ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೀತಿಸಲು ನಿರಾಕರಿಸಿದ ತಂಗಿಯನ್ನೇ ಕೊಂದ ವಿಕೃತ ಪ್ರೇಮಿ

By Staff
|
Google Oneindia Kannada News

ಕೋಲಾರ :ಕಾಮಾತುರಾಣಾಂ ನಭಯಂ ನ ಲಜ್ಜಾ ....

ಶ್ರೀನಿವಾಸಪುರದ ಘಟನೆಗೆ ಸಂಬಂಧಿಸಿದಂತೆ ಈ ಉಕ್ತಿಯನ್ನು ಕೊಂಚ ಬದಲಿಸಿ, ಪ್ರೇಮಾತುರಾಣಾಂ ನಭಯಂ ನ ಲಜ್ಜಾ ಎನ್ನಲಡ್ಡಿಯಿಲ್ಲ. ಈ ಪ್ರೇಮಾತುರನು ತಾಯಿ, ತಂಗಿ, ಅಕ್ಕ, ಹೆಂಡತಿಯರ ನಡುವೆ ವ್ಯತ್ಯಾಸ ತಿಳಿಯದಷ್ಟು ಕುರುಡನಾಗಿದ್ದ.

ತನ್ನ ತಂದೆಯ ಸೋದರನ ಪುತ್ರಿ ಅರ್ಥಾತ್‌ ತನ್ನ ತಂಗಿಯನ್ನೇ ಮೋಹಿಸಿದ. ತನ್ನನ್ನು ಪ್ರೀತಿಸುವಂತೆ ಆಕೆಗೆ ನಾನಾ ಪರಿಯಾಗಿ ಕಾಡಿದ. ಅಣ್ಣನನ್ನು ಪ್ರೀತಿಸಲು, ಅವನ ಕಾಮತೃಷೆಯನ್ನು ಇಂಗಿಸಲು ಇಚ್ಛಿಸದ ಆ ತಂಗಿಯ ತಲೆಯನ್ನೇ ಈ ಪ್ರೇಮಾತುರ - ಕಟುಕ - ನಿಷ್ಕರುಣಿ ಕತ್ತರಿಸಿ ಹಾಕಿದ.

ಈ ಹೃದಯ ವಿದ್ರಾವಕ ಘಟನೆಯಿಂದ ಇಡೀ ಶ್ರೀನಿವಾಸ ಪುರವೇ ಶುಕ್ರವಾರ ತಲ್ಲಣಿಸಿತು. ಈ ಸುದ್ದಿ ಪಟ್ಟಣದಲ್ಲಿ ಹಬ್ಬುತ್ತಿದ್ದಂತೆ, ಶಾಲಾ - ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ಈ ಭೀಭತ್ಸ ಕೃತ್ಯವನ್ನು ಖಂಡಿಸಿ ಪಟ್ಟಣದ ಬಂದ್‌ಗೆ ಕರೆ ನೀಡಿದರು. ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಹಾಗೂ ನಾಗರಿಕರು ಬೆಂಬಲ ವ್ಯಕ್ತಪಡಿಸಿದರು.

ಬಲಿಯಾದ ತಂಗಿ : ಕೊಲೆಯಾದ ಯುವತಿ ಚಿಂತಾಮಣಿ ತಾಲೂಕಿನ ಕುರುಬೂರು ನಿವಾಸಿ ರಾಮಕೃಷ್ಣಪ್ಪ ಮಾಸ್ತರ ಪುತ್ರಿ. ಈಕೆಯ ಹೆಸರು ಅಮರಾವತಿ. ವಯಸ್ಸು 17. ಕೊಲೆ ಮಾಡಿದವ ಮಂಜುನಾಥ. ಈತ ರಾಮಕೃಷ್ಣಪ್ಪನವರ ಸೋದರ ವೀರಭದ್ರೇಗೌಡರ ಅವರ ಪುತ್ರ. ಈತನಿಗೆ 28 ವರ್ಷ. ಕೋಲಾರದ ದೇವರಾಜ ಅರಸ್‌ ಕಾಲೇಜಿನಲ್ಲಿ ಫಾರ್ಮಸಿಸ್ಟ್‌.

ಬಾಲ್ಯದಿಂದಲೂ ತಂಗಿಯಾಡನೆ ಆಡಿ ಬೆಳೆದ ಮಂಜುನಾಥ ಶೋಡಷಿಯೂ ಸುಂದರಿಯೂ ಆದ ತನ್ನ ತಂಗಿಯನ್ನೇ ಕಾಮಿಸಿದ - ಪ್ರೇಮಿಸಿದ. ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ತನ್ನ ಮಗಳಿಗೆ ಸೋದರನ ಪುತ್ರ ನೀಡುತ್ತಿದ್ದ ಕಿರುಕುಳ ತಾಳಲಾರದೆ ರಾಮಕೃಷ್ಣಪ್ಪನವರು ಶ್ರೀನಿವಾಸಪುರಕ್ಕೆ ಮಗಳೊಂದಿಗೆ ಬಂದು ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ನೋಡಿಕೊಂಡಿದ್ದರು.

ಆದರೂ ಮಂಜುನಾಥ ಪದೇ ಪದೇ ಅಲ್ಲಿಗೇ ಬಂದು ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಶುಕ್ರವಾರ ಬೆಳಗ್ಗೆ ಸೂರ್ಯ ಹುಟ್ಟುವ ಹೊತ್ತಿನಲ್ಲಿ ಪಾಠಕ್ಕೆಂದು ಹೊರಟಿದ್ದ ಅಮರಾವತಿಯನ್ನು ಅಡ್ಡಗಟ್ಟಿದ ಮಂಜುನಾಥ ತನ್ನನ್ನು ಪ್ರೀತಿಸುವಂತೆ, ಮದುವೆಯಾಗುವಂತೆ ಒತ್ತಾಯಿಸಿದ. ಆಕೆ ನಿರಾಕರಿಸಿದಾಗ ರೊಚ್ಚಿಗೆದ್ದ ಮಂಜುನಾಥ ಅಮರಾವತಿಯ ಜುಟ್ಟು ಹಿಡಿದು, ತಲೆಯನ್ನೇ ಮಚ್ಚಿನಿಂದ ಕತ್ತರಿಸಿ, ಓಡತೊಡಗಿದ, ಈ ಘೋರ ದೃಶ್ಯವನ್ನು ಕಣ್ಣಾರೆ ಕಂಡ ಗ್ರಾಮಸ್ಥರು ಆರೋಪಿಯನ್ನು ಬಂಧಿಸಿದರು.

ಸೋದರಿಯನ್ನೇ ಪ್ರೀತಿಸಿ, ಕೊಲೆಗಡುಕನಾಗುವಷ್ಟು ಹುಚ್ಚನಾಗಿದ್ದ ಈ ವಿಕೃತ ಪ್ರೇಮಿಯನ್ನು ಚಿಂತಾಮಣಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಿಲ್ಲಾಧಿಕಾರಿ ಸೈಯದ್‌ ಜಮೀರ್‌ ಪಾಷಾ, ಪೊಲೀಸ್‌ ವರಿಷ್ಠಾಧಿಕಾರಿ ಪ್ರಣಬ್‌ ಮೊಹಂತಿ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೊಕ್ಕಾಂ ಹೂಡಿದ್ದಾರೆ. ಶಾಂತಿ ಸುವ್ಯವಸ್ಥೆಗೆ ಭಂಗಬಾರದಂತೆ ಎಚ್ಚರ ವಹಿಸಲಾಗಿದೆ.

(ಕನ್ನಡ ಇನ್‌ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X