Get Updates
Get notified of breaking news, exclusive insights, and must-see stories!

ಮಧ್ಯಪ್ರಾಚ್ಯದಲ್ಲಿ ಪಾರಿವಾಳಗಳ ಮೇಲಾಟ !

* ಮೃಧುಲಾ ಕೃಷ್ಣ

ದುಬೈ: ಕಂಬಳದ ಜನಪ್ರಿಯ ಕೆಸರುಗದ್ದೆ ಓಟದ ಬಗ್ಗೆ ಕೇಳದವರು ವಿರಳ. ಇಂತಹ ವಿಶಿಷ್ಟ ಪಂದ್ಯಾವಳಿಯ ಜೊತೆಗೆ ದಂಧೆಯಾಗಿ ನಡೆಯುತ್ತಿರುವ ಕೋಳಿ ಪಂದ್ಯಗಳು ಕರ್ನಾಟಕದಲ್ಲಿ ಜನಪ್ರಿಯ ಜಾನಪದ ಕ್ರೀಡೆಗಳಾಗಿ ಮುಂದುವರಿಯುತ್ತಿರುವ ಕಾಲಕ್ಕೆ, ಉತ್ತರ ಭಾರತ ಮತ್ತು ಪಾಕಿಸ್ತಾನದಲ್ಲಿ ಪ್ರಸಿದ್ಧಿಯಾಗಿದ್ದ ಪಾರಿವಾಳಗಳ ಪಂದ್ಯ ಅರಬ್‌ ರಾಷ್ಟ್ರಗಳಲ್ಲಿ ಜನಪ್ರಿಯವಾಗುತ್ತಿದೆ.

ಒಂದು ಕಾಲಕ್ಕೆ ದಕ್ಷಿಣ ಏಷ್ಯಾದ ಜನಪ್ರಿಯ ಆಟವಾಗಿದ್ದ ಈ ಪಾರಿವಾಳಗಳ ಪಂದ್ಯ ನಶಿಸುತ್ತಿದೆ ಎನ್ನುತ್ತಿರುವಾಗಲೇ ಇಡೀ ಅರಬ್‌ ರಾಷ್ಟ್ರಗಳಲ್ಲಿ ಪ್ರತಿಷ್ಠಿತರ ಆಟವಾಗಿ ಬೆಳೆಯುತ್ತಿದೆ. ಬಹುತೇಕ ತೈಲ ವ್ಯಾಪಾರಿಗಳೇ ತುಂಬಿರುವ ಯುಎಇಗೆ ಈ ಪಂದ್ಯ ಬಂದಿದ್ದು 30 ವರ್ಷಗಳ ಹಿಂದೆ. ಪಾಕಿಸ್ತಾನದಿಂದ ವಲಸೆ ಹೋದವರು, ಯುಎಇಯ ಸ್ಥಳೀಯ ಜನ ಇವತ್ತು ಪಂದ್ಯಗಳನ್ನು ಜನಪ್ರಿಯಗೊಳಿಸುತ್ತಿದ್ದಾರೆ.

ಅಪಾರ ಜನಪ್ರಿಯತೆ : ಆಟ ಎಷ್ಟು ಗಂಭೀರವಾಗಿ ನಡೆಯುತ್ತದೆ ಎಂದರೆ, ಅದರ ಪರಿಣಾಮ ಜನರ ಮೇಲೆ ಎಷ್ಟು ಎಂಬುದನ್ನು ವರ್ಣಿಸಲು ಸಾಧ್ಯವಾಗದ ಮಟ್ಟಕ್ಕೆ ಪಂದ್ಯಾವಳಿಯ ಜನಪ್ರಿಯತೆ ಹೆಚ್ಚಾಗಿದೆ. ಇಂತಹ ಒಂದು ಸ್ಪರ್ಧೆ ಅಕ್ಟೋಬರ್‌ ತಿಂಗಳ ಕೊನೆಯ ವಾರದಲ್ಲಿ ನಡೆದಿದೆ. ಫಲಿತಾಂಶ ಅಧಿಕೃತವಾಗಿ ಇನ್ನೂ ಬರಬೇಕಾಗಿದ್ದು , ಯುಎಇಯ ರಾಷ್ಟ್ರೀಯ ದಿನಾಚರಣೆ ಆಚರಿಸುವ ಡಿಸೆಂಬರ್‌ನಲ್ಲಿ ಪಂದ್ಯಾವಳಿಯ ಫಲಿತಾಂಶಗಳು ಹೊರಬೀಳುತ್ತವೆ ಪಂದ್ಯದ ಅಂಗವಾಗಿ ಅರಬ್‌ ರಾಷ್ಟ್ರಾದ್ಯಂತ ನೂರಾರು ಪಾರಿವಾಳಗಳನ್ನು ಹಾರಿಬಿಡಲಾಯಿತು. ಪಂದ್ಯದಲ್ಲಿ 46 ಗುಂಪುಗಳು ಭಾಗವಹಿಸಿದ್ದವು.

ಸ್ಥಳೀಯ ಪತ್ರಿಕೆಗಳ ವರದಿಗಳಂತೆ ಪಂದ್ಯದಲ್ಲಿ ಭಾಗವಹಿಸಿರುವ ಪ್ರತಿ ಗುಂಪಿನಲ್ಲಿ ಅತ್ಯಂತ ಎತ್ತರಕ್ಕೆ ಹಾರುವ ಸಾಮರ್ಥ್ಯ ಇರುವ ಏಳು ಪಾರಿವಾಳಗಳನ್ನು ಸ್ಪರ್ಧಿಗಳು ತಮ್ಮ ಮನೆಯ ತಾರಸಿ ಮೇಲಿಂದ ಹಾರಿಬಿಟ್ಟಿದ್ದರು. ಅತ್ಯಂತ ಹೆಚ್ಚು ವೇಳೆಯನ್ನು ಆಕಾಶದಲ್ಲಿ ಕಳೆದು ತನ್ನ ಒಡೆಯನ ಮನೆಗೆ ಬರುವ ಪಾರಿವಾಳ ಬಹುಮಾನ ಗೆಲ್ಲಲಿದೆ.

ಪಂದ್ಯಾವಳಿಯ ಉಸ್ತುವಾರಿಯನ್ನು ಪಾರಿವಾಳಗಳ ಹೆಸರಾಂತ ತರಬೇತುದಾರ ಬಖೇಯಿತ್‌ ಉಲ್‌ ರುಮೈತಿ ಅವರು ವಹಿಸಿದ್ದರು.

ಎರಡು ರೀತಿಯ ಸ್ವರ್ಧೆಗಳು : ಈ ಪಂದ್ಯಾವಳಿ ಇಲ್ಲಿನ ಜನರ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂದರೆ ಇತ್ತೀಚಿನ ದಿನಗಳಲ್ಲಿ ಪಂದ್ಯಕ್ಕಾಗಿಯೇ ಪಾರಿವಾಳ ಸಾಕುವವರ ಸಂಖ್ಯೆ ಜಾಸ್ತಿಯಾಗಿದೆ. ಇದರಿಂದ ಪಂದ್ಯಾವಳಿ ಕೂಡಾ ರೂಪಾಂತರಗಳಿಗೆ ಒಗ್ಗಿಕೊಳ್ಳತೊಡಗಿದೆ ಹಾಗಾಗಿ ಈಗ ಎರಡು ರೀತಿಯ ಪಾರಿವಾಳಗಳನ್ನು ಜನ ಸಾಕತೊಡಗಿದ್ದಾರೆ. ಎರಡು ರೀತಿಯ ಪಂದ್ಯಗಳು ಪ್ರಾರಂಭವಾಗಿವೆ. ಎತ್ತರಕ್ಕೆ ಹಾರುವ ಸ್ಪರ್ಧೆ ಒಂದಾದರೆ ಇನ್ನೊಂದು ಸಂದೇಶ ಹೊತ್ತೊಯ್ಯವ ಸ್ಪರ್ಧೆ.

ಎತ್ತರಕ್ಕೆ ಹಾರುವ ಪಾರಿವಾಳಗಳು ಕಣ್ಣಿಗೆ ಕಾಣದಷ್ಟು ಎತ್ತರಕ್ಕೆ ಹೋಗುತ್ತವೆ. ಸಂದೇಶ ಹೊತ್ತೊಯ್ಯವ ಪಾರಿವಾಳಗಳು ಎಲ್ಲಿಂದ ಎಲ್ಲಿಗೆ ಹಾರಿ ಬಂದವು ಎನ್ನುವುದಕ್ಕಿಂತ ಮುಖ್ಯವಾಗಿ ಎಷ್ಟು ವೇಳೆಯ ನಂತರ ತಮ್ಮ ತರಬೇತಿದಾರನ ಮನೆಗೆ ಬಂದವು ಎಂಬುದು ಮುಖ್ಯವಾಗುತ್ತದೆ. ಪತ್ರಿಕೆಗಳ ವರದಿ ಪ್ರಕಾರ ಸ್ಪರ್ಧಿಗಳು ತರಬೇತಿಗಾಗಿ ಸಿದ್ಧಗೊಳಿಸಿರುವ ಕನಿಷ್ಠ 100 ತಂಡಗಳು ಇವತ್ತು ಅರಬ್‌ ರಾಷ್ಟ್ರಗಳಲ್ಲಿ ಸಿಗುತ್ತವೆ. ಉನ್ನತ ಹುದ್ದೆಗಳಲ್ಲಿ ಇರುವವರು ಮತ್ತು ಪ್ರತಿಷ್ಠಿತ ತೈಲ ಉದ್ದಿಮೆದಾರರು ಇಂತಹ ತಂಡಗಳ ಒಡೆಯರಾಗಿದ್ದಾರೆ.

ಬಖೇಯಿತ್‌ ಉಲ್‌ ರುಮೈತಿ ಅವರ ಪ್ರಕಾರ ಅವರಿಗೆ ಪಂದ್ಯದ ಹುಚ್ಚು ಅವರ ತಾತನ ಕೊಡುಗೆ. ತಾವು 10 ವರ್ಷದವರಿರುವಾಗಿನಿಂದಲೂ ಈ ಬಗ್ಗೆ ಆಸಕ್ತಿ ವಹಿಸಿ, ಪಾರಿವಾಳದ ಪಂದ್ಯದ ಬಗ್ಗೆ ಅಬ್ದುಲ್‌ ರಜಾಕ್‌ ಎಂಬುವರಿಂದ ತರಬೇತಿ ಪಡೆದಿದ್ದಾಗಿ ಹೇಳುತ್ತಾರೆ. ಈಗ ಯುಎಇಯ ಮೊದಲ ತರಬೇತಿದಾರ ಎಂಬ ಹೇಗ್ಗಳಿಕೆ ಬಖೇಯಿತ್‌ ಉಲ್‌ ರುಮೈತಿ ಅವರದು. ಬಖೇಯಿತ್‌ ಉಲ್‌ ರುಮೈತಿ ಅವರು ನೂರು ಜೋಡಿ ಪಳಗಿದ ಪಾರಿವಾಳಗಳನ್ನು ಪಾಕಿಸ್ತಾನದಿಂದ ಕೊಂಡ್ಯೊಯ್ದಿದ್ದಾರೆ. ಪಾಕಿಸ್ತಾನದ ಪಾರಿವಾಳಗಳಿಗೆ ಅರಬ್‌ ರಾಷ್ಟ್ರಗಳಲ್ಲಿ ಪಂದ್ಯಾವಳಿಯ ಕಾರಣಕ್ಕೆ ಹೆಚ್ಚು ಬೇಡಿಕೆ ಇದೆ.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+