ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರದನಹಳ್ಳಿಯ ಬೇಸಗೆಗೆ ಕೂಡಿಕೊಂಡ ರಾಜಕೀಯದ ಧಗೆ

By Oneindia Staff
|
Google Oneindia Kannada News

*ಶಾಂತಾರಾಂ

ಹರದನ ಹಳ್ಳಿ : ದೇಶದ ಅತ್ಯುನ್ನತ ಪದಕ್ಕೆ ಮಗನನ್ನು ಕೊಡುವ ಮೂಲಕ ಒಂದೊಮ್ಮೆ ಸುದ್ದಿ ಮಾಡಿದ್ದ ದೇವೇಗೌಡರ ಜನ್ಮಭೂಮಿ ಹರದನಹಳ್ಳಿ ಮತ್ತೊಮ್ಮೆ ದೇಶದ ಗಮನ ಸೆಳೆದಿದೆ. ಸನ್ನಿವೇಶ ಬೇರೆಯಷ್ಟೆ .

ಹರದನಹಳ್ಳಿ ಸಣ್ಣ ಗ್ರಾಮ. ಅಲ್ಲಿರುವುದು ಕೇವಲ 120 ಮನೆಗಳು ಮಾತ್ರ. ಹೊಳೇನರಸೀಪುರ- ಹಾಸನ ಪಟ್ಟಣಗಳ ನಡುವಿರುವ ಈ ಊರು ಜನರ ನಾಲಗೆಗೆ ಬಂದದ್ದು ದೇವೇಗೌಡರ ಮೂಲಕವೆ. ಅದೇ ಗೌಡರ ಪತ್ನಿ ಚೆನ್ನಮ್ಮನವರಿಗೆ ಗೌಡರ ಸಂಬಂಧಿ ಲೋಕೇಶ (22) ಎಂಬಾತ ಶಿವರಾತ್ರಿ ಹಬ್ಬದಂದು ಆ್ಯಸಿಡ್‌ ಎರಚಿದ ಘಟನೆಯೀಗ ಹರದನಹಳ್ಳಿಯನ್ನು ಮತ್ತೆ ಸುದ್ದಿಯಲ್ಲಿಟ್ಟಿದೆ.

ಹಳ್ಳಿಯಲ್ಲೀಗ ಕುದಿಮೌನದ ವಾತಾವರಣ. ಸುದ್ದಿಗಾಗಿ ಅಲ್ಲಲ್ಲಿ ಅಲೆದಾಡುವ ಸುದ್ದಿಗಾರರು ಹಾಗೂ ಮಫ್ತಿಯಲ್ಲಿ ಅಡ್ಡಾಡುವ ಪೊಲೀಸರು ಊರಿಗೆ ಕಾಲಿಟ್ಟಿರುವ ಬೇಸಗೆಗೆ ಮತ್ತಷ್ಟು ಕಾವು ತಂದಿದ್ದಾರೆ. ಈ ನಡುವೆ ನಿತ್ಯದ ಕಾರ್ಯಗಳಿಗೆ ಜನ ಮರಳುತ್ತಿದ್ದಾರೆ.

ಸಿಓಡಿ ಪೊಲೀಸರು ಪ್ರಕರಣದ ತನಿಖೆಗಾಗಿ ಹರದನಹಳ್ಳಿಗೆ ಶನಿವಾರ ಭೇಟಿಕೊಟ್ಟಿದ್ದಾರೆ. ಶನಿವಾರ ಮಧ್ಯಾಹ್ನ ಆರೋಪಿ ಲೋಕೇಶನನ್ನು ಅಪರಾಧ ಘಟಿಸಿದ ಸ್ಥಳಕ್ಕೆ ಪೊಲೀಸರು ಕರೆ ತಂದಾಗ, ಹಳ್ಳಿಯ ಕುತೂಹಲದ ಕಣ್ಣುಗಳು ಸಾಕಷ್ಟು ಹಿಗ್ಗಲಿಸಿದ್ದವು. ದೇಗುಲದಲ್ಲಿ ಚೆನ್ನಮ್ಮ ಕುಳಿತಿದ್ದ ಚಾಪೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಊರಮಗ ಹೆಸರು ತರೊ ಕೆಲಸ ಮಾಡಲಿಲ್ಲ

ಚೆನ್ನಮ್ಮನವರಿಗೆ ಆ್ಯಸಿಡ್‌ ಎರಚಿದ ಲೋಕೇಶನ ದುಷ್ಕೃತ್ಯದ ಬಗ್ಗೆ ಹಳ್ಳಿಗರಿಗೆ ವಿಷಾದವಿದೆ. ಅವನು ಹಳ್ಳಿಗೆ ಕೆಟ್ಟ ಹೆಸರು ತಂದ. ಆ ಘಟನೆಯ ನಂತರ ಯಾರೂ ಪೂಜಾಕಾರ್ಯದಲ್ಲಿ ತೊಡಗಲೇ ಇಲ್ಲ ಎಂದು ಘಟನೆ ಜರುಗಿದ ದೇವಸ್ಥಾನದ ಪೂಜಾರಿಗಳಾದ ರುದ್ರಪ್ಪ ಹಾಗೂ ಶಂಕರಪ್ಪ ಘಟನೆಯನ್ನು ಸ್ಮರಿಸಿಕೊಳ್ಳುತ್ತಾರೆ.

ಏನೋ ಅದೃಷ್ಟ . ಯಾವ ವರ್ಷವೂ ಪೂಜೆ ತಪ್ಪಿಸದ ದೇವೇಗೌಡರು, ಈ ಸಲ ಪೂಜೆಗೆ ಬಂದಿರಲಿಲ್ಲ . ಇಲ್ಲದಿದ್ದರೆ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತಿತ್ತೋ ಅನ್ನುತ್ತಾರೆ ಪೂಜಾರಿಗಳು. ಆದರೆ, ಕೆಲವು ಗ್ರಾಮಸ್ಥರು ಹೇಳುವಂತೆ- ಲೋಕೇಶನ ಗುರಿ ಚೆನ್ನಮ್ಮ ಮಾತ್ರ, ಗೌಡರಲ್ಲ .

ಪ್ರಕರಣದ ಹಿಂದಿರುವುದು ಕೌಟುಂಬಿಕ ದ್ವೇಷವೋ, ರಾಜಕಾರಣ ದ್ವೇಷವೋ ನಿರ್ಧರಿಸುವುದು ಕಷ್ಟ . ದೇವೇಗೌಡರ ಕುಟುಂಬ ಹಾಗೂ ಗೌಡರ ಕಿರಿ ಸೋದರ ಬಸವಗೌಡರ ಕುಟುಂಬಕ್ಕೆ ಎಣ್ಣೆ ಸೀಗೆಕಾಯಿ ದ್ವೇಷ. ಬಸವಗೌಡರು ಕಾಂಗ್ರೆಸ್‌ ಪಾಳಯದಲ್ಲಿ ಕಾಣಿಸಿಕೊಂಡ ನಂತರವಂತೂ ದ್ವೇಷ ಬೀದಿಗೆ ಬಿತ್ತು . ಇದರಿಂದಾಗಿಯೇ ಚೆನ್ನಮ್ಮನವರ ಮೇಲೆ ಬಸವಗೌಡರ ಮಗ ಲೋಕೇಶ ಆ್ಯಸಿಡ್‌ ಸುರಿದ ಅನ್ನುತ್ತಾರೆ ಊರ ಮಂದಿ. ಗೌಡರು ನಮ್ಮ ಕುಟುಂಬಕ್ಕೆ ಮೋಸ ಮಾಡಿದರು. ಆಸ್ತಿ ಲಪಟಾಯಿಸಿದರು ಎಂದು ಪೊಲೀಸರ ವಶದಲ್ಲಿರುವ ಲೋಕೇಶ ತನ್ನ ದುಷ್ಕೃತ್ಯಕ್ಕೆ ಕಾರಣ ನೀಡಿದ್ದಾನೆ.

ಲೋಕೇಶ ಗೌಡರ ನಿಕಟ ಸಂಬಂಧಿಯಾದುದರಿಂದ ಭದ್ರತಾ ಸಿಬ್ಬಂದಿ ಆತನನ್ನು ಅನುಮಾನಿಸಲಿಲ್ಲ . ಆದರೆ, ಹುಟ್ಟೂರಲ್ಲೇ ಪ್ರಧಾನಿ ಕುಟುಂಬಕ್ಕೆ ರಕ್ಷಣೆ ಕೊಡುವುದು ಸಾಧ್ಯವಾಗದ ಮೇಲೆ ಮತ್ತೆಲ್ಲಿ ರಕ್ಷಣೆ ಕೊಡಲು ಸಾಧ್ಯ ಅನ್ನುವುದು ಕರಿಯಣ್ಣ ಗೌಡರ ಪ್ರಶ್ನೆ . ಆತ ದೇವೇಗೌಡರ ಸಹಪಾಠಿ.

ಲೋಕೇಶನ ಅಮ್ಮ ಜಯ್ಯಮ್ಮ ಕೂಡ ಮಗನ ದುಷ್ಕೃತ್ಯವ ಖಂಡಿಸುತ್ತಾರೆ. ಅವರು ಘಟನೆ ನಡೆದಾಗ ದೇವಸ್ಥಾನದಲ್ಲೇ ಇದ್ದರು. ನನ್ನ ಮಗನಿಂದ ಇಂಥಾ ಕೃತ್ಯ ನಿರೀಕ್ಷಿಸಿರಲಿಲ್ಲ . ಕಿಂಚಿತ್ತು ಸುಳಿವು ಸಿಕ್ಕಿದ್ದರೂ, ದೇವಸ್ಥಾನಕ್ಕೆ ಹೋಗುವ ಮುನ್ನ ಅವನನ್ನು ಕೋಣೆಯಲ್ಲಿ ಕೂಡಿ ಹಾಕುತ್ತಿದ್ದೆ ಎನ್ನುತ್ತಾರಾ ತಾಯಿ.

ಎಂದಿನ ಶೈಲಿಯಲ್ಲಿ ಗೌಡರು ಎಲ್ಲ ಭಾರವನ್ನೂ ದೇವರಿಗೆ ಹೊರಿಸಿದ್ದಾರೆ. ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ಹರದನಹಳ್ಳಿ ಮತ್ತೊಮ್ಮೆ ಇಂಥಾ ದುಷ್ಕೃತ್ಯಗಳ ಮೂಲಕ ಸುದ್ದಿ ಮಾಡದಿರಲಿ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X