Get Updates
Get notified of breaking news, exclusive insights, and must-see stories!

ತುಮಕೂರು: ರೈಲಿನಲ್ಲೊಂದು ರಾಜ್ಯೋತ್ಸವ ಕಾರ್ಯಕ್ರಮ

ತುಮಕೂರು : ಇವರು ನಿತ್ಯ ತುಮಕೂರಿನಿಂದ - ಬೆಂಗಳೂರು - ತುಮಕೂರು ನಡುವೆ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರು. ಸರ್ಕಾರಿ, ಖಾಸಗಿ ಕಂಪನಿಗಳ ಉದ್ಯೋಗಿಗಳು. ತಮ್ಮ ಬದುಕಿನ ಜಂಜಾಟದ ನಡುವೆಯೂ ಇವರಲ್ಲಿ ಕನ್ನಡ ಪ್ರೇಮ ಹೊರಹೊಮ್ಮುತ್ತಿತ್ತು. ನಾಡಹಬ್ಬ ರಾಜ್ಯೋತ್ಸವವನ್ನು ಆಚರಿಸುವ ತವಕ. ಅವಕಾಶ ಇರಲಿಲ್ಲ. ಕೊನೆಗೊಂದು ಉಪಾಯ ಹೊಳೆಯಿತು. ತಾವು ನಿತ್ಯ ಓಡಾಡುವ ರೈಲಿನಲ್ಲೇ ರಾಜ್ಯೋತ್ಸವ ಆಚರಿಸಲು ಇವರು ನಿರ್ಧರಿಸಿದರು.

ಶನಿವಾರ ಬೆಳಗ್ಗೆ ರೈಲು ತುಮಕೂರು ಬಿಡುವ ಮುನ್ನ ತಾವು ನಿತ್ಯ ಸಂಚರಿಸುವ ಹತ್ತು ಬೋಗಿಗಳಿಗೆ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ವಿ.ಕೃ. ಗೋಕಾಕ್‌, ಅನಂತಮೂರ್ತಿ, ಗಿರೀಶ್‌ ಕಾರ್ನಾಡ್‌ ಹಾಗೂ ಜಿಲ್ಲೆಯ ಸಾಹಿತಿಗಳಾದ ಕನ್ನಡದ ಕಣ್ವ ಬಿ.ಎಂ. ಶ್ರೀಕಂಠಯ್ಯ, ತೀ.ನಂ. ಶ್ರೀಕಂಠಯ್ಯ ಹಾಗೂ ಜಿ.ಎಸ್‌. ಸಿದ್ಧಲಿಂಗಯ್ಯ ಅವರ ಹೆಸರುಗಳನ್ನು ಈ ಬೋಗಿಗಳಿಗಿಟ್ಟರು. ತಳಿರು ತೋರಣಗಳಿಂದ ಈ ಬೋಗಿಗಳನ್ನು ಅಲಂಕರಿಸಿದರು.

ರೈಲು ತುಮಕೂರು ನಿಲ್ದಾಣ ಬಿಡುತ್ತಿದ್ದಂತೆ ರೈಲಿನಲ್ಲೇ ರಾಜ್ಯೋತ್ಸವ ಕಾರ್ಯಕ್ರಮ ಆರಂಭವಾಯಿತು. ಕುವೆಂಪು ಹೆಸರಿನ ಬೋಗಿಯಲ್ಲಿ ಕಾರ್ಯಕ್ರಮದ ಉದ್ಘಾಟನೆ. ರೈಲ್ವೆ ಪ್ರಯಾಣಿಕರ ವೇದಿಕೆ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಬೆಂಗಳೂರು ಮಂಡಲ ವಾಣಿಜ್ಯ ವ್ಯವಸ್ಥಾಪಕ ಎಸ್‌. ಗಗರಿನ್‌ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ತಾಯಿ ಭುವನೇಶ್ವರಿಗೆ ವೈಭವದಿಂದ ಪೂಜೆ ಜರುಗಿತು.

ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕರಾಗಿರುವ ಎಂ. ನಾಗಣ್ಣ, ತುಮಕೂರು ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ವಿ. ನಾವಲಗಿ ಮುಖ್ಯ ಅತಿಥಿಗಳಾಗಿದ್ದರು. ಕನ್ನಡದ ಯುವಕರು ಹೆಚ್ಚು ಹೆಚ್ಚು ಐಎಎಸ್‌, ಐಪಿಎಸ್‌ ಅಧಿಕಾರಿಗಳಾಗಬೇಕು, ನ್ಯಾಯಾಂಗದಲ್ಲಿ ಸಂಪೂರ್ಣವಾಗಿ ಕನ್ನಡದಲ್ಲೇ ವ್ಯವಹಾರ ನಡೆಯಬೇಕು, ಆಡು ಭಾಷೆಯಲ್ಲಿ ಸಾಧ್ಯವಾದಷ್ಟೂ ಕನ್ನಡ ಪದಗಳನ್ನು ಬಳಸಬೇಕು, ಕನ್ನಡ ಸಂಸ್ಕೃತಿ ಪರಂಪರೆಯ ಉಳಿವಿಗೆ ಕನ್ನಡಿಗರು ಕಂಕಣಬದ್ಧರಾಗಬೇಕು ಎಂಬಿತ್ಯಾದಿ ಸಲಹೆಗಳು ಮೂಡಿಬಂದವು.

ತುಮಕೂರು ಬೆಂಗಳೂರು ನಡುವೆ ಸಂಚಾರದ ಒತ್ತಡ ಇರುವುದರಿಂದ ಹತ್ತು ಬೋಗಿಗಳು ಸಾಲದಾಗಿದ್ದು, ಇನ್ನೂ ಐದು ಹೆಚ್ಚು ಬೋಗಿಗಳನ್ನು ಅಳವಡಿಸಲು ಒತ್ತಾಯವೂ ಬಂತು. ತುಮಕೂರು ರೈಲ್ವೆ ವ್ಯವಸ್ಥಾಪಕ ಚಂದ್ರಶೇಖರ್‌, ವಾಣಿಜ್ಯ ವ್ಯವಸ್ಥಾಪಕ ಬಿ. ಹನುಮಂತಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.

ಸನ್ಮಾನ : ಇದೇ ಸಂದರ್ಭದಲ್ಲಿ 25ಕ್ಕೂ ಹೆಚ್ಚು ವರ್ಷಗಳ ಕಾಲ ರೈಲಿನಲ್ಲಿ ನಿತ್ಯ ಪ್ರಯಾಣಿಸಿದ ಬೆಂಗಳೂರಿನ ನಿವೃತ್ತ ಹಿರಿಯ ಸಂಶೋಧಕ ಎಸ್‌.ಎನ್‌. ಸಂಪತ್‌ಕುಮಾರ್‌, ಬಿ. ನಾಗರಾಜಯ್ಯ, ನಿವೃತ್ತ ಶಿಕ್ಷಕಿ ರಾಜಮ್ಮ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ನಟರಾಜ್‌ ಇಸುವನ ಹಳ್ಳಿ ಸ್ವಾಗತಿಸಿದರು. ಸಿ. ರಮೇಶ್‌ ವಂದಿಸಿದರು. ರೈಲು ಗೊಲ್ಲಹಳ್ಳಿಯ ಬಳಿಗೆ ಬರುವ ಹೊತ್ತಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಸಿದ್ದಗಂಗಾ ವಿದ್ಯಾಸಂಸ್ಥೆಯ ಅಂಧ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+