ಸಚಿನ್ ಆಡುವ ಭಾರದ ದಾಂಡುಮಾಡುವವರ್ಯಾರು?
ನವದೆಹಲಿ : ಒಂಡೇ ಕ್ರಿಕೆಟ್ಟಿನಲ್ಲಿ ಮೊನ್ನೆಯಷ್ಟೇ ಟೆನ್‌ಥೌಸಂಡೂಲ್ಕರ್ ಆದ ಸಚಿನ್ ಯಶಸ್ಸಿನ ಹಿಂದಿನ ಕೈಗಳಾವುವು. ಆತನ ಅಪ್ಪ , ಕೋಚ್, ಪಾಠ ಹೇಳುತ್ತಿದ್ದ ಮೇಷ್ಟ್ರು ? ಅಷ್ಟ್ಯಾಕೆ, ಆತನ ಪುಟ್ಟ ಸಂಸಾರವೂ ಇರಬಹುದು. ಆದರೆ ಇವರೆಲ್ಲರಿಗಿಂತ ಮುಖ್ಯವಾಗಿ ಸದ್ದಿಲ್ಲದೆ ಪಂಜಾಬಿನ ಪುರುಷರ ಗುಂಪೊಂದು ಈತನ ಯಶಸ್ಸಿಗೆ ಪರೋಕ್ಷ ಕಾರಣವಾಗಿದೆ. ಅದರಲ್ಲೂ 47ರ ಹರೆಯದ ಮೆಹಂಗಾ ರಾಮ್‌ಗೆ ತೆಂಡೂಲ್ಕರ್ ಕೂಡ ಶಹಭಾಸ್ ಹೇಳಬೇಕು. ಯಾಕೆ ಅಂದಿರಾ?
ವಿಶ್ವದ ಅಗ್ರಮಾನ್ಯ ಬೌಲರ್‌ಗಳ ಎಸೆತಗಳನ್ನು ತೆಂಡೂಲ್ಕರ್ ದಂಡಿಸಲು ಬಳಸುವ ಭಾರವಾದ ದಾಂಡು ಮಾಡುವ ವ್ಯಕ್ತಿ ಮೆಹಂಗಾ ರಾಮ್. ಜಲಂಧರ್‌ನ ಈ ನಿವಾಸಿಗೆ 6 ಮಕ್ಕಳು. ಬೀಟ್ ಆಲ್ ಸ್ಪೋರ್ಟ್ಸ್ (ಬಿಎಎಸ್) ಎಂಬ ಕಂಪನಿಗೆ ಈತ ಚೆಂದಚೆಂದದ ಬ್ಯಾಟ್‌ಗಳನ್ನು ಮಾಡಿ ಕೊಡುತ್ತಾನೆ. ನೇರಳೆ ಮರದ ತೊಗಟೆ ತೆಗೆದು, ಅದಕ್ಕೆ ಸೂಕ್ತ ಆಕಾರ ಕೊಟ್ಟು, ದಾಂಡನ್ನಾಗಿಸುವ ಮೆಹಂಗಾ ರಾಮ್‌ಗೆ ತಿಂಗಳಿಗೆ 8 ಸಾವಿರ ರುಪಾಯಿ ಪಗಾರ. ಈತ ಸಾದಾ ಬಡಗಿಯಲ್ಲ, ಪಕ್ಕಾ ಕಲೆಗಾರ.
ಮೆಹಂಗಾ ರಾಮ್ ಕುಟುಂಬದ ಮಂದಿ ಮಾತಾಡುತ್ತಾರೆ...
ಮಗ ಸುರೇಶ್: ಸಚಿನ್, ಕಪಿಲ್, ಜಡೇಜ, ಸಿಧು, ಮದನ್ ಲಾಲ್ ಮೊದಲಾದ ಕ್ರಿಕೆಟಿಗರು ಅಪ್ಪ ಮಾಡಿರೋ ಬ್ಯಾಟನ್ನ ಬೀಸಿದ್ದಾರೆ. ಟಿವಿಯತ್ತ ಯಾವಾಗಲಾದರೂ ಕಣ್ಣು ಹಾಯಿಸಿ ಕ್ರಿಕೆಟ್ ನೋಡಿದರೆ ಅವರೆನ್ನುತ್ತಾರೆ- ಇದೇ ನನ್ನ ಕೆಲಸಕ್ಕೆ ಸಿಗುತ್ತಿರುವ ನಿಜವಾದ ಬೆಲೆ.
ಮೆಹಂಗಾ ರಾಮ್ ಪತ್ನಿ : ನನ್ನ ಗಂಡನ ಕೆಲಸ ಮೆಚ್ಚಿದ ಅನೇಕರು ಕೆಲಸ ಕೊಡಲು ಮುಂದೆ ಬಂದರು. ಆದರೆ ಬೀಟ್ ಆಲ್ ಸ್ಪೋರ್ಟ್ಸ್ ಅವರನ್ನು ಉಳಿಸಿಕೊಂಡಿದೆ. ನನ್ನ ಗಂಡನಿಗೂ ಕಂಪನಿಗೆ ದುಡಿಯೋದು ಖುಷಿ ಕೊಟ್ಟಿದೆ.
ನೇರಳೆ ಮರವನ್ನು ಮೆಹಂಗಾ ರಾಮ್ ಕಲಾತ್ಮಕ ದಾಂಡನ್ನಾಗಿಸಿದ ನಂತರ ಅದು ಚಂಡೀಗಢಕ್ಕೆ ತಲುಪುತ್ತದೆ. ಅಲ್ಲಿ ಕೊಂಚ ಕಾಲ ಒಣಗಿ ಗಟ್ಟಿಯಾಗಲು ಇರಿಸಲಾಗುತ್ತದೆ. ನಂತರ ಸ್ಥಳೀಯ ಕ್ರಿಕೆಟ್ ತರಪೇತಿದಾರರು ನೆಟ್ ಪ್ರಾಕ್ಟೀಸ್‌ನಲ್ಲಿ 15 ದಿನಗಳ ಕಾಲ ಬ್ಯಾಟನ್ನು ಬಳಸುತ್ತಾರೆ. ಕೊನೆ ಟಚ್‌ಗಾಗಿ ಬ್ಯಾಟು ಮತ್ತೆ ತಯಾರಿಕಾ ಕಂಪನಿಗೆ ಹೋಗುತ್ತದೆ. ಇವೆಲ್ಲಾ ಆದ ನಂತರವೇ ಅದು ಸಚಿನ್ ಕೈ ಸೇರುವುದು.
ನಾವು ತಿಂಗಳಿಗೆ ಮೆಹಂಗಾ ರಾಮ್ ಮೂಲಕ ನಾಲ್ಕರಿಂದ ಐದು ಭಾರದ ದಾಂಡುಗಳನ್ನು ಸಿದ್ಧಪಡಿಸುತ್ತೇವೆ. ಸಚಿನ್ ಕ್ರಿಕೆಟ್ ವೇಳಾಪಟ್ಟಿ ಹಾಗೂ ನೇರಳೆ ಮರದ ಲಭ್ಯತೆ ಈ ಸಂಖ್ಯೆಯಲ್ಲಿ ಕೆಲವೊಮ್ಮೆ ಬದಲಾವಣೆಗಳನ್ನೂ ತರುತ್ತವೆ ಎನ್ನುತ್ತಾರೆ ಬಿಎಎಸ್ ಪ್ರತಿನಿಧಿ ಅಮಿತ್ ಶರ್ಮ.
ಚಂಡೀಗಢದಲ್ಲಿ ಕ್ರಿಕೆಟ್ ತರಪೇತಿ ಸಂಸ್ಥೆಯಾಂದನ್ನು ನಡೆಸುತ್ತಿರುವ ಹರೀಶ್ ಶರ್ಮ ಹೇಳುತ್ತಾರೆ- ನಮ್ಮ ನಗರಿಗೆ ಅದೃಷ್ಟ ವೋ ಅದೃಷ್ಟ. ವಿಶ್ವದ ಅಗ್ರಮಾನ್ಯ ಬ್ಯಾಟ್ಸ್‌ಮನ್ 10 ಸಾವಿರ ರನ್ ಗಳಿಸಿರೋದು ನಮ್ಮೂರಿನ ಬ್ಯಾಟ್‌ಗಳಿಂದ. ಭಾರವಾದ ಈ ಬ್ಯಾಟ್‌ಗಳನ್ನು ಹೊಸ ಕ್ರಿಕೆಟಿಗರಿಗೆ ತರಪೇತಿ ನೀಡಲು ಬಳಸೋದು ಕಷ್ಟ. ಸಚಿನ್ ಇಂಥಾ ಭಾರ ಬ್ಯಾಟನ್ನು ಬಳಸುತ್ತಿರುವುದೇ ಅವರಿಗೆ ವರದಾನವಾಗಿದೆ. ಟೈಮಿಂಗ್ ಸರಿಯಿದ್ದರೆ ಇಂಥಾ ಬ್ಯಾಟ್‌ಗಳಲ್ಲಿ ಮುಟ್ಟಿದ ಚೆಂಡುಗಳೆಲ್ಲಾ ರನ್ ಹೊಳೆ ಹರಿಸುತ್ತವೆ. ಅದಕ್ಕೆ ಸಚಿನ್ ಸಾಮರ್ಥ್ಯ ಕಾಪಿಟ್ಟುಕೊಳ್ಳುವುದೂ ಮುಖ್ಯ. ಕೈಗಳು ಭಾರ ಸಹಿಷ್ಣುಗಳಾಗಿ ಸದಾ ಇರಬೇಕಾಗುತ್ತವೆ.
ಸಚಿನ್ 267 ಪಂದ್ಯಗಳನ್ನಾಡಿ, 10 ಸಾವಿರ ರನ್ ಎಲ್ಲೆ ಮೀರಿದ್ದಾರೆ. ಮೆಹಂಗಾ ರಾಮ್ ಇನ್ನಷ್ಟು ಒಳ್ಳೆ ಬ್ಯಾಟುಗಳನ್ನು ತಯಾರಿಸಿ ಕೊಡುತ್ತಿರಲಿ. ಸಚಿನ್ ಛಾಪು ಮತ್ತಷ್ಟು ಕಳೆಗಟ್ಟಲಿ.
(ಐಎಎನ್‌ಎಸ್)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications