ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಸಂತನ ವೇದಿಕೆ ಮೇಲೆ ಪುಟ್ಟ ಹಕ್ಕಿಯ ಅರ್ಯಾಂಗೇಟಮ್‌

By Staff
|
Google Oneindia Kannada News

ಬೆಳ್ಳಿ ಕಿರಣ ಬಣ್ಣ ಹಚ್ಚಿದ ಚಿಗುರಿನ ಯಾವುದೋ ಕಾಣದ ಮೂಲೆಯಲ್ಲಿ ಕೋಗಿಲೆ, ಮೈನಾ, ಅದಿನ್ನಾವುದೋ ಹೆಸರು ಗೊತ್ತಿರದ ಹಕ್ಕಿಗಳ ಸಮೂಹ ಗಾಯನ, ಜುಗಲ್‌ಬಂದಿ, ಸೋಲೋ. ಪ್ರಕೃತಿಯ ವೇದಿಕೆಯ ಮೇಲೆ ಯಾವುದೋ ಒಂದು ಹಕ್ಕಿಗೆ ಖಂಡಿತ ಇದು ಅರ್ಯಾಂಗೇಟಮ್‌ !

ಪರೀಕ್ಷೆಯ ಭಯವನು ಎದೆಯಲಿ ಹೊತ್ತ ಪುಟ್ಟನ ಮನದಲ್ಲಿ ಅದಾವುದೋ ಒಂದು ತಾಜಾತನ ಹೊಮ್ಮಿಸಿ, ಆಲ್‌ ದಿ ಬೆಸ್ಟ್‌ ಹೇಳುವ ಶಕ್ತಿ ಪ್ರಕೃತಿ ವೇದಿಕೆಯ ಈ ಪುಕ್ಕಟೆ ಕಚೇರಿಗಿದೆ. ವಸಂತನ ಕುರಿಯೋಗ್ರಫಿಗೆ ಲಯಬದ್ಧವಾಗಿ ತಲೆಯಾಡಿಸುವ ಗಿಡ- ಮರಗಳು ಗಾಳಿಯ ತಲೆ ಸವರಿ, ಅದಕ್ಕೊಂದು ಸುವಾಸನೆ ಸಿಂಚನಗೈಯುತ್ತಿವೆ. ಚಾದರ ಈಗ ಇರುಸು ಮುರುಸು. ಕರೆಂಟಿಲ್ಲದಿದ್ದರಂತೂ ನಿದ್ರೆ ಮಾರು ದೂರ ಓಡೀತು. ಫ್ಯಾನು ತಲೆಯ ಮೇಲೇ ಸುತ್ತಬೇಕು.

ಧಗಧಗ ಬಿಸಿಲಿಗೆ ಕಾದು ಬಸವಳಿದ ಮಣ್ಣು ಅಯ್ಯೋ ಅನ್ನುವಂಥ ವಾಸನೆ ಹೊರಸೂಸುತ್ತಿದೆ. ಅದೇ ಪರೀಕ್ಷೆಯ ವಾಸನೆ ! ಪ್ರತಿ ವರ್ಷ ಈ ಹೊತ್ತು ಯಾರೊಬ್ಬ ಓದುವವನಿಗಾದರೂ ಖಂಡಿತ ಈ ವಾಸನೆ ಮೂಗಿಗೆ ಬಡಿದಿರುತ್ತೆ. ಬೆಂಗಳೂರಿನ ಮಟ್ಟಿಗೆ ಬೇಸಿಗೆ ಬೆವರು ಬಸಿಯುತ್ತಿದ್ದರೆ, ಮಾರುಕಟ್ಟೆಯ ತುಂಬೆಲ್ಲಾ ಎಲೆಕೋಸಿನ ಗಬ್ಬೆನ್ನುವ ಗಮಲು. ಕಿಲೋಗೆ 50 ಪೈಸೆಯೂ ಗಿಟ್ಟದ ರೈತನ ಮುಖದಲ್ಲಿ ಆತಂಕದ ಸುಕ್ಕು. ಮುಖದಲ್ಲಿ ತುಂಬಿದ್ದ ನೀರು ಬೆವರೋ, ಕಣ್ಣೀರೋ ಗೊತ್ತೇ ಆಗುತ್ತಿಲ್ಲ. ಇನ್ನು ಇಂದಿರಾನಗರ, ಅಲಸೂರಲ್ಲಿ ಒಂದು ಲೋಟ ನೀರು ಕುಡಿಯುವಾಗಲೂ ಜನರ ಕೈ ನಡುಗುತ್ತಿದೆ. ದಿನಕ್ಕೆ ಹತ್ತಿಪ್ಪತ್ತು ಜನರ ಕರಳನ್ನು ಬೇನೆ ಸುತ್ತಿಕೊಂಡು ಆಸ್ಪತ್ರೆಗೆ ಬಿಸುಡುತ್ತಿದೆ. ಮೂವರನ್ನಾಗಲೇ ಯಮಪುರಿಗೂ ಕಳುಹಿಸಿದೆ.

ಆತಂಕದ ಛಾಯೆಯಲ್ಲಿ ಸಡಗರದ ಬಿಂಬ. ಮುಸನ್ಮಾನ ಬಂಧುಗಳ ಬಕ್ರೀದಿನ ತಯಾರಿಯನ್ನ ಹತ್ತಿರದ ಮಸೀದಿಗಳು ಹೊಮ್ಮಿಸುತ್ತಿವೆ. ಕಸಾಯಿ ಖಾನೆಯ ಕೊಕ್ಕೆಗೆ ಮಜಬೂತಾದ ಮಾಂಸದ ದೊಡ್ಡ ಪದರು ಈಗ ತಾನೇ ಜೋತು ಬಿದ್ದಿದೆ. ಅರ್ಧ ತಾಸು ಸಾಕು, ಅದು ಕೊಕ್ಕೆ ಕಳಚಿಕೊಳ್ಳಲು. ಹಳ್ಳಿಗಳಲ್ಲಿ ಕಾಮಣ್ಣನ ಸುಡಲು ಈಗಾಗಲೇ ಕಳ್ಳತನ ಮಾಡಲು ಶುರುವಿಟ್ಟಿದ್ದರೆ, ಟಿವಿ ನೋಡುತ್ತಾ ಕುಳಿತ ರೈತ, ಡಬ್ಯ್ಲುಟಿಓ ಅಂಗೆ, ಇಂಗೆ ಅಂತಾರಲ್ಲ. ಏನಂಗಂದ್ರೆ? ಅನ್ನುವಾಗ ಅನಿಶ್ಚಿತತೆಗೆ ತೆರೆ ಕಾಣದ ಹತಾಶೆಯ ಗೆರೆ ಮೊಗದಲ್ಲಿ.

ಬೆವರ ಹಿಂಡುವ ಒಣಹವೆ ಇನ್ನೂ ಎರಡು ಮೂರು ದಿನ ತನ್ನ ಕಾರುಬಾರು ಮೆರೆಯಲಿದೆ. ಶಿವಮೊಗ್ಗೆ 37.5 ಡಿಗ್ರಿ ಸೆಲ್ಷಿಯಸ್‌ನಷ್ಟು ಸೂರ್ಯನ ಕಾವು ತಡೆದುಕೊಂಡು ರಾಜ್ಯದಲ್ಲೇ, ಅತಿ ಹೆಚ್ಚು ತಾಪಮಾನ ಕಂಡ ಊರಾಯಿತು. ಬೆಂಗಳೂರಲ್ಲಿ 32 ಡಿಗ್ರಿ ಬಿಸಿಲುರಿಗೇ ಜನ ಉಸ್ಸಪ್ಪಾ ಅನ್ನುತ್ತಿದ್ದಾರೆ. ಏಸಿ, ಫ್ಯಾನುಗಳು ಎಡೆಬಿಡದೆ ಚಾಲೂ ಆಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X