ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿಲ್‌ ಕುಂಬ್ಳೆಗೆ ಪ್ರತಿಷ್ಠಿತ ಕೆ.ಕೆ. ಬಿರ್ಲಾ ಫೌಂಡೇಷನ್‌ ಕ್ರೀಡಾ ಪ್ರಶಸ್ತಿ

By Staff
|
Google Oneindia Kannada News

Anil Kumbleನವದೆಹಲಿ : ವಿಶ್ವ ಪ್ರಸಿದ್ಧ ಕ್ರಿಕೆಟಿಗ ಕರ್ನಾಟಕದ ಅನಿಲ್‌ ಕುಂಬ್ಳೆ ಅವರು ಪ್ರತಿಷ್ಠಿತ ಕೆ.ಕೆ. ಬಿರ್ಲಾ ಫೌಂಡೇಷನ್‌ನ 1999-2000 ಸಾಲಿನ ಕ್ರೀಡಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕುಂಬ್ಳೆ ಅವರೊಂದಿಗೆ ಚೆಸ್‌ ಚಾಂಪಿಯನ್‌ ಆರತಿ ರಾಮಸ್ವಾಮಿ ಅವರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರತಿವರ್ಷ ಕ್ರೀಡಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಸಲ್ಲಿಸಿರುವ ಇಬ್ಬರು ಕ್ರೀಡಾಪಟುಗಳಿಗೆ ಫೌಂಡೇಷನ್‌ ಪ್ರಶಸ್ತಿ ನೀಡುತ್ತದೆ. 1991 ರಿಂದ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ವಿಜೇತರಿಗೆ ಪ್ರಶಸ್ತಿ ರೂಪದಲ್ಲಿ ತಲಾ ಒಂದು ಲಕ್ಷ ರುಪಾಯಿ ನಗದು ನೀಡಲಾಗುತ್ತದೆ. ಕ್ರೀಡೆಗೆ ತಮ್ಮನ್ನು ಅರ್ಪಿಸಿಕೊಳ್ಳುವ ಮೂಲಕ ಕ್ರೀಡಾಕ್ಷೇತ್ರಕ್ಕೆ ಕುಂಬ್ಳೆ ಮತ್ತು ಆರತಿ ಗೌರವ ತಂದಿದ್ದಾರೆ ಅವರು ಎಂದು ಫೌಂಡೇಷನ್‌ನ ಪ್ರಕಟಣೆ ಬಣ್ಣಿಸಿದೆ.

ಅನಿಲ್‌ ಕುಂಬ್ಳೆ ಅವರ ಸಾಧನೆಯನ್ನು ವಿಶೇಷವಾಗಿ ಹೊಗಳಿರುವ ಫೌಂಡೇಷನ್‌, ಕುಂಬ್ಳೆ ಭಾರತ ಕ್ರಿಕೆಟ್‌ ತಂಡದ ಅವಿಭಾಜ್ಯ ಅಂಗ, ಅವರ ಸಾಧನೆಯನ್ನು ತಂಡ ಬಹುವಾಗಿ ನೆಚ್ಚಿಕೊಂಡಿದೆ ಎಂದಿದೆ. 1990 ರಲ್ಲಿ ಇಂಗ್ಲೆಂಡ್‌ ವಿರುದ್ಧದ ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣ ಮಾಡಿದ ಕುಂಬ್ಳೆ ತಮ್ಮ ಸಾಮರ್ಥ್ಯವನ್ನು ದಶಕದ ಉದ್ದಕ್ಕೂ ಸಾಬೀತು ಪಡಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನ ವಿರುದ್ಧ ಇನಿಂಗ್ಸ್‌ನ ಹತ್ತೂ ವಿಕೆಟ್‌ಗಳನ್ನು ಪಡೆದು ವಿಶ್ವದಾಖಲೆಯನ್ನು ಸರಿಗಟ್ಟಿದ ಸಾಧನೆಯಂತೂ ಅವಿಸ್ಮರಣೀಯ. ಅಂತೆಯೇ ಕಳೆದ ವರ್ಷ ಕಾನ್ಪುರ್‌ನಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ನಲ್ಲಿ ಹಾರ್ನ್‌ ವಿಕೆಟ್‌ ಕಬಳಿಸುವ ಮೂಲಕ ಟೆಸ್ಟ್‌ಗಳಲ್ಲಿ 250 ವಿಕೆಟ್‌ಗಳ ಸಾಧನೆ ಪೂರೈಸಿದ ಅವರು, ಈ ಸಾಧನೆಗೈದ ಮೂರನೇ ಭಾರತೀಯರೆನಿಸಿದರು. ಒಂದು ದಿನದ ಕ್ರಿಕೆಟ್‌ನಲ್ಲಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತೀಯ ಎನ್ನುವ ಸಾಧನೆಯೂ ಕುಂಬ್ಳೆ ಅವರ ಹೆಸರಿನಲ್ಲಿದೆ. ಅದು ಕೂಡ ಸಾಧ್ಯವಾದದ್ದು ಕಳೆದ ಜನವರಿಯಲ್ಲಿ ಪರ್ತ್‌ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ . ಆ ಪಂದ್ಯದಲ್ಲಿ ಕಪಿಲ್‌ದೇವ್‌ ಅವರ 253 ವಿಕೆಟ್‌ಗಳ ಸಾಧನೆಯನ್ನು ಕುಂಬ್ಳೆ ದಾಟಿದರು ಎಂದು ಫೌಂಡೇಷನ್‌ ಪ್ರಕಟಣೆ ಕುಂಬ್ಳೆ ಸಾಧನೆಗಳನ್ನು ಪಟ್ಟಿ ಮಾಡಿದೆ.

ಕಪಿಲ್‌ದೇವ್‌ ಹಾಗೂ ಸ್ಕ್ವಾಶ್‌ ಚಾಂಪಿಯನ್‌ ಭುವನೇಶ್ವರಿದೇವಿ ಅವರು ಬಿರ್ಲಾ ಕ್ರೀಡಾ ಪ್ರಶಸ್ತಿಯನ್ನು ಪಡೆದ ಮೊದಲಿಗರು. ಉಳಿದಂತೆ 1992 ರಲ್ಲಿ ಗೀತ್‌ಸೇಥಿ ಹಾಗೂ ವಿಶ್ವನಾಥನ್‌ ಆನಂದ್‌, 1993 ರಲ್ಲಿ ರಮೇಶ್‌ ಕೃಷ್ಣನ್‌ ಹಾಗೂ ಬಹದ್ದೂರ್‌ ಪ್ರಸಾದ್‌, 1994 ರಲ್ಲಿ ಜಸ್ಪಾಲ್‌ ರಾಣಾ ಹಾಗೂ ಕೆ. ಮಲ್ಲೇಶ್ವರಿ, 1995 ರಲ್ಲಿ ಸಚಿನ್‌ ತೆಂಡೂಲ್ಕರ್‌, ಮಾಲತಿ ಹೊಳ್ಳ ಹಾಗೂ ಶೈನಿ ವಿಲ್ಸನ್‌ ಅವರಿಗೆ ವಿಶೇಷ ಪ್ರಶಸ್ತಿ , 1996 ರಲ್ಲಿ ಪಿ.ಗೋಪಿಚಂದ್‌, ಕುಂಜುರಾಣಿ ದೇವಿ ಮತ್ತು ಸಂತೋಷ್‌ ಯಾದವ್‌ರಿಗೆ ವಿಶೇಷ ಪ್ರಶಸ್ತಿ , 1997 ರಲ್ಲಿ ಲಿಯಾಂಡರ್‌ ಪೇಸ್‌ ಹಾಗೂ ಮಹೇಶ್‌ ಭೂಪತಿ ಅವರಿಗೆ ಜಂಟಿ ಪ್ರಶಸ್ತಿ ಹಾಗೂ ಅಪರ್ಣ ಪೊಪಟ್‌, 1998 ರಲ್ಲಿ ಧನರಾಜ್‌ ಪಿಳ್ಳೈ ಹಾಗೂ ಜ್ಯೋತಿರ್ಮಯಿ ಸಿಕ್ದರ್‌ ಅವರುಗಳು ಪ್ರಶಸ್ತಿ ಪಡೆದಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X