ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈ2ಕೆಯ ನೋವು - ನಲಿವುಗಳ ನೆನಪಿನ ಬುತ್ತಿ

By Staff
|
Google Oneindia Kannada News

ಬೆಂಗಳೂರು : 2000 ವನ್ನು ಹೊಸ ಸಹಸ್ರಮಾನ ಎನ್ನುವುದೋ, 2001ನ್ನು ಹೊಸ ಸಹಸ್ರಮಾನ ಎನ್ನುವುದೋ ಎಂಬ ಜಿಜ್ಞಾಸೆಯಿಂದಲೇ ಆರಂಭವಾದ ವರ್ಷ 2000. ವೈ2ಕೆ ಸಮಸ್ಯೆಯಿಂದ ವಿಶ್ವವೇ ಸ್ತಬ್ಧವಾಗುತ್ತದೆ ಎಂಬ ಭೀತಿ ಹುಟ್ಟಿಸಿತ್ತು. ಆದರೆ, ವೈ2ಕೆ ಸುಖಾಂತವಾಯ್ತು. ಭಾರತದ ಕಂಪ್ಯೂಟರ್‌ ಪರಿಣತರು ವರ್ಷಾರಂಭದಲ್ಲೇ ಭಾರಿ ಯಶಸ್ಸು ಪಡೆದರು.ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ವರ್ಷದ ವ್ಯಕ್ತಿಯಾಗಿ ಜನಮನ್ನಣೆ ಗಳಿಸಿದರು.

ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಕಳೆದು ಹೋದ ಆ ಮತ್ತೊಂದು ವರ್ಷದ ಮೆಲುಕು ಹಾಕೋಣ.

ಜನವರಿ 4 : ಆನಂದದಿಂದ ಆರಂಭವಾದ ವರ್ಷದ ಮೊದಲ ವಾರದಲ್ಲೇ ಹಾವೇರಿ ಬಳಿ ಟೆಂಪೋ - ಲಾರಿ ಅಪಘಾತವಾಗಿ 11 ಮಂದಿ ಸಾವನ್ನಪ್ಪಿದರು.

ಜ.9: ಕೃಷ್ಣಾ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಅಂತಾರಾಜ್ಯ ಪ್ರಾಧಿಕಾರ ರಚಿಸಲು ಆಗ್ರಹಿಸಿತು.

ಜ.25: ಖ್ಯಾತ ಸಾಹಿತಿ, ಪತ್ರಕರ್ತ ಪಿ. ಲಂಕೇಶ್‌ ಅವರ ನಿಧನ. ನಿಸ್ಸಾರವಾದ ಪತ್ರಿಕಾರಂಗ - ಸಾರಸ್ವತ ಲೋಕ.

ಫೆಬ್ರವರಿ 5: ಕನ್ನಡ ಚಲನಚಿತ್ರ ರಂಗದ ಹೆಸರಾಂತ ಸಂಗೀತ ನಿರ್ದೇಶಕ ಟಿ.ಜಿ. ಲಿಂಗಪ್ಪ ನಿಧನದಿಂದ ಚಿತ್ರರಂಗ ಬಡವಾಯ್ತು.

ಫೆ.18: ಮಗಳ ಆರತಕ್ಷತೆಯ ಸಂಭ್ರಮದಲ್ಲಿ ಓಡಾಡುತ್ತಿದ್ದ ಕಾರವಾರ ಹಾಗೂ ಜೋಯಿಡಾ ಶಾಸಕ ಅಸ್ನೋಟಿಕರ್‌ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಂದರು.

ಫೆ.22: ಕವಿತಾ ಲಂಕೇಶ್‌ ನಿರ್ದೇಶನದ ಹಾಗೂ ದಿ.ಲಂಕೇಶ್‌ ಅವರ ಅಕ್ಕ ಕೃತಿ ಆಧರಿಸಿದ ದೇವೀರಿ ಕನ್ನಡ ಚಿತ್ರಕ್ಕೆ ಪ್ರತಿಷ್ಠಿತ ಅರವಿಂದನ್‌ ಪ್ರಶಸ್ತಿ.

ಮಾರ್ಚ್‌ 6 : ದಾವಣಗೆರೆಯ ಕೊಳವೆ ಬಾವಿಯಲ್ಲಿ ಬಿದ್ದ ಮಗುವನ್ನು ಉಳಿಸಲು ಭಾರಿ ಹೋರಾಟ. ಕೊನೆಗೂ ಬದುಕುಳಿಯದ ಮಗು.

ಮಾ.12 : ಕೋಲಾರ ಜಿಲ್ಲೆಯ ಕಂಬಾಲಪಲ್ಲಿಯಲ್ಲಿ ಜಾತಿ ವೈಷಮ್ಯ. ಏಳು ಮಂದಿ ದಲಿತರ ಸಜೀವ ದಹನ.

ಮಾ.19: ಹುಸಿಯಾದ ಅಮೆರಿಕ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಬೆಂಗಳೂರು ಭೇಟಿ.

ಮಾ.22: ಇನ್ಸಾಟ್‌ 3ಬಿ ಯಶಸ್ವೀ ಉಡಾವಣೆ.

ಏಪ್ರಿಲ್‌ 1: ಬಿಜಾಪುರ ಬಳಿ ರಸ್ತೆ ಅಪಘಾತ : 25 ಮಂದಿ ಸಾವು.

ಏ.8 : ರಾಜ್ಯದ ಹೊಸ ಪೊಲೀಸ್‌ ಮಹಾನಿರ್ದೇಶಕರಾಗಿ ಸಿ. ದಿನಕರ್‌ ಅಧಿಕಾರ ಸ್ವೀಕಾರ.

ಏ.16: ಕದ್ರಾ ಮತ್ತು ಕೊಡಸಳ್ಳಿ ಜಲ ವಿದ್ಯುತ್‌ ಯೋಜನೆ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರಿಂದ ರಾಷ್ಟ್ರಕ್ಕೆ ಅರ್ಪಣ.

ಏ.19: ಪದವಿಪೂರ್ವ ಕಾಲೇಜು ಉಪನ್ಯಾಸಕರಿಂದ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕಾರ.

ಏ.26: ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 519 ಮೀಟರ್‌ಗಳಿಗೆ ಎತ್ತರಿಸಲು ಕರ್ನಾಟಕಕ್ಕೆ ಅವಕಾಶ ನೀಡುವ ಮಹತ್ವದ ಸುಪ್ರೀಂ ಕೋರ್ಟ್‌ ತೀರ್ಪು.

ಏ.28: ರಾಜ್ಯದ ಸರ್ಕಾರಿ ನೌಕರರಿಗೂ ಸ್ಮಾರ್ಟ್‌ ಕಾರ್ಡ್‌. ಕೃಷ್ಣರ ಹೈಟೆಕ್‌ ಸರ್ಕಾರದ ಮೊದಲ ಹೆಜ್ಜೆ.

ಮೇ 1: ತುಂಗೆಯ ಪಾಲಾದ ಸಂಗೀತ ಗಂಗೆ. ಖ್ಯಾತ ಗಾಯಕ ಜಿ.ವಿ. ಅತ್ರಿ ಹಾಗೂ ಕುಟುಂಬದ 6 ಮಂದಿ ನೀರು ಪಾಲು.

ಮೇ 11: ನೂರು ಕೋಟಿ ತಲುಪಿದ ರಾಷ್ಟ್ರದ ಜನಸಂಖ್ಯೆ.

ಮೇ 12: ಪಿ.ಯು.ಸಿ. ಮೌಲ್ಯ ಮಾಪನ ಬಹಿಷ್ಕರಿಸಿದ್ದ ಶಿಕ್ಷಕರ ವಿರುದ್ಧ ಸರ್ಕಾರದ ಬ್ರಹ್ಮಾಸ್ತ್ರ. ಎಸ್ಮಾ ಜಾರಿ. ಶರಣಾದ ಶಿಕ್ಷಕರು.

ಮೇ 14: ನಗರದ ಬೆಡಗಿ ಲಾರಾ ದತ್ತಾಗೆ ವಿಶ್ವ ಸುಂದರಿ ಕಿರೀಟ.

ಮೇ 24: ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕಂಪ್ಯೂಟರ್‌ ಶಿಕ್ಷಣ ರಾಜ್ಯದ ಪ್ರಕಟಣೆ. ಇಸ್ರೋ ನಿರ್ಮಿತ ಇನ್ಸಾಟ್‌ 3 ಬಿ ದೇಶಕ್ಕೆ ಅರ್ಪಣೆ. ಕನ್ನಂಬಾಡಿಯಲ್ಲಿ ಮುಳುಗಿದ್ದ ಗೋಪಾಲ ಕೃಷ್ಣ ಸ್ವಾಮಿ ದೇವಾಲಯದ ದರ್ಶನ.

ಜೂನ್‌ 6: ಅಣ್ಣಾ ಹಜಾರೆ ಅವರಿಗೆ ಚಿತ್ರದುರ್ಗದಲ್ಲಿ ಬಸವಶ್ರೀ ಪ್ರಶಸ್ತಿ ಪ್ರದಾನ.

ಜು. 9: ರಾಜ್ಯದ ವಾಡಿ, ಗೋವಾ, ಆಂಧ್ರದ ಚರ್ಚ್‌ನಲ್ಲಿ ಸರಣಿ ಬಾಂಬ್‌ ಸ್ಫೋಟ.

ಜೂ.13: ಕನ್ನಡ ಖ್ಯಾತ ಖಳನಟ ಸುಧೀರ್‌ ನಿಧನ.

ಜೂ.16 : ಶತಾಯುಷಿಯಾದ ಕನ್ನಡದ ಖ್ಯಾತಿ ಲೇಖಕ ಎ.ಎನ್‌. ಮೂರ್ತಿ ರಾವ್‌ 100 ನಾಟೌಟ್‌.

ಜೂ.17: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗು. ಹಿಂಸಾಚಾರ.

ಜೂ.20: ನೈಋತ್ಯ ರೈಲ್ವೆ ವಲಯ ಬೆಂಗಳೂರಲ್ಲೇ. ಹೈಕೋರ್ಟ್‌ ಆದೇಶ.

ಜೂ.21: ಹೈಕೋರ್ಟ್‌ ಪೀಠ ಚಳವಳಿ. ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಧ್ವಜಾರೋಹಣ.

ಜೂ.23: ಕಾಲಿಗೆ ಸರಪಳಿ ಬಿಗಿದು ಜೀತ ಮಾಡಿಸುತ್ತಿದ್ದ ಘೋರ ಪ್ರಕರಣ ಮಂಡ್ಯ ಜಿಲ್ಲೆಯಲ್ಲಿ ಬಯಲು.

ಜೂ.24: ಬಾಗಲಕೋಟೆಯಲ್ಲಿ 68ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಶಾಂತಾದೇವಿ ಮಾಳವಾಡ ಅಧ್ಯಕ್ಷತೆ.

ಜೂ.30: ಕರ್ನಾಟಕದ ನಿಶಾ ಮಿಲ್ಲೆಟ್‌ಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಪ್ರಕಟ.

ಜುಲೈ 2 : ಬೆಂಗಳೂರು ಹಾಗೂ ಜೋದ್‌ಪುರ್‌ ನಡುವೆ ಹೊಸ ರೈಲು ಸಂಚಾರ ಆರಂಭ.

ಜು.9: ಬೆಂಗಳೂರು ಚರ್ಚ್‌ನಲ್ಲಿ ಸ್ಫೋಟ. ಮಿನರ್ವಾ ಮಿಲ್‌ ಬಳಿ ಕಾರು ಸ್ಫೋಟ. ಚರ್ಚ್‌ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಸುಳಿವು.

ಜು.30: ಕನ್ನಡದ ಗರ್ಭಗುಡಿಗೆ ಕೈಯಿಟ್ಟ ಕಾಡುಗಳ್ಳ ವೀರಪ್ಪನ್‌. ಕನ್ನಡ ವರನಟ ರಾಜ್‌ಕುಮಾರ್‌ ಅಪಹರಣ.

ಆಗಸ್ಟ್‌ 8 : ಹಿರಿಯ ರಾಜಕೀಯ ಮುತ್ಸದ್ಧಿ ಎಸ್‌. ನಿಜಲಿಂಗಪ್ಪ ಲಿಂಗೈಕ್ಯ.

ಆ.20 : ಖ್ಯಾತ ಸಾಹಿತಿ ಕು.ಶಿ. ಹರಿದಾಸಭಟ್ಟರ ನಿಧನ.

(ರಾಜ್‌ಕುಮಾರ್‌ ಬಿಡುಗಡೆಗಾಗಿ ಚಿತ್ರನಟ, ನಟಿಯರೂ ಸೇರಿದಂತೆ ಅಸಂಖ್ಯಾತ ಅಭಿಮಾನಿಗಳಿಂದ ಉರುಳುಸೇವೆ, ಹೋಮ, ಹವನ, ವಿಶೇಷ ಪೂಜೆ. ರಾಜ್ಯಾದ್ಯಂತ ಸ್ವಯಂ ಘೋಷಿತ ಬಂದ್‌ ಹದಿನೈದು ದಿನ ಶಾಲೆ- ಕಾಲೇಜ್‌ ಬಂದ್‌)

ಸೆಪ್ಟೆಂಬರ್‌ 1: ಗಣೇಶ ಚತುರ್ಥಿ. ಸುಪ್ರೀಂಕೋರ್ಟ್‌ನಿಂದ ತಮಿಳುನಾಡು ಕರ್ನಾಟಕ ಸರ್ಕಾರಗಳ ತರಾಟೆ. ವೀರಪ್ಪನ್‌ ಹಿಡಿಯಲಾಗದ ಸರಕಾರಗಳಿಗೆ ಮುಖಭಂಗ.

ಸೆ.28: ವೀರಪ್ಪನ್‌ ಬಂಧನದಿಂದ ನಾಗಪ್ಪ ಪರಾರಿ. ನೂರೆಂಟು ಊಹಾಪೋಹ. ಜಟಿಲಗೊಂಡ ರಾಜ್‌ ಅಪಹರಣ ಬಿಕ್ಕಟ್ಟು. ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ.

ಅಕ್ಟೋಬರ್‌1: ಖ್ಯಾತ ಲೇಖಕಿ ಉಷಾ ನವರತ್ನರಾಮ್‌ ನಿಧನ.

ಅ.8: ವಿಶ್ವವಿಖ್ಯಾತ ಜಂಬೂಸವಾರಿ. ರಾಜ್‌ ಅಪಹರಣದಿಂದ ಮಂಕಾದ ದಸರೆ.

ಅ.17: ಎಸ್‌.ಎ. ಗೋವಿಂದರಾಜ್‌ ವೀರಪ್ಪನ್‌ ಒತ್ತೆಯಿಂದ ಬಿಡುಗಡೆ. ತಲಕಾವೇರಿಯಲ್ಲಿ ತೀರ್ಥೋದ್ಭವ.

ಅ.21: ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರಾಗಿ ಪಿ. ವೆಂಕಟರಾಮರೆಡ್ಡಿ ಅವರ ನೇಮಕ.

ಅ.31: ಬೆಂಗಳೂರು ಐ.ಟಿ.ಕಾಂ ಆರಂಭ.

ನವೆಂಬರ್‌ 1: ರಾಜ್‌ ಇಲ್ಲದ ನಾಡಿನಲ್ಲಿ ಸಪ್ಪೆಯಾದ ರಾಜ್ಯೋತ್ಸವ ಕಾರ್ಯಕ್ರಮ.

ನ.2: ಖ್ಯಾತ ಸಂಗೀತ ನಿರ್ದೇಶಕ ರಾಜನ್‌ - ನಾಗೇಂದ್ರ ಜೋಡಿಯ ನಾಗೇಂದ್ರ ನಿಧನ.

ನ.8 : ಅಕ್ಕಾ ಹಾಗೂ ಸಿ. ಅಶ್ವತ್ಥ್‌ ಚೆಕ್‌ ಹಗರಣ ಸುಖಾಂತ. ರಾಜ್‌ ಬಿಡುಗಡೆಗಾಗಿ ಟಾಡಾ ಕೈದಿಗಳ ಬಿಡಲು ಸುಪ್ರೀಂ ಕೋರ್ಟ್‌ ನಕಾರ.

ನ.10: ಖ್ಯಾತ ಸಾಹಿತಿ, ಅಂಕಣಕಾರ ಹಾ.ಮಾ.ನಾಯಕ್‌ ನಿಧನ.

ನ.15: ಡಾ. ರಾಜ್‌ಕುಮಾರ್‌ ವನವಾಸ ಅಂತ್ಯ. ಸುರಕ್ಷಿತ ಬಿಡುಗಡೆ. ರಾಜ್ಯದಲ್ಲಿ ಸಂಭ್ರಮ, ಸಂತಸ.

ನ.20: ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ.

ನ.30: ರಾಜ್ಯಾದ್ಯಂತ ಸ್ವಯಂ ಘೋಷಿತ ಆಸ್ತಿ ತೆರಿಗೆ ಜಾರಿಗೆ ಸುಗ್ರೀವಾಜ್ಞೆ.

ಡಿಸೆಂಬರ್‌ 5: ರಾಷ್ಟ್ರಾದ್ಯಂತ ಅಂಚೆ ನೌಕರರ ಮುಷ್ಕರ. ರಾಜ್ಯಕ್ಕೂ ತಟ್ಟಿದ ಬಿಸಿ.

ಡಿ.7: ಮಂಗಳೂರಿನಲ್ಲಿ ಬೊಂಡ ಮೇಳ. ಪೆಪ್ಸಿ, ಕೋಲಾಗಳಿಗೆ ದೇಶೀಯ ಸವಾಲು.

ಡಿ.8: ಬಾಬಾಬುಡನ್‌ಗಿರಿಯಲ್ಲಿ ಶಾಂತಿಯುತವಾಗಿ ದತ್ತ ಜಯಂತಿ ಆರಂಭ.

ಡಿ.12: ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ನಿಧನ.

ಡಿ.14: ಖ್ಯಾತ ಕನ್ನಡ ನಟಿ ಸುಧಾರಾಣಿ ಮರುಮದುವೆ.

ಡಿ.15: ಸರ್ಕಾರಿ ಅಧಿಕಾರಿಗಳು ಸಿನಿಮಾದಲ್ಲಿ ನಟಿಸದಂತೆ ಸರ್ಕಾರದ ಆದೇಶ.

ಡಿ.18: ಅಂಚೆ ಮುಷ್ಕರ ಅಂತ್ಯ. ಸಹಜ ಸ್ಥಿತಿಗೆ ಮರಳಿದ ಅಂಚೆ ಸೇವೆ.

ಡಿ.20: ಬೆಂಗಳೂರಿನಲ್ಲಿ ಬಾಲಿವುಡ್‌ ತಾರೆ ಹೃತಿಕ್‌ ರೋಷನ್‌ ಮದುವೆ.

ಡಿ.23: ದಿವಂಗತ ಶಾಂತಿನಾಥ ದೇಸಾಯರ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ.

ಡಿ.25: ಮಾತಿನಮಲ್ಲ, ಚಿತ್ರನಟ ಧೀರೇಂದ್ರ ಗೋಪಾಲ್‌ ನಿಧನ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X