ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನ್ನದಾತನ ಹಿತ ಕಾಯಲು ಬೇಕು ಸ್ವಯಂ ನಿಯಂತ್ರಣ ವ್ಯವಸ್ಥೆ

By Staff
|
Google Oneindia Kannada News

ಕುಣಿಗಲ್‌ : ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ನಿಗದಿ ಮಾಡಲು ಹಾಗೂ ರಫ್ತು - ಆಮದುಗಳ ಮೇಲೆ ನಿಗಾ ಇಡುವ ಸಲುವಾಗಿ ಸ್ವಯಂ ನಿಯಂತ್ರಣ ವ್ಯವಸ್ಥೆಯಾಂದನ್ನು ಜಾರಿಗೆ ತರಲು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕುಣಿಗಲ್‌ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದ ಅವರು, ಕೃಷಿ ಉತ್ಪನ್ನಗಳ ಉತ್ಪಾದನೆ ಹಾಗೂ ಲಭ್ಯತೆಯ ಆಧಾರದ ಮೇಲೆ ರಫ್ತು ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಅಭಿಪ್ರಾಯಪಟ್ಟರು.

ಕೃಷಿ ಉತ್ಪನ್ನಗಳ ಆಮದನ್ನು ತಡೆಯಲು ಬಜೆಟ್ಟಿನಲ್ಲಿ ಕೆಲವು ಸ್ವಾಗತಾರ್ಹ ನಿರ್ಧಾರಗಳನ್ನು ಕೇಂದ್ರ ಹಣಕಾಸು ಸಚಿವ ಯಶವಂತ ಸಿನ್ಹಾ ಕೈಗೊಂಡಿದ್ದಾರೆ. ಆದರೆ, ಕೇಂದ್ರದ ನೀತಿ ಕೇವಲ ವಾಣಿಜ್ಯ ಬೆಳೆಗಳಿಗೆ ಮಾತ್ರ ಅನುಕೂಲವಾಗಿದೆ. ರೈತರು ಹೆಚ್ಚುವರಿಯಾಗಿ ಬೆಳೆದ ಆಹಾರ ಪದಾರ್ಥಗಳನ್ನು ರಫ್ತು ಮಾಡಲು ಸಿನ್ಹಾ ತಮ್ಮ ಬಜೆಟ್‌ನಲ್ಲಿ ವೇದಿಕೆಯಾಂದನ್ನು ಸೃಷ್ಟಿಸಬೇಕಿತ್ತು . ಸಿನ್ಹಾ ಬಜೆಟ್‌ ವರ್ತಕರ ಪರವಾಗಿದೆ ಎಂದು ಆಪಾದಿಸಿದ ಕೃಷ್ಣ , ರಾಜ್ಯದ ಸದಸ್ಯರು ಈ ವಿಷಯವನ್ನು ಸಂಸತ್ತಿನ ಪ್ರಸ್ತಾಪಿಸಲಿದ್ದಾರೆ ಎಂದರು.

ಸಬ್ಸಿಡಿ ಸರಿ, ಅಧಿಕಾರದಲ್ಲಿದ್ದಾಗ ಮಲಗಿದ್ದವರಿಂದ ಕಲಿಯುವುದೇನೂ ಇಲ್ಲ

ಮೆಕ್ಕೆಜೋಳ ಮುಂತಾದ ಉತ್ಪನ್ನಗಳನ್ನು ರಫ್ತು ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ . ರಾಜ್ಯ ಸರ್ಕಾರಕ್ಕೆ ಅನೇಕ ಮಿತಿಗಳಿವೆ ಎಂದು ಹೇಳಿದ ಕೃಷ್ಣ ರೈತರಿಗೆ ನೀಡುತ್ತಿರುವ ಸಬ್ಸಿಡಿ ಪ್ರಮಾಣವನ್ನು ಸಮರ್ಥಿಸಿಕೊಂಡರು. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಬ್ಸಿಡಿ ಅಗತ್ಯ ಎಂದು ಅವರು ಪ್ರತಿಪಾದಿಸಿದರು. ರಾಜ್ಯದಲ್ಲಿ ರೈತರಿಗೆ ನೀಡುತ್ತಿರುವ ಸಬ್ಸಿಡಿ ಪ್ರಮಾಣ ಹೆಚ್ಚಾಗಿದೆ ಎಂದು ವಿಶ್ವಬ್ಯಾಂಕ್‌ ಟೀಕೆಯ ಹಿನ್ನೆಲೆಯಲ್ಲಿ ಅವರು ಉತ್ತರಿಸುತ್ತಿದ್ದರು.

ರಾಜ್ಯದ 683 ಹೋಬಳಿಗಳಲ್ಲಿ ಈಗಾಗಲೇ ರೈತಮಿತ್ರ ಕೇಂದ್ರಗಳನ್ನು ತೆರೆಯಲಾಗಿದ್ದು , ಉಳಿದ ಹೋಬಳಿಗಳಲ್ಲೂ ಸದ್ಯದಲ್ಲೇ ರೈತಮಿತ್ರ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದರು. ರಾಜ್ಯ ಸರ್ಕಾರ ರೈತರನ್ನು ಮರೆತಿದೆ ಎನ್ನುವ ವಿರೋಧ ಪಕ್ಷಗಳ ಟೀಕೆಯನ್ನು ಲೇವಡಿ ಮಾಡಿದ ಮುಖ್ಯಮಂತ್ರಿಗಳು, ಅವರು ಅಧಿಕಾರದಲ್ಲಿದ್ದಾಗ ಮಲಗಿಯೇ ಬಿಟ್ಟಿದ್ದರು, ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ಸ್ಥಗಿತ ವಾಗಿದ್ದವು. ಅಂಥವರಿಂದ ಪಾಠ ಕಲಿಯಬೇಕಾದ ಅವಶ್ಯಕತೆ ತಮಗಿಲ್ಲ ಎಂದು ಕಟುವಾಗಿ ಹೇಳಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X