ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಾವಳಿ ಕಣ್ಣೀರು : ಮಂಜುಗಡ್ಡಿ ಸಹವಾಸ ಮನೆ ಮಕ್ಕಳ ಉಪವಾಸ

By Staff
|
Google Oneindia Kannada News

*ರಾಜೀವ ಮಹತಿ

ಮಂಗಳೂರು : ಮೀನಿಗೆ ಬಂದಿರುವ ಬರಗಾಲದ ಬಿಸಿ, ಈಗ ಮೀನುಗಾರಿಕೆಯನ್ನು ಅವಲಂಬಿಸಿದ ಪೂರಕ ಉದ್ಯಮವಾದ ಮಂಡುಗಡ್ಡೆ ತಯಾರಿಕಾ ಘಟಕಗಳಿಗೂ ತಟ್ಟಲಾರಂಭಿಸಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು 15 ಘಟಕಗಳು ಉತ್ಪಾದನೆ ಸ್ಥಗಿತಗೊಳಿಸಿವೆ ಎಂದು ಕರ್ನಾಟಕದ ಕರಾವಳಿ ಮಂಜುಗಡ್ಡೆ ಮತ್ತು ಕೋಲ್ಡ್‌ ಸ್ಟೋರೇಜ್‌ ಮಾಲಕರ ಸಂಘದ ಅಧ್ಯಕ್ಷ ಪರಶುರಾಮ್‌ ಇಂಡಿಯಾ ಇನ್ಫೋಗೆ ತಿಳಿಸಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 150 ಮಂಜುಗಡ್ಡೆ ತಯಾರಿಕಾ ಘಟಕಗಳಿವೆ. ದೋಣಿಗಳು ಮೀನುಗಾರಿಕೆಗೆ ತೆರಳಿರುವುದರಿಂದ ಮಂಜುಗಡ್ಡೆಗೆ ಬೇಡಿಕೆ ಕುಸಿದು ಘಟಕಗಳನ್ನು ಮುಚ್ಚುವುದು ಅನಿವಾರ್ಯವಾಗುತ್ತಿದೆ. ಆಳ ಸಮುದ್ರ ಮೀನುಗಾರಿಕೆಗೆ ತೆರೆಳುವ ಬೋಟುಗಳು ಮಂಜುಗಡ್ಡೆ ತಯಾರಿಕಾ ಘಟಕಗಳಿಂದ ದೊಡ್ಡ ಪ್ರಮಾಣದ ಮಂಜುಗಡ್ಡೆ ಖರೀದಿಸುತ್ತವೆ. ಮತ್ಸ್ಯ ಕ್ಷಾಮದಿಂದಾಗಿ ಮತ್ತು ಡೀಸೆಲ್‌ ದರ ಏರಿಕೆಯಿಂದಾಗಿ ಆಳ ಸಮುದ್ರ ಮೀನುಗಾರಿಕೆ ಬೋಟುಗಳು ಇನ್ನೂ ದಡದಲ್ಲಿಯೇ ತಂಗಿವೆ. ಮೀನುಗಾರರು ಸ್ವಯಂ ಘೋಷಿತ ಕಡ್ಡಾಯ ರಜೆಯಲ್ಲಿದ್ದಾರೆ. ಒಂದು ಆಳ ಸಮುದ್ರ ಮೀನುಗಾರಿಕೆ ದೋಣಿ 6 ದಿನಗಳ ಕಾಲ ಮೀನುಗಾರಿಕೆಗೆ ತೆರಳಿದರೆ 30 ಸಾವಿರ ರೂಪಾಯಿ ಕೈ ಬಿಡುತ್ತದೆ. ಕೈಗೆ ಬರುವ ಲಾಭ 23 ಸಾವಿರ ರೂಪಾಯಿ ಮಿಗುವುದಿಲ್ಲ. ಇದರಿಂದ ಮೀನು ಸಾಗಾಣಿಕೆ ಉದ್ಯಮವೂ ಕುಸಿದಿದ್ದು, ಮೀನುಗಳು ಕೊಳೆಯದಂತೆ ರಕ್ಷಿಸುವ ಮಂಜುಗಡ್ಡೆಯ ಬೇಡಿಕೆ ಸಹಜವಾಗಿ ಕುಸಿದಿದೆ.

ಇನ್ನೊಂದು ಕಡೆ, ಸರಕಾರ ವಿದ್ಯುತ್‌ ದರ ಏರಿಸಿರುವುದರಿಂದ ಮಂಜುಗಡ್ಡೆ ತಯಾರಿಕಾ ಘಟಕಗಳು ಗತ್ಯಂತರವಿಲ್ಲದೆ ಬಾಗಿಲು ಮುಚ್ಚಬೇಕಾಗುತ್ತದೆ. ಯಾಕೆಂದರೆ ಬೇಡಿಕೆ ಕಡಿಮೆಯಿರುವ ಮಂಜುಗಡ್ಡೆಯ ಬೆಲೆ ಏರಿಸುವುದು ಸಾಧ್ಯವೇ ಇಲ್ಲ. ಈ ಸಮಸ್ಯೆ ಕುರಿತು 150 ಸದಸ್ಯರನ್ನು ಹೊಂದಿರುವ ಮಂಜುಗಡ್ಡೆ ಘಟಕಗಳ ಮಾಲಕರ ಸಂಘ ತುರ್ತು ಸಭೆ ಕರೆದು ಚರ್ಚಿಸಲಿದೆ ಎನ್ನುತ್ತಾರೆ ಪರಶುರಾಮ್‌.

ಮಂಜುಗಡ್ಡೆಯನ್ನು ಸಾಮಾನ್ಯವಾಗಿ ಮೀನುಗಾರರಿಗೆ ಸಾಲ ರೂಪದಲ್ಲಿ ಕೊಟ್ಟು, ನಂತರ ಹಣ ಪಡೆಯಲಾಗುತ್ತದೆ. ಆದರೆ ನಷ್ಟದಲ್ಲಿರುವ ಮೀನುಗಾರಿಕೆಯಿಂದಾಗಿ ಕೊಟ್ಟ ಸಾಲ ಮತ್ತೆ ಕೈ ಸೇರುತ್ತಿಲ್ಲ. ಘಟಕಗಳು ಬ್ಯಾಂಕ್‌ನಿಂದ ಪಡೆದಿರುವ ಸಾಲದ ಬಡ್ಡಿ ಏರುತ್ತಿದೆ ಎನ್ನುತ್ತಾರೆ ಮಂಜುಗಡ್ಡಿ ತಯಾರಿಕಾ ಘಟಕದ ಮಾಲಕ ಇಸ್ಮಾಯಿಲ್‌.

ಒಟ್ಟಿನಲ್ಲಿ ಕರಾವಳಿಯಲ್ಲಿ ದಶಕಗಳಿಂದ ಬೇರು ಬಿಟ್ಟಿರುವ ಎಲ್ಲ ಉದ್ಯಮಗಳ ಬುಡ ಅಲ್ಲಾಡುತ್ತಿದೆ. ಬೀಡಿ ಉದ್ಯಮ ಕುಸಿದು ದಿನಗಳಾದವು. ಬೇರೆ ಕಸುಬುಗಳತ್ತ ಹೊರಳುವ ಇರಾದೆಯಿರುವ ಮನೆ ಮಂದಿಗೆ ಸುಲಭವಾಗಿ ಕೈಗೆ ಸಿಗುವ ಮೀನುಗಾರಿಕೆ ಗಗನಕುಸುಮವಾಗಿದೆ. ಸಣ್ಣ ಪುಟ್ಟ ಕಸುಬು ಮಾಡಿಕೊಂಡಿರುವ ಉದ್ಯೋಗಿಗಳೆನಿಸಿಕೊಂಡವರೂ ಕರಾವಳಿಯಲ್ಲಿ ನಿರುದ್ಯೋಗಿಗಳಾಗುವ ಪರಿಸ್ಥಿತಿ ಬಂದಿದೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X