ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಳಿಚಳಿ ತಾಳೆನು ಈ ಚಳಿಯಾ , ಛಳಿ

By Staff
|
Google Oneindia Kannada News

ಬೆಂಗಳೂರು : ಚಳೀ ಅಂದ್ರೆ ಚಳಿ, ಅಬ್ಬಬ್ಬ... ಚಳಿಯೋ, ಅಮ್ಮಮ್ಮ ... ಚಳಿಯೋ..... ಶಾಲು ಹೊದ್ದುಕೊಂಡ್ರೂ ಚಳಿ ಹೋಕ್ತಾ ಇಲ್ಲ, ಸ್ವೆಟರ್‌ ಹಾಕೊಂಡ್ರೂ ಚಳಿ ಹೋಕ್ತಾ ಇಲ್ಲ. ಅಮ್ಮನ ಸೀರೆ ಹೊದ್ದುಕೊಂಡ್ರೂ ಚಳಿ ಹೋಗ್ಲಿಲ್ಲ. ಕೊನೆಗೆ ನಾನು ಏನು ಮಾಡ್ದೆ ಗೊತ್ತಾ ! ಅಡಿಗೆ ಮನೆಗೆ ಹೋದೆ, ಬಿಸಿಬಿಸಿ ಕಾಫಿ ಕುಡ್ದೆ ಚಳಿಯೆಲ್ಲ ಹೊರಟೋಯ್ತು.

ಪ್ರಾಥಮಿಕ ಶಾಲಾ ಮಾಸ್ತ್ರು ಹೇಳಿಕೊಟ್ಟ ಈ ಹಾಡನ್ನು ಹಾಡಿ ಕುಣಿಯುತ್ತಿದ್ದ ನೆನಪು ಈಗ ಒಮ್ಮೆಲೆ ಮರುಕಳಿಸಿದೆ. ನೆನಪಿನಂತರಾಳದಿಂದ ಹಳೆಯ ನೆನಪುಗಳನ್ನು ಬೆಂಗಳೂರಿನ ಚಳಿ ಹೊರಗೆಳೆಯುತ್ತಿದೆ. ಸಾಮಾನ್ಯವಾಗಿ ಡಿಸೆಂಬರ್‌ ತಿಂಗಳಿನ ಅವಧಿಯಲ್ಲಿ 16 ಡಿಗ್ರಿ ಆಸುಪಾಸಿನಲ್ಲಿ ಇರುತ್ತಿದ್ದ ಕನಿಷ್ಠ ತಾಪಮಾನ ದೊಪ್ಪನೆ 13ಕ್ಕೆ ಕುಸುದಿದೆ. ಮುಂದಿನ 48 ಗಂಟೆಗಳ ಅವಧಿಯಲ್ಲಿ ಇನ್ನೂ ಒಂದು ಡಿಗ್ರಿ ಇಳಿಯುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಹವಾಮಾನ ತಜ್ಞರು. ಇನ್ನೇಕೆ ತಡ ? ಹೊಸ ರಗ್ಗು ತರಬಾರದೆ !

ಚೆನ್ನಾಗಿದ್ದ ನಮ್ಮ ಊರು ಇದ್ದಕ್ಕಿದ್ದಂತೆ ಹೀಗೇಕಾಯಿತು ? ಬೆಂಗಳೂರನಲ್ಲಿ ಕಳೆದ ಏಪ್ರಿಲ್‌, ಮೇ ತಿಂಗಳಿನಲ್ಲಿ ತಾಪಮಾನ ಹೆಚ್ಚಿತ್ತು. ವಾತಾವರಣದಲ್ಲಿ ಉಷ್ಣತೆ ಏರುತ್ತಿದೆಯೇ ಎಂಬ ಅನುಮಾನವೂ ಕಾಡಿತ್ತು. ಗ್ರೀನ್‌ ಹೌಸ್‌ ಗ್ಯಾಸ್‌ಗಳ ಪರಿಣಾಮವಾಗಿ ಹಾಗೂ ಮರಗಿಡಗಳು, ಕೆರೆ - ಕುಂಟೆಗಳು ಇದ್ದ ಜಾಗದಲ್ಲಿ ಕಾಂಕ್ರೀಟ್‌ ಕಾಡುಗಳು ತಲೆ ಎತ್ತಿರುವ ಪರಿಣಾಮವಾಗಿ ಸಿಮೆಂಟ್‌ ಕಟ್ಟಡಗಳು ಕಾದು ಬಿಸಿಯ ಅನುಭವ ಆಗುತ್ತಿದೆ ಎಂಬ ತಜ್ಞರ ಹೇಳಿಕೆಗಳನ್ನು ಉಲ್ಲೇಖಿಸಿ, ಲೇಖನವನ್ನು ನಾವೂ ಪ್ರಕಟಿಸಿದ್ದೆವು. ಕೆರೆಗಳೆಲ್ಲ 30 -40 ಸೈಟ್‌ಗಳಾದ ಬಗ್ಗೆಯೂ ತಿಳಿಸಿದ್ದೆವು.

ಹಾಗಾದರೆ ಬೆಂಗಳೂರಿನಲ್ಲಿ ಈಗ ಕೊರೆಯುವ ಚಳಿಗೂ, ಕುಸಿದಿರುವ ಉಷ್ಣತೆಗೂ ಕಾರಣವೇನು ? ಹವಾಮಾನ ವೀಕ್ಷಣಾಲಯದ ಅಧಿಕಾರಿಗಳ ರೀತ್ಯ ಈ ಅವಧಿಯಲ್ಲಿ ಸಾಮಾನ್ಯವಾಗಿ ಬಂಗಾಳ ಕೊಲ್ಲಿಯಿಂದ ಬೀಸುವ ಬಿಸಿ ಗಾಳಿ ಬೆಂಗಳೂರಿನ ಹಾಗೂ ರಾಜ್ಯದ ವಾತಾವರಣವನ್ನು ತುಸು ಬೆಚ್ಚಗೆ ಇಡುತ್ತಿತ್ತು. ಆದರೆ ಈ ಬಾರಿ ಇನ್ನೂ ಕೊಲ್ಲಿಯಿಂದ ಬಿಸಿ ಗಾಳಿ ಬೀಸಿ ರಾಜ್ಯವನ್ನು ಬೆಚ್ಚಗೆ ಮಾಡದ ಕಾರಣ ಕೊರೆಯುವ ಚಳಿಯ ಪ್ರಮಾಣ ಹೆಚ್ಚಿದೆ.

ಬಹುತೇಕ ಒಂದು ವಾರದಿಂದಲೂ ಬೆಂಗಳೂರಿನಲ್ಲಿ ಇದೇ ಸ್ಥಿತಿ. ಬೆಳಗಿನ ವೇಳೆ ತುಂತುರು ಹನಿ ಬಿದ್ದಂತೆ ಇಬ್ಬನಿ . ಪೂರ್ವ ಭಾರತದ ಭಾಗದಿಂದ ಬಿಸಿ ಗಾಳಿ ಬೀಸುವ ಬದಲು ಉತ್ತರ ಭಾರತದಿಂದ ದಕ್ಷಿಣದೆಡೆಗೆ ಕುಳಿರ್ಗಾಳಿ ಮಾತ್ರ ಬೀಸುತ್ತಿದೆ. ಒಟ್ಟಿನಲ್ಲಿ ಇನ್ನೂ ನಾಲ್ಕಾರು ದಿನ ಚಳಿಯನ್ನು ಬೆಂಗಳೂರಿಗರು ಅನುಭವಿಸಲೇ ಬೇಕು. ಆನಂತರ ಪೂರ್ವದಿಕ್ಕಿನಿಂದ ಬಿಸಿಗಾಳಿ ಬೀಸುವ ಸಾಧ್ಯತೆ ಇದ್ದು. ವಾತಾವರಣ ಆಹ್ಲಾದ ನೀಡಲಿದೆಯಂತೆ.

ಅಂದಹಾಗೆ ರಾಜ್ಯದಲ್ಲಿ ಮತ್ತೆ ಒಣಹವೆ ಮೂಡಿದೆ. ಕನಿಷ್ಠ ಉಷ್ಣಾಂಶ ರಾಜ್ಯದಲ್ಲಿ 10ಡಿಗ್ರಿ ಸೆಲ್ಸಿಯಸ್‌ ಗುಲ್ಬರ್ಗಾದಲ್ಲಿ ದಾಖಲಾಗಿದೆ. ಕರಾವಳಿಯ ಬಹುತೇಕ ಕಡೆ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆ ಆಗಿದೆ. ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿದೆ.

ಮುನ್ಸೂಚನೆಯಂತೆ ರಾಜ್ಯದಲ್ಲಿ ಒಣಹವೆ ಇದ್ದು, ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಶುಭ್ರ ಆಕಾಶ ಇದ್ದು, ಕನಿಷ್ಠ ತಾಪಮಾನ 13ರ ಆಸುಪಾಸಿನಲ್ಲಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X