ಪುಣೆಯಲ್ಲಿನ ಓಶೋ ಆಶ್ರಮಕ್ಕೆ ಶಿಷ್ಯರಪ್ರವೇಶ ನಿರ್ಬಂಧಕ್ಕೆ ಆಕ್ಷೇಪ
ನವದೆಹಲಿ : ಪುಣೆಯಲ್ಲಿನ ಓಶೋ ಆಶ್ರಮ ಪ್ರವೇಶಕ್ಕೆ ತಮಗೆ ನಿರ್ಬಂಧ ವಿಧಿಸಿರುವುದನ್ನು ಪ್ರತಿಭಟಿಸಿ ಕೆಲವು ಓಶೋ ಅನುಯಾಯಿಗಳು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ಓಶೋ ಜನ್ಮ ದಿನಾಚರಣೆ ಅಂಗವಾಗಿ ವಾರದಿಂದ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಓಶೋ ಜನ್ಮದಿನವಾದ ಸೋಮವಾರ (ಇಂದು) ಮುಕ್ತಾಯಗೊಳ್ಳಿದ್ದು, ಇದೇ ಸಂದರ್ಭದಲ್ಲಿ ಓಶೋ ಇಂಟರ್‌ನ್ಯಾಷನಲ್ ಫೌಂಡೇಶನ್ ವಿರುದ್ಧ ದೂರು ದಾಖಲಾಗಿದೆ. ಓಶೋ ಶ್ರಮದ ವಾರಸುದಾರರೆಂದು ಸ್ವತಃ ಕರೆದುಕೊಂಡಿರುವ ಆರು ಮಂದಿ ವ್ಯಕ್ತಿಗಳು ನ್ಯೂಯಾರ್ಕ್‌ನಿಂದ ಆಶ್ರಮವನ್ನು ನಿಯಂತ್ರಿಸುತ್ತಿದ್ದಾರೆ. ಅವರು ತಮಗೆ ಆಶ್ರಮ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆ. ಇದನ್ನು ತಗೆಸಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.
ಭಾರತದಲ್ಲಿರುವ ಓಶೋ ಅಶ್ರಮಗಳನ್ನು, ನ್ಯೂಯಾರ್ಕ್‌ನಿಂದ ನಿಯಂತ್ರಿಸುತ್ತಿರುವ ಜ್ಯೂರಿಚ್ ಮೂಲದ ಓಶೋ ಇಂಟರ್‌ನ್ಯಾಷನಲ್ ಫೌಂಡೇಷನ್ ವಿರುದ್ಧ ಮಾಧ್ಯಮಗಳ ಮೂಲಕ ದ್ವನಿ ಎತ್ತಿದ್ದಕ್ಕಾಗಿ ಆಶ್ರಮ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ಓಶೋ ಸನ್ಯಾಸಿ ಸ್ವಾಮಿ ಚೈತನ್ಯ ಕೀರ್ತಿ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಜೆ. ಎಸ್. ವರ್ಮಾ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಜುಲೈನಿಂದ ಪ್ರವೇಶ ನಿಷೇಧ : ತಾವು 1971ರಿಂದಲೂ ಓಶೋ ಅವರ ಅನುಯಾಯಿಯಾಗಿದ್ದು, ಆಶ್ರಮ ಪ್ರಾರಂಭವಾದಾಗಿನಿಂದಲೂ ಪುಣೆಯಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ತತ್ವಗಳ ಪ್ರಸಾರಕ್ಕೆ ಸಂಬಂಧಿಸಿದಂತೆ ಪುಸ್ತಕಗಳ ಸಂಪಾದನೆ, ಪ್ರಕಟಣೆಗಳನ್ನು ನೋಡಿಕೊಳ್ಳಲು ಓಶೋ ಅವರೇ ತಮ್ಮನ್ನು ನೇಮಿಸಿದ್ದರು. ತಾವು ವಿದೇಶ ಪ್ರವಾಸದಿಂದ ವಾಪಸ್ಸಾದ ನಂತರ ಕಳೆದ ಜುಲೈನಿಂದ ತಮಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಚೈತನ್ಯ ಕೀರ್ತಿ ವಿವರಿಸಿದ್ದಾರೆ. 1987ರಲ್ಲಿ ಪುಣೆಯಲ್ಲಿ ಆಶ್ರಮ ಸ್ಥಾಪಿಸಿದ ಓಶೋ 1990 ಜನವರಿಯಲ್ಲಿ ಕೊನೆಯುಸಿರೆಳೆಯುವವರೆಗೆ ಅಲ್ಲಿಯೇ ವಾಸವಾಗಿದ್ದುದನ್ನು ಸ್ಮರಿಸಬಹುದು.
ಈ ಮಧ್ಯೆ ಜ್ಯೂರಿಚ್ ಮೂಲದ ಓಶೋ ಇಂಟರ್‌ನ್ಯಾಷನಲ್ ಫೌಂಡೇಷನ್ ಕೂಡಾ, ಭಾರತೀಯ ಮೂಲದ ಓಶೋ ಶಿಷ್ಯರು ಓಶೋವರ್ಲ್ಡ್ ಎಂಬ ವೆಬ್ ಸೈಟ್ ಮೂಲಕ ತನ್ನ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸುತ್ತಿದ್ದಾರೆ. ಓಶೋ ಬರೆದಿರುವ ಎಲ್ಲ ಪುಸ್ತಕಗಳ ಕಾಪಿರೈಟ್ ತನಗೆ ಸೇರಿದ್ದು ಎಂದು ಅಮೆರಿಕದಲ್ಲಿ ಮೊಕದ್ದಮೆ ದಾಖಲಿಸಿದೆ.
(ಯುಎನ್‌ಐ)