ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಮತ : ಕ್ರಿಕೆಟ್‌ ಫಿಕ್ಸರ್‌ಗಳಿಗೆ ಎಳ್ಳಷ್ಟೂ ಅನುಕಂಪ ಕೂಡದು

By Staff
|
Google Oneindia Kannada News

*ಕ್ರಿತ್ತಿವಾಸ್‌ ಮುಖರ್ಜಿ

ಕಲ್ಕತ್ತ : ‘ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು. ಜನರ ಭಾವನೆಗಳ ಜೊತೆ ಆಟವಾಡಿರೋ ಕಳ್ಳ ಕ್ರಿಕೆಟಿಗರಿಗೆ ತಕ್ಕ ಶಾಸ್ತಿಯಾಗಲೇಬೇಕು. ಅವರು ಮಾಡಿರೋದು ಅಕ್ಷಮ್ಯ ಅಪರಾಧ’- ಮ್ಯಾಚ್‌ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಆಟಗಾರರ ಕುರಿತು ಜನ ಈ ಹೊತ್ತು ಆಡುತ್ತಿರುವ ಮಾತುಗಳಿವು. ಆದರೆ ಬಿಸಿಸಿಐ ಶಿಕ್ಷೆ ಕೊಡುವ ವಿಷಯವನ್ನು ಜಿಜ್ಞಾಸೆ ಮಾಡಿಕೊಂಡು ತಲೆ ಕೆಡಿಸಿಕೊಳ್ಳುತ್ತಿದೆ.

ಅತಿ ಕಡಿಮೆ ತೂಕದ ಬ್ಯಾಟ್‌ ಹಿಡಿದು ಮುಂಗೈ ಚಲನೆಯಿಂದಲೇ ಕಲಾತ್ಮಕ ಹೊಡೆತಗಳನ್ನು ಹೊಡೆಯುತ್ತಿದ್ದ ಅಜರ್‌ನ ಎಣಿಸಲಾರದಷ್ಟು ಅಭಿಮಾನಿಗಳು ಇವತ್ತು ಆತನನ್ನು ಪರಮ ನೀಚ ಅನ್ನುತ್ತಿದ್ದಾರೆ. ಇಂಥಾದರಲ್ಲೂ ಬಿಸಿಸಿಐ ಅಧ್ಯಕ್ಷ ಎ.ಸಿ.ಮುತ್ತಯ್ಯ, ಕ್ರಿಕೆಟಿಗೆ ಆತ ಸಲ್ಲಿಸಿರುವ ಸೇವೆಯನ್ನು ಶಿಕ್ಷೆ ನಿರ್ಧರಿಸುವ ಸಂದಭದಲ್ಲಿ ಶೇ.30ರಷ್ಟಾದರೂ ಪರಿಗಣಿಸಬೇಕು ಎಂದಿದ್ದಾರೆ.

ಬಿಸಿಸಿಐನ ಶಿಸ್ತು ಸಮಿತಿಯ ಮತ್ತೊಬ್ಬ ಸದಸ್ಯ ಮೊರಾರ್ಕ, ‘ಅಜರ್‌ ಅವರಿಗೆ ಜೀವನ ಪರ್ಯಂತ ಆಡದಿರುವಂತೆ ಶಿಕ್ಷೆ ಹೇರುವುದು ಖಂಡಿತಾ ಸರಿಯಲ್ಲ. ಅವರು ಮಾಡಿರುವ ತಪ್ಪಿಗೆ ತಕ್ಕ ದಂಡ ವಿಧಿಸುವುದೇ ಸೂಕ್ತ ’ ಎನ್ನುತ್ತಾರೆ. ಆದರೆ ಒಂದು ಕಾಲದಲ್ಲಿ ಅಜರ್‌ ಬ್ಯಾಟು ಹಿಡಿದರೆ ಕಣ್ಣು ಮಿಟುಕಿಸದಂತೆ ಅವನ ಬ್ಯಾಟಿನ ಚಲನೆಯನ್ನೇ ಗಮನಿಸುತ್ತಿದ್ದ ಅಭಿಮಾನಿಗಳು ಈಗ ಥೂ ಛೀ ಅನ್ನುತ್ತಿದ್ದಾರೆ.

‘ನಾನೂ ಕ್ರಿಕೆಟ್‌ ಅಭಿಮಾನಿಯೇ. ಆದರೆ ಇವರು ಮೋಸ ಮಾಡಿರೋದು ದೇಶಕ್ಕೆ; ಆಟ ಆಡಿರೋದು ಜನರ ಭಾವನೆಗಳ ಜೊತೆಯಲ್ಲಿ. ಅದರಲ್ಲೂ ಅಜರ್‌ ಮತ್ತು ಜಡೇಜ ಅವರ ಹೆಸರು ಕೇಳಿದರೇ ಮೈ ಉರಿಯುತ್ತದ’ ಅನ್ನುತ್ತಾರೆ ರಾಶ್‌ಬೆಹಾರಿ ಬೀದಿಯ 46 ವರ್ಷದ ಶ್ಯಾಮ್‌ಲಾಲ್‌ ಚಕ್ರವರ್ತಿ. ‘ಅಜರ್‌ ತಮ್ಮ ಬ್ಯಾಟಿಂಗ್‌ ಕೌಶಲ್ಯದಿಂದ ಕೋಟ್ಯಂತರ ಜನಮನ ಗೆದ್ದವರು. ನನ್ನ ಬಳಿ ಅವರ ಫೋಟೋಗಳ ದೊಡ್ಡ ಆಲ್ಬಂ ಇತ್ತು. ಆದರೆ ಯಾವತ್ತು ಅವರು ಕಳ್ಳಾಟ ಆಡಿರೋದು ಗೊತ್ತಾಯ್ತೋ ಆವತ್ತೇ ಆಲ್ಬಂನ್ನು ಹರಿದು ಬಿಸಾಟೆ. ಮೋಸ ಮಾಡೋದು ಅಂದರೆ ಹೀಗಾ. ಕ್ರಿಕೆಟ್‌ ಪಿಚ್‌ಗೆ ಅವರನ್ನ ಯಾವುದೇ ಕಾರಣಕ್ಕೂ ಸೇರಿಸಕೂಡದು’ ಎಂಬುದು ಅಭಿಷೇಕ್‌ ಸೇನ್‌ ಎಂಬುವರ ಆಕ್ರೋಶ.

ಬಿಬಿಸಿ ಸರ್ವೇ ಹೇಳುವುದೂ ಇದನ್ನೇ : ವಿಶ್ವಾದ್ಯಂತ ಬಿಬಿಸಿ ನಡೆಸಿರುವ ಒಂದು ಸಮೀಕ್ಷೆಯ ಪ್ರಕಾರ, ಭಾರತದ ಶೇ. 95ರಷ್ಟು ಮಂದಿ ಕ್ರಿಕೆಟ್‌ ರಂಗದಲ್ಲಿ ಭ್ರಷ್ಟಾಚಾರ ಇದೆ ಅಂದಿದ್ದಾರೆ. 66 ಪ್ರತಿಶತ ಜನ ಮೋಸದಾಟದಲ್ಲಿ ಭಾಗಿಯಾಗಿರುವವರಿಗೆ ಆಜೀವ ನಿಷೇಧ ಹೇರಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ. ದೇಶವಿಡೀ ಮೆಚ್ಚಿಕೊಂಡಿದ್ದ ಆಟವನ್ನು ಮಲಿನಗೊಳಿಸಿದ ಆಟಗಾರರು ಸಾರ್ವಜನಿಕರಲ್ಲಿ ಕ್ಷಮೆ ಕೇಳಬೇಕೆಂದು ಶೇ. 26ರಷ್ಟು ಮಂದಿ ಹೇಳಿದ್ದಾರೆ.

ಬಿಸಿಸಿಐ ಸದಸ್ಯರಲ್ಲೇ ಆರೋಪಿಗಳಿಗೆ ಆಜೀವ ಪರ್ಯಂತ ನಿಷೇಧ ಹೇರುವ ವಿಷಯದಲ್ಲಿ ತಲೆಗೊಂದು ಅಭಿಪ್ರಾಯವಿದೆ. ನಡೆಸಿರುವ ಎರಡೂ ಸಭೆಗಳಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಸೋಮವಾರದ ಹೊತ್ತಿಗೆ ಬಿಸಿಸಿಐ ಶಿಸ್ತು ಸಮಿತಿ ಶಿಕ್ಷೆ ಕುರಿತಂತೆ ಒಂದು ನಿರ್ಣಯ ಕೈಗೊಳ್ಳುವ ನಿರೀಕ್ಷೆಯಿದೆ. ಜನಮತ ಇರುವುದು ಆಟಗಾರರನ್ನು ಕ್ಷಮಿಸಬೇಡಿ ಎಂಬ ವಿಷಯಕ್ಕೆ.

ಈಗ ಹೆಕ್ಕಲಾಗಿರುವ ವರದಿಗಳ ಪ್ರಕಾರ ಅಜರುದ್ದೀನ್‌ಗೆ ಆಜೀವ ಪರ್ಯಂತ ನಿಷೇಧ ಹೇರಿದರೂ ಆತನ ಸಾಧನೆಗಳನ್ನು ದಾಖಲಾತಿ ಪುಸ್ತಕದಿಂದ ಅಳಿಸುವುದಿಲ್ಲ. ರಾಜಕೀಯ ಶಿಫಾರಸ್ಸುಗಳನ್ನು ಹೊಂದಿರುವ ಹುಟ್ಟು ಶ್ರೀಮಂತ ಜಡೇಜ ಒಂದು ವರ್ಷ ಕಣದಿಂದ ಹೊರಗುಳಿಯಬಹುದು. ಇದ್ದುದರಲಿಲ್ಲಿ ಮೊಂಗಿಯಾ ಮಾಡಿರುವ ತಪ್ಪಿಗೆ ತಕ್ಕ ಶಾಸ್ತಿಯಾಗಲಿದೆ. ಈಗಾಗಲೇ ಕ್ರಿಕೆಟ್‌ ಅಭಿಮಾನಿಗಳು ಮರೆತು ಹೋಗಿರುವ ಅಜಯ್‌ ಶರ್ಮಗೆ ಯಾವ ಶಿಕ್ಷೆ ಕೊಟ್ಟರೂ ಪ್ರಶ್ನೆಗಳು ಏಳವು.

(ಐಎಎನ್‌ಎಸ್‌/ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X