ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಚ್ಛಿದ್ರಕಾರಿ ಶಕ್ತಿಗಳಿಗೆ ಅವಕಾಶ ನೀಡುವುದಿಲ್ಲ : ಮುಖ್ಯಮಂತ್ರಿ ಘೋಷಣೆ

By Staff
|
Google Oneindia Kannada News

ಬೆಂಗಳೂರು : ಕನ್ನಡಿಗರು ಮೃದುವಾಗಿರುವಾಗ ಮೃದುವಾಗಿರುತ್ತಾರೆ, ಕಠಿಣ ಸಂದರ್ಭಗಳಲ್ಲಿ ರಣ ಕಠಿಣ ನಿಲುವು ತಳೆಯುತ್ತಾರೆ. ಇದಕ್ಕೆ ರಾಜ್‌ ಅಪಹರಣ ಕಾಲದಲ್ಲಿ 108 ದಿನ ಕನ್ನಡಿಗರು ಮೆರೆದ ತಾಳ್ಮೆಯೇ ಸಾಕ್ಷಿ ಎಂದು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಹೇಳಿದ್ದಾರೆ. ಭಾನುವಾರ ಬಸವನಗುಡಿಯ ನ್ಯಾಷನಲ್‌ ಕಾಲೇಜ್‌ ಮೈದಾನದಲ್ಲಿ ನಡೆದ ಧನ್ಯ ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಕಾಡಿನಿಂದ ನಾಡಿಗೆ ಸುರಕ್ಷಿತವಾಗಿ ಬಂದ ವರನಟ ರಾಜ್‌ಕುಮಾರ್‌, ಎಸ್‌.ಎ. ಗೋವಿಂದರಾಜು, ನಾಗಪ್ಪ, ನಾಗೇಶ್‌ ಅವರೊಂದಿಗೆ ಸನ್ಮಾನ ಸ್ವೀಕರಿಸಿದ ಮುಖ್ಯಮಂತ್ರಿಗಳು ರಾಜ್‌ ಅಪಹರಣ ಪ್ರಕರಣದಿಂದ ನಾವು ಕಲಿಯಬೇಕಾದ ಪಾಠ ಬಹಳಷ್ಟಿದೆ ಎಂದರು. ಅಪಹರಣ ಕಾಲದಲ್ಲಿ ಕನ್ನಡಿಗರು ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಕೃಷ್ಣ , ಈಗ ಮತ್ತೆ ಕನ್ನಡದ ಗಡಿ ರಕ್ಷಣೆಯ ಬಗ್ಗೆ ಕಾನೂನು ಸ್ಪರ್ಧೆ ನಡೆಯುತ್ತಿದೆ. ಈ ಸಮರವನ್ನು ಎದುರಿಸಲು ಸರಕಾರದೊಂದಿಗೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.

ಒಬ್ಬ ಕಾಡುಗಳ್ಳನನ್ನು ಹಿಡಿಯಲಾಗದಿದ್ದರೆ ಮನೆಗೆ ಹೋಗಿ ಎಂದು ನ್ಯಾಯಾಲಯ ಛೀಮಾರಿ ಹಾಕಿತ್ತು. ಆದರೆ, ಆ ಸಂದರ್ಭದಲ್ಲಿ ಇದ್ದ ನೋವು ನಮಗೆ ಹಾಗೂ ನಿಮಗೆ ಮಾತ್ರ ಗೊತ್ತು. ಜನಾಂಗ ಜನಾಂಗಗಳ ನಡುವೆ ಘರ್ಷಣೆ ನಡೆಯುತ್ತೆ, ರಕ್ತದ ಕೋಡಿ ಹರಿಯತ್ತೆ ಎಂದು ಭಾವಿಸಿದ್ದವರಿಗೆ ಕನ್ನಡಿಗರು ತಾಳ್ಮೆಯ ಉತ್ತರ ನೀಡಿ ದೇಶಕ್ಕೆ ಮಾದರಿಯಾದರು ಎಂದರು.

ರಾಜ್ಯದಲ್ಲಿ ವಿಚ್ಛಿದ್ರಕಾರಿ ಶಕ್ತಿಗಳು ಮನೆಮಾಡಲು ಬಿಡುವುದಿಲ್ಲ. ಸರ್ಕಾರ ಈ ವಿಷಯದಲ್ಲಿ ದೃಢ ಸಂಕಲ್ಪ ತಳೆದಿದೆ ಎಂದರು. ಒಂದು ಅಧ್ಯಾಯ ಸುಖಾಂತವಾಗಿದೆ ಮತ್ತೊಂದು ಅಧ್ಯಾಯ ಈಗ ಆರಂಭವಾಗಿದೆ ಎಂದರು. ಇದೇ ಸಂದರ್ಭದಲ್ಲಿ ವಾರ್ತಾ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್‌ ಹಾಗೂ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಡಾ. ರಾಜ್‌ಕುಮಾರ್‌, ಪಾರ್ವತಮ್ಮ ರಾಜ್‌ಕುಮಾರ್‌, ರೆಬೆಲ್‌ ಸ್ಟಾರ್‌ ಅಂಬರೀಶ್‌, ಪ್ರೊ. ಬಿ.ಕೆ. ಚಂದ್ರಶೇಖರ್‌, ಸಾ.ರಾ. ಗೋವಿಂದು, ಕೆ.ಸಿ.ಎನ್‌. ಚಂದ್ರಶೇಖರ್‌ ಮಾತನಾಡಿದರು. ನಟ ಶಿವರಾಂ ಕಾರ್ಯಕ್ರಮ ನಿರೂಪಿಸಿದರು. ನಾಯಕ ನಟ ವಿಷ್ಣುವರ್ಧನ್‌, ಜಗ್ಗೇಶ್‌, ರಾಜ್‌ ಪುತ್ರರಾದ ಶಿವರಾಜ್‌ಕುಮಾರ್‌, ಸಿ.ವಿ.ಎಲ್‌. ಶಾಸ್ತ್ರೀ, ಅಶೋಕ್‌, ರಾಘವೇಂದ್ರ, ಪುನೀತ್‌ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ : ಕರ್ನಾಟಕ ಚಲನಚಿತ್ರೋದ್ಯಮ ಕ್ರಿಯಾ ಸಮಿತಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ರಾಜ್‌ಕುಮಾರ್‌ ಸೇರಿದಂತೆ ಹಲವು ಚಿತ್ರನಟರು ಹಾಡಿ ಕುಣಿದರು. ಜಗ್ಗೇಶ್‌, ರಾಘವೇಂದ್ರ, ಪುನೀತ್‌, ಶಿವರಾಜ್‌ಕುಮಾರ್‌, ಉಪೇಂದ್ರ, ಬಿ.ಕೆ. ಸುಮಿತ್ರ, ಎಸ್‌. ಜಾನಕಿ, ಸಿ. ಅಶ್ವತ್‌ ಹಾಗೂ ನೃತ್ಯ ಕಲಾವಿದರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳನ್ನು ರಂಜಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X