ರೇಡಿಯೋ ಟ್ಯಾಕ್ಸಿ ಕನಿಷ್ಠ 35 ರು, ಆನಂತರ ಪ್ರತಿ ಕಿಮೀಗೆ 9.50 ರು
ಬೆಂಗಳೂರು : ಇವರ ಬೇಡಿಕೆಗೂ ಬೆಲೆ ಬಂತು !
ಪೆಟ್ರೋಲ್ ಬೆಲೆ ಹೆಚ್ಚಾಗುತ್ತದೆ ಎಂಬ ಸೂಚನೆ ಚೂರು ಸಿಕ್ಕರೂ ಸಾಕು, ನಮ್ಮ ವಾಹನ ಮತ್ತು ಸಾಗಣೆ ಉದ್ಯಮದವರು ತಕ್ಷಣ ಬೆಲೆ ಹೆಚ್ಚಿಸಿ ಕೂತುಬಿಡುತ್ತಾರೆ. ಇಂಥ ಬೆಲೆ ಹೆಚ್ಚಳದ ಬಿಸಿ ನಮಗೆ ತಾಕಿ, ತಾಕಿ ಈಗಂತೂ ಬೆಂಕಿ ಮುಟ್ಟಿದರೂ ಕೈ ಸುಡುವುದುದಿಲ್ಲ ಎನ್ನುವಲ್ಲಿಗೆ ನಾವು ತಲುಪಿದ್ದೇವೆ. ಮೊನ್ನೆ ಪೆಟ್ರೋಲ್ ಬೆಲೆ ಹೆಚ್ಚಾದ ಮೇಲೆ ಮೊದಲು ಆಟೋ, ಆಮೇಲೆ ಲಾರಿ ಬೆಲೆಗಳು ಸ್ವಾಭಾವಿಕವಾಗಿಯೇ ಏರಿದವು. ಇವೆರಡು ದುಬಾರಿ ಆದಮೇಲೆ ತರಕಾರಿ, ಅಕ್ಕಿ, ಮೊಟ್ಟೆ, ಹಾಲು ...ಹೀಗೆ ಒಂದರ ಹಿಂದೆ ಒಂದರಂತೆ ರೇಟುಗಳು ಸದಾಶಿವನಗರದ ಸೈಟಿನ ಬೆಲೆ ಆಯಿತು. !
ಈ ಮಧ್ಯೆ ರೇಟು ಏರಿಸದವರು ಯಾರಾದರೂ ಇದ್ದರೆ ರೇಡಿಯೋ ಟ್ಯಾಕ್ಸಿ ಚಲಾಯಿಸುವವರು ಮಾತ್ರ ಅಂತ 4 ಲಕ್ಷ ಮಾರುತಿ ವ್ಯಾನ್‌ನಲ್ಲಿ ಬಂಡವಾಳ ಹಾಕಿದವರು ಹಾಗೂ ಅದರ ಚಾಲಕರು ಅನ್ಯ ಮಾರ್ಗವಿಲ್ಲದೆ ತಮ್ಮತಮ್ಮಲ್ಲೇ ತಮಾಷೆ ಮಾಡಿಕೊಳ್ಳುತ್ತಿದ್ದರು.
ಇನ್ನು ಮುಂದೆ ಇಂಥ ತಮಾಷೆಗಳನ್ನು ಮಾಡುವಂತಿಲ್ಲ ಎಂದು ಕರ್ನಾಟಕ ಸರಕಾರ ಆಜ್ಞೆ ಹೊರಡಿಸಲಿದೆ. ರೇಡಿಯೋ ಟ್ಯಾಕ್ಸಿಯ ದರಗಳನ್ನು ಹೆಚ್ಚಿಸುವ ಅಧಿಸೂಚನೆಯನ್ನು ಹೊರಡಿಸುವುದಾಗಿ ಸಾರಿಗೆ ಸಚಿವ ಸಗೀರ್ ಅಹಮದ್ ಶುಕ್ರವಾರ ಪ್ರಕಟಿಸಿದ್ದಾರೆ. ಮುಂದಿನ ವಾರದಿಂದಲೇ ಜಾರಿಗೆ ಬರುವ ದರಗಳು ಹೀಗಿರುತ್ತವೆ :
ಕನಿಷ್ಠ 35 ರು. 4 ಕಿಲೋ ಮೀಟರ್‌ಗೆ (ಹಿಂದಿನ ದರ 30 ರು. )
4 ಕಿ. ಮಿ. ನಂತರ ಪ್ರತಿ ಕಿ. ಮಿ. ಗೆ 9.50 ರು ( ಹಿಂದಿನ ದರ 8 ರು. )
(ಇನ್‌ಫೋ ವಾರ್ತೆ)