ಅಮೆರಿಕನಿವಾಸಿಗಳೆ, ನಿಮ್ಮೂರಿನಲ್ಲಿರುವ ಹೆಂಡತಿ-ಮಕ್ಕಳ ಕರೆಸಿಕೊಳ್ಳಿ
ವಾಷಿಂಗ್ಟನ್ : ಗಂಡ ಅಮೆರಿಕೆಯಲ್ಲಿ, ಹೆಂಡತಿ- ಮಕ್ಕಳು ಭಾರತದಲ್ಲಿ. ವೀಸಾ ಪಡೆಯುವುದು ಸುಲಭವಾಗಿರದ ಇವತ್ತಿನ ಪರಿಸ್ಥಿತಿಯಲ್ಲಿ ಇಂಥಾ ಪ್ರಕರಣಗಳು ಅದೆಷ್ಟೋ. ಆರ್ಥಿಕವಾಗಿ ತೊಂದರೆಗೆ ಸಿಲುಕಿದ್ದರೂ, ಅಮೆರಿಕ ಈ ಸಮಸ್ಯೆ ನೀಗಿಸುವತ್ತ ಹೆಜ್ಜೆ ಇಟ್ಟಿದೆ. ಅಮೆರಿಕೆಯಲ್ಲಿರುವ ಕುಟುಂಬದ ಮುಖ್ಯಸ್ಥನನ್ನು ಆತನ ಸಂಸಾರ ಸೇರಲು ಅನುವಾಗುವಂತೆ ಕಿರಿಕಿರಿಯಿಲ್ಲದೆ ವೀಸಾ ನೀಡಲು ಅಮೆರಿಕ ನಿರ್ಧರಿಸಿದೆ.
ವಲಸೆ ಕಾಯ್ದೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ವಲಸೆ ಇಲಾಖೆ ಅಧಿಕಾರಿಗಳು ಅಮೆರಿಕೆಯಲ್ಲಿನ 3 ಲಕ್ಷ ನಿವಾಸಿಗಳು ಹಾಗೂ ನಾಗರಿಕರಿಗೆ ಪತ್ರಗಳನ್ನು ಬರೆದಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಅಮೆರಿಕ ಸಂಸತ್ತು ಕಾನೂನುಬದ್ಧ ವಲಸೆ ಮತ್ತು ಸಮಾನ ಕಾಯ್ದೆ (ಎಲ್‌ಐಎಫ್‌ಇ) ಯನ್ನು ಜಾರಿಗೆ ತಂದಿತು. ಈ ಕಾಯ್ದೆಯ ನಿಯಮಾವಳಿಗಳು ಈ ತಿಂಗಳಿಂದಲೇ ಜಾರಿಗೆ ಬರಲಿವೆ.
ಶಾಶ್ವತ ನೆಲೆಗಾಗಿ ವೀಸಾ ವಿತರಿಸಲು ಅನುವು ಮಾಡಿಕೊಟ್ಟಿರುವ ಈ ಕಾಯ್ದೆಯನ್ವಯ ಕುಟುಂಬದ ಮುಖ್ಯಸ್ಥನ 21 ವರ್ಷದೊಳಗಿನ ಮಕ್ಕಳು ಹಾಗೂ ಪತ್ನಿ ಅಮೆರಿಕಕ್ಕೆ ಹಾರಬಹುದು. ಅಷ್ಟೇ ಅಲ್ಲದೆ ಅಲ್ಲೇ ನೆಲೆಸಿ, ನೌಕರಿಯನ್ನೂ ಮಾಡಬಹುದು. ಅವರು ಶಾಶ್ವತ ನಾಗರಿಕತ್ವ ಪಡೆಯುವವರೆಗೆ ಈ ಸವಲತ್ತು ಅನ್ವಯವಾಗಲಿದೆ.
ಸಿಹಿ ಸುದ್ದಿಯ ಈ ಹೊಸ ಕಾಯ್ದೆಯ ಒಂದೇ ತೊಡಕೆಂದರೆ, ಡಿಸೆಂಬರ್ 21, 2000ರದೊಳಗೆ ಅಮೆರಿಕ ವಲಸೆ ಮತ್ತು ಸಹಜೀಕರಣ ಸೇವೆ ಪಡೆದಿರುವ ಮಂದಿ ಮಾತ್ರ ಈ ಸವಲತ್ತಿಗೆ ಅರ್ಹರು. ಈಗ ಹೆಂಡತಿ- ಮಕ್ಕಳನ್ನು ಕರೆಸಿಕೊಳ್ಳಲು ಮನಸ್ಸು ಮಾಡಿದರೆ ಪ್ರಯೋಜನವಿಲ್ಲ.
(ಇನ್ಫೋ ವಾರ್ತೆ)












Click it and Unblock the Notifications