ಚೀನಾದಲ್ಲಿ ಅಗ್ನಿ ದುರಂತ : ಕ್ರಿಸ್‌ಮಸ್ ಆಚರಿಸುತ್ತಿದ್ದ 309 ಜನರ ಸಾವು
ಬೀಜಿಂಗ್ : ಚೀನಾದ ಪ್ರಮುಖ ನಗರಗಳಲ್ಲೊಂದಾದ ಲುಹೊಯಂಗ್‌ನ ವಾಣಿಜ್ಯಮಳಿಗೆಯ ಡಾನ್ಸ್ ಹಾಲ್‌ಲೊಂದರಲ್ಲಿ ಕ್ರಿಸ್‌ಮಸ್ ಸಂಭ್ರಮ ಆಚರಣೆಯಲ್ಲಿ ಸಂಭವಿಸಿರುವ ಬೆಂಕಿ ಆನಾಹುತದಲ್ಲಿ ಕನಿಷ್ಠ 309 ಜನ ಜೀವ ಕಳೆದುಕೊಂಡಿದ್ದು , ಅನೇಕ ಗಾಯಾಳುಗಳು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಸ್ಥಳೀಯ ವರದಿಗಳನ್ನಾಧರಿಸಿ ಕ್ಸಿನ್‌ಹು ಸುದ್ದಿ ಸಂಸ್ಥೆ ಮಂಗಳವಾರ ಈ ದುರಂತವನ್ನು ವರದಿ ಮಾಡಿದೆ. ರಾತ್ರಿ 9.35 ರ ಸುಮಾರಿಗೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ , ಅಲ್ಲಿ ನ ನಾಲ್ಕನೇ ಅಂತಸ್ತಿನ ಡಾನ್ಸ್‌ಹಾಲ್‌ನಲ್ಲಿ ಸುಮಾರು 200 ಕ್ರಿಸ್‌ಮಸ್ ಪಾರ್ಟಿಗಳು ನಡೆಯುತ್ತಿದ್ದವು. ಎರಡು ಹಾಗೂ ಮೂರನೇ ಅಂತಸ್ತಿನಲ್ಲಿ ರಿಪೇರಿ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಕೂಡ ಬೆಂಕಿಗೆ ಸಿಲುಕಿದ್ದು , ಕೆಲವರು ಕಿಟಕಿಗಳಿಂದ ನೆಗೆದು ಜೀವ ಉಳಿಸಿಕೊಂಡಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಅಗ್ನಿ ಶಾಮಕ ದಳದವರ ನಿರಂತರ ಪ್ರಯತ್ನದಿಂದಾಗಿ ಸ್ಥಳೀಯ ಕಾಲಮಾನ 00.45 ರ ವೇಳೆಗೆ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಈವರೆಗೆ ಬೆಂಕಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ .
ಸ್ಥಳೀಯ ವರದಿಗಾರನೊಬ್ಬ ತಿಳಿಸಿರುವಂತೆ ಬಟ್ಟೆ ಮುಂತಾದ ವಸ್ತುಗಳನ್ನು ಮಾರುವ ಸಣ್ಣ ಸಣ್ಣ ಮಳಿಗೆಗಳನ್ನು ಒಳಗೊಂಡ ಏಳು ಅಂತಸ್ತುಗಳನ್ನು ಕಟ್ಟಡ ಒಳಗೊಂಡಿದ್ದು , ಕಟ್ಟಡದ ನೆಲಭಾಗದಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿ, ಆನಂತರ ಎಲ್ಲಾ ಮಹಡಿಗಳಿಗೆ ಹರಡಿದೆ.
ಸಾವಿಗೀಡಾಗಿರುವ ಅನೇಕರು ಹೊಗೆಯಿಂದ ಉಸಿರುಗಟ್ಟಿ ಸತ್ತಿದ್ದಾರೆ ಎಂದು ಅಧಿಕೃತ ವಕ್ತಾರರೊಬ್ಬರು ತಿಳಿಸಿದ್ದಾರೆ. ಕಳೆದ ದಶಕದಲ್ಲಿ ಚೀನಾದಲ್ಲಿ ಸಂಭವಿಸಿರುವ ಭಾರೀ ಜೀವಹಾನಿಯ ಪ್ರಕರಣಗಳಲ್ಲಿ ಒಂದೆಂದು ಈ ಅಗ್ನಿ ಅನಾಹುತ ಪರಿಗಣಿತವಾಗಿದೆ. 1994 ರಲ್ಲಿ ಸಂಗೀತ ಕಚೇರಿ ನಡೆಯುತ್ತಿದ್ದ ಕಟ್ಟಡವೊಂದರಲ್ಲಿ ನಡೆದ ಬೆಂಕಿ ಅನಾಹುತದಲ್ಲಿ 323 ಜನರು ಸಾವಿಗೀಡಾಗಿದ್ದನ್ನು ಹಾಗೂ ಕಳೆದ ತಿಂಗಳು ತಾನೆ ನೃತ್ಯ ಕೊಠಡಿಯಾಂದರಲ್ಲಿ 233 ಜನ ಬೆಂಕಿಯಿಂದ ಸಾವಿಗೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ, 1977 ರಲ್ಲಿ ಕ್ಸಿನ್‌ಜಿಯಾಂಗ್‌ನಲ್ಲಿ ನಡೆದ ಅಗ್ನಿ ಆಕಸ್ಮಿಕದಲ್ಲಿ 694 ಜನ ಸಾವಿಗೀಡಾಗಿದ್ದ ಘಟನೆ ದೇಶದ ಇತಿಹಾಸದಲ್ಲೇ ಭಾರೀ ಜೀವಹಾನಿಯ ಅಗ್ನಿ ದುರಂತ ಎಂದು ದಾಖಲಾಗಿದೆ.
(ರಾಯ್ಟರ್ಸ್)