ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೆರಡು ದಿನದಲ್ಲಿ ಇಂಫಾಲದಿಂದ ರಾಜ್ಯಕ್ಕೆ ಬಿಎಸ್‌ಎಫ್‌- ಸಿ.ದಿನಕರ್‌

By Staff
|
Google Oneindia Kannada News

ಬೆಂಗಳೂರು : ಅರಣ್ಯ ಪ್ರದೇಶದ ಕಾರ್ಯಾಚರಣೆಯಲ್ಲಿ ಪಳಗಿದ ಗಡಿಭದ್ರತಾ ಪಡೆಯ ತಂಡ ವೀರಪ್ಪನ್‌ ಶಿಕಾರಿಯಲ್ಲಿ ಉಭಯ ರಾಜ್ಯಗಳ ಎಸ್‌ಟಿಎಫ್‌ ತಂಡಕ್ಕೆ ನೆರವಾಗಲು ಇನ್ನೆರಡು ದಿನಗಳಲ್ಲಿ ಮಣಿಪುರದ ಇಂಫಾಲದಿಂದ ಕರ್ನಾಟಕಕ್ಕೆ ಆಗಮಿಸಲಿದೆ ಎಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಸಿ. ದಿನಕರ್‌ ಹೇಳಿದ್ದಾರೆ.

ಗಡಿ ಭದ್ರತಾ ಪಡೆಯ ಆಗಮನದ ಬಗ್ಗೆ ನಮಗೆ ಸುದ್ದಿ ಬಂದಿದೆ. ಡಿಸೆಂಬರ್‌ 8 ಮತ್ತು 9 ರಂದು ಎರಡು ತಂಡಗಳಲ್ಲಿ ಬಿಎಸ್‌ಎಫ್‌ ಪಡೆ ಆಗಮಿಸುತ್ತದೆ. ತಂಡದಲ್ಲಿ ಕಮಾಂಡೋಗಳೂ ಇರುತ್ತಾರೆ ಎಂದು ಬುಧವಾರ ಇಳಿಸಂಜೆ ಯುಎನ್‌ಐನೊಂದಿಗೆ ಮಾತನಾಡಿದ ದಿನಕರ್‌ ಹೇಳಿದರು.

ವೀರಪ್ಪನ್‌ ಶಿಕಾರಿಯಲ್ಲಿ ಪಾಲ್ಗೊಂಡಿರುವ ವಿಶೇಷ ಕಾರ್ಯಾಚರಣೆ ಪಡೆಯ 2 ಸಾವಿರ ಪೊಲೀಸರಿಗೆ ಬಿಎಸ್‌ಎಫ್‌ ಆಗಮನ ನೈತಿಕ ಸ್ಥೈರ್ಯ ತುಂಬುವುದೆಂದು ನಿರೀಕ್ಷಿಸಲಾಗಿದೆ. ಈ ಬಾರಿ ಕಾಡುಗಳ್ಳನ ಶಿಕಾರಿಗೆ ಆಗಮಿಸುತ್ತಿರುವ ಪಡೆಯ ಯೋಧರು ಭಯೋತ್ಪಾದನೆ ನಿಗ್ರಹ ಚಟುವಟಿಕೆಗಳಲ್ಲಿ ಹೆಸರು ಮಾಡಿದ್ದು , ಅರಣ್ಯ ಪ್ರದೇಶದ ಪರಿಚಯವನ್ನೂ ಹೊಂದಿದ್ದಾರೆ. ಯೋಧರು ಅತ್ಯಾಧುನಿಕ ಆಯುಧಗಳನ್ನು ಹೊಂದಿದ್ದಾರೆ ಎಂದು ಬಿಎಸ್‌ಎಫ್‌ ಅಧಿಕೃತ ಮೂಲಗಳು ತಿಳಿಸಿವೆ. ಕಳೆದ ಬಾರಿ ಶಿಕಾರಿ ಪ್ರಯತ್ನದಲ್ಲಿ ಭಾಗವಹಿಸಿ ವಿಫಲವಾಗಿದ್ದ 300 ಯೋಧರ ಬಿಎಸ್‌ಎಫ್‌ ಪಡೆ ಕಾಡಿನ ಕಾರ್ಯಾಚರಣೆಗೆ ಅಗತ್ಯವಾದ ಅನುಭವ ಹೊಂದಿರಲಿಲ್ಲ ಎನ್ನಲಾಗಿದೆ.

ವೀರಪ್ಪನ್‌ ಸಮಸ್ಯೆ ಪ್ರಾದೇಶಿಕ ಸಮಸ್ಯೆಯಾಗಿರುವುದರಿಂದ, ಕಾರ್ಯಾಚರಣೆಗೆ ಬಿಎಸ್‌ಎಫ್‌ ಪಡೆಗಳನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ಕೆಲವು ದಿನಗಳ ಹಿಂದಷ್ಟೇ ಹೇಳಿದ್ದ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಅವರ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಲು ಮೂಲಗಳು ನಿರಾಕರಿಸಿವೆ.

(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X