾದ ಇದು ಪ್ರತಿ ಶಿವರಾತ್ರಿಯ ದಿನ ವಿಶೇಷ ಪೂಜೆಗಳೊಂದಿಗೆ ಕಳೆಗಟ್ಟುತ್ತದೆ. ಹಸುರ ಸಿರಿಯ ನಡುವಿನ ಈ ದೇವಾಲಯ ವೈಭವ ಮೆರೆಯದಿದ್ದರೂ ಕಲಾ ಸಿರಿಯ ಬಿಂಬವಾಗಿದೆ.

ಯಾರೀ ವಿಜಯ? : ಇತಿಹಾಸದ ಪುಟಗಳಲ್ಲಿ ಮಹತ್ವದ ಸ್ಥಾನ ಪಡೆದಿರುವ ನೆಲಮಂಗಲ ತಾಲ್ಲೂಕಿನ ಮತ್ತೊಂದು ಸ್ಥಳ ಮಣ್ಣೆ. ಗಂಗರ ಮತ್ತು ರಾಷ್ಟ್ರಕೂಟರ ಪ್ರಬಲ ನೆಲೆಯಾಗಿದ್ದ ಈ ಊರು ಮಾನ್ಯಪುರ ಎಂದು ಗುರ್ತಿಸಿಕೊಂಡಿತ್ತು. ಇಲ್ಲಿ ಶ್ರೀ ವಿಕ್ರಮನ ತಾಮ್ರ ಶಾಸನ ದೊರೆತಿದ್ದು (ಕ್ರಿ.ಶ.650), ಇತಿಹಾಸದ ಪುಟದಲ್ಲಿ ನೆಲಮಂಗಲವನ್ನು ಕಳೆಗಟ್ಟಿಸುವಂಥಾ ಮಾಹಿತಿ ಹೊರಹಾಕಿದೆ. ನೃಪತುಂಗನ ಅಭಿಮತದಂತೆ ಶ್ರೀವಿಜಯನು ಕವಿರಾಜ ಮಾರ್ಗ ರಚಿಸಿದ ಎಂಬುದು ನಿರ್ಧಾರಿತವಾದ ವಿಷಯ. ಈ ಶ್ರೀವಿಜಯ ಇಲ್ಲಿಯವನಿರಬಹುದೆ? ಎಂಬ ಅನುಮಾನ ಕೆಲವು ಇತಿಹಾಸಕಾರರಿಗಿದೆ. ರಂಗಭೋಗದ ಪ್ರಥಮ ಉಲ್ಲೇಖ ಈ ಊರಿನ ಶಾಸನದಲ್ಲಿದೆ. ಈ ನಂಬುಗೆ ಹುಟ್ಟುಹಾಕಿರುವುದು ಈ ಶಾಸನವೇ. ಜಿನಾಲಯ ಅಥವಾ ಸೂಳೆಯರ ದೇವಾಲಯವನ್ನು ಒಮ್ಮೆ ನೋಡಿ ಬಂದು, ಮಾತಾಡಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nelamangala : Changing life styles of a karnataka taluk
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more