Get Updates
Get notified of breaking news, exclusive insights, and must-see stories!

ಧರ್ಮದ ಚೌಕಟ್ಟು ಮೀರಿದ ಮಾನವತೆಯ ಹಬ್ಬ ‘ ಬಕ್ರೀದ್‌’

(ಇನ್ಫೋ ವಿಶೇಷ)

ಹಜ್‌ ಯಾತ್ರೆಯ ಪವಿತ್ರ ಸಂದರ್ಭದಲ್ಲಿ ಆಚರಿಸಲ್ಪಡುವ ಬಕ್ರೀದ್‌ ಮುಸಲ್ಮಾನ ಬಂಧುಗಳಿಗೆ ಪವಿತ್ರದ ಹಬ್ಬ . ಬಕ್ರೀದ್‌ ಬೋಧಿಸುವುದು ತ್ಯಾಗ, ಸದ್ಭಾವನೆ, ಸದ್ಭಕ್ತಿ ಹಾಗೂ ಸೋದರತೆಯನ್ನು . ಆ ಕಾರಣದಿಂದಲೇ ಬಕ್ರೀದನ್ನು ಧರ್ಮದ ಚೌಕಟ್ಟು ಮೀರಿದ ಮಾನವತೆಯ ಹಬ್ಬ ಎಂದು ಬಣ್ಣಿಸಿದಲ್ಲಿ ಅತಿಶಯೋಕ್ತಿಯೇನೂ ಇಲ್ಲ .

ಇಷ್ಟಕ್ಕೂ ಬಕ್ರೀದ್‌ ಆಚರಣೆಯ ಹಿನ್ನೆಲೆಯಾದರೂ ಏನು? ಹಬ್ಬದೊಂದಿಗೆ ಥಳಕು ಹಾಕಿಕೊಂಡಿರುವ ನಂಬಿಕೆಗಳು ಎಂಥವು ? ಕುತೂಹಲದ ಹುತ್ತವನ್ನು ಕೆದಕುತ್ತಾ ಹೋದಂತೆ ಇತಿಹಾಸ, ಐತಿಹ್ಯದ ಪುಟಗಳು ಜೀವಗೊಳ್ಳುತ್ತವೆ.

ಹಜರತ್‌ ಇಬ್ರಾಹಿಂ ಸ್ಮರಣಾರ್ಥವಾಗಿ ಬಕ್ರೀದ್‌ ಆಚರಿಸುವಂತೆ ಪ್ರವಾದಿ ಪೈಗಂಬರ್‌ ಹಾಗೂ ಹಜರತ್‌ ಮಹಮ್ಮದ್‌ ತಮ್ಮ ಅನುಯಾಯಿಗಳಿಗೆ ಕರೆ ನೀಡಿದ್ದಾರೆ. ಸಹಿಷ್ಣುತೆ, ಭಕ್ತಿ, ಆಜ್ಞಾಪಾಲನೆಗಳ ಮೂಲಕ ಅಲ್ಲಾಹನ ಪ್ರೀತಿಗೆ ಪಾತ್ರನಾದ ಹಜರತ್‌ ಇಬ್ರಾಹಿಂರನ್ನು ನೆನೆಯುವುದು ಹಬ್ಬದ ಉದ್ದೇಶ. ಹಬ್ಬದ ಮೊದಲ ದಿನ ಮುಸಲ್ಮಾನರ ಪವಿತ್ರ ನಗರಿ ಮೆಕ್ಕಾದ ಕಾಬಾ ದೇವಾಲಯದಲ್ಲಿ ವಿಶ್ವದ ನಾನಾ ಭಾಗಗಳಿಂದ ಆಗಮಿಸಿದ ಲಕ್ಷಾಂತರ ಮುಸ್ಲಿಂ ಭಕ್ತರು ನೆರೆದು ಭಗವಂತನನ್ನು ಪ್ರಾರ್ಥಿಸುತ್ತಾರೆ.

ಸಮಾಜವ ಬಲಗೊಳಿಸುವ ಕುರಬಾನಿ : ಕುರಬಾನಿ ಬಕ್ರೀದ್‌ನ ಒಂದು ಮುಖ್ಯ ಅಂಗ. ಸಮಾಜದ ಬಂಧವನ್ನು ಬಲಗೊಳಿಸುವುದು ಶಾಂತಿಯ ಉದ್ದೇಶವನ್ನುಳ್ಳ ಇಸ್ಲಾಂನ ಮೂಲ ಧ್ಯೇಯ. ಅದನ್ನು ಕುರಬಾನಿ ಪೂರ್ತಿಗೊಳಿಸುತ್ತದೆ. ಸತ್ಯ ಹಾಗೂ ನ್ಯಾಯದ ಉಳಿವಿಗಾಗಿ ಪ್ರೀತಿಯ ಪುತ್ರ ಹಜರತ್‌ ಇಸ್ಮಾಯಿಲ್‌ನನ್ನು ಶಿಕ್ಷಿಸಲು ಹಜರತ್‌ ಇಬ್ರಾಹಿಂ ಹಿಂಜರಿಯಲಿಲ್ಲ . ಕುರಬಾನಿಗೆ ಇದೇ ಸ್ಫೂರ್ತಿ.

ಭಗವಂತ ರಕ್ತವನ್ನಾಗಲೀ ಮಾಂಸವನ್ನಾಗಲೀ ಬಯಸುವುದಿಲ್ಲ ಅನ್ನುವುದನ್ನು ಕುರಬಾನಿ ಸಾಂಕೇತಿಕವಾಗಿ ಹೇಳುತ್ತದೆ. ಹಾಗಾದರೆ ಭಗವಂತ ಭಕ್ತನಿಂದ ಬಯಸುವುದಾದರೂ ಏನನ್ನು ? ಎಂಥಾ ಕ್ಲಿಷ್ಟ ಪರಿಸ್ಥಿತಿಯಲ್ಲೂ ಸತ್ಯ ಮಾರ್ಗದಲ್ಲಿಯೇ ಭಕ್ತ ಉಳಿಯುವುದು ಭಗವಂತನಿಗೆ ಬಹು ಪ್ರಿಯವಂತೆ.

ಕುರಬಾನಿ ಅಂದರೆ ಸರಳಾರ್ಥದಲ್ಲಿ ಬಲಿದಾನ ಎಂದರ್ಥ. ಅದು ಮನುಷ್ಯನ ಶ್ರದ್ಧಾ ಭಕ್ತಿಯ ಸಂಕೇತವೂ ಹೌದು. ಆದರೆ, ಈ ಬಲಿದಾನದಲ್ಲಿ ಅಲ್ಲಾಹನಿಗೆ ಸೇರುವುದು ಭಕ್ತನ ಶ್ರದ್ಧೆ ಭಕ್ತಿಗಳೇ ಹೊರತು ರಕ್ತ ಮಾಂಸಗಳಲ್ಲ ಎನ್ನುತ್ತದೆ ಮುಸ್ಲಿಂ ಬಾಂಧವರ ನಂಬುಗೆ. ಅದೇನೇ ಇರಲಿ. ಮತ್ತೆ ಸದಾಶಯದ ಬಕ್ರೀದ್‌ ಮುಂದಿದೆ. ಅದು ಮನುಷ್ಯನೆದೆಯಲ್ಲಿ ಮಾನವತೆಯನ್ನು ಬಿತ್ತಲಿ.

ಬಕ್ರೀದ್‌ ಶುಭಾಶಯ : ರಾಜ್ಯಪಾಲೆ ವಿ.ಎಸ್‌. ರಮಾದೇವಿ ಹಾಗೂ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಮುಸ್ಲಿಂ ಬಾಂಧವರಿಗೆ ಬಕ್ರೀದ್‌ ಶುಭಾಶಯಗಳನ್ನು ಕೋರಿದ್ದಾರೆ. ನಮ್ಮ ಸಹ ಬಾಂಧವರಿಗೆ ಏನಾದರೂ ಒಳಿತನ್ನು ಮಾಡುವ ಬಗೆಗೆ ಪುನರ್‌ ಅವಲೋಕಿಸಲು ಬಕ್ರೀದ್‌ ಸುಸಂದರ್ಭ ಎಂದು ರಮಾದೇವಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಈ ನಡುವೆ ರಾಜ್ಯದಲ್ಲಿ ಬಕ್ರೀದ್‌ ಆಚರಣೆಗಾಗಿ ಎಲ್ಲಾ ಸಿದ್ಧತೆಗಳು ನಡೆದಿವೆ. ಮಸೀದಿಗಳಲ್ಲಿ ಹಬ್ಬದ ಸಂಭ್ರಮ ಕಾಣಿಸುತ್ತಿದೆ. ಬೆಂಗಳೂರು ಮುಂತಾದ ಪಟ್ಟಣಗಳಲ್ಲಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+