ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಷ್‌ ಆಚರಣೆ, ಗೋರ್‌ ಜಾಗರಣೆ : ಇನ್ನೂ ತೆರೆ ಬೀಳದ ನಾಟಕ

By Staff
|
Google Oneindia Kannada News

*ವಸಂತ ಅರೋರ

ವಾಷಿಂಗ್ಟನ್‌ : ಸಾರ್ವಜನಿಕ ಜೀವನದಲ್ಲಿ ಹಾಸು ಹೊಕ್ಕಾಗುವ ಯಾವುದೇ ವಿಷಯವನ್ನು ಕೋರ್ಟಿನಲ್ಲಿ ರಬ್ಬರ್‌ ಬ್ಯಾಂಡಿನಂತೆ ಎಳೆಯುತ್ತಿದ್ದರೆ ಜನ ಹತಾಶರಾಗುತ್ತಾರೆ, ಆ ವಿಷಯದಲ್ಲಿ ಆಸ್ಥೆ ಕಳೆದುಕೊಳ್ಳುತ್ತಾರೆ. ಬೇಗ ಏನಾದರೂ ಒಂದಾಗಲೀ ಅಂತ ಬೇಜವಾಬ್ದಾರಿ ಮಾತುಗಳನ್ನಾಡುತ್ತಾರೆ. ವೀರಪ್ಪನ್‌ನ ಟಾಡಾ ಕೈದಿಗಳ ಬಿಡುಗಡೆಯ ಬೇಡಿಕೆಯ ತಕರಾರು ಹಾಗೂ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಇದನ್ನು ಸಾಬೀತು ಪಡಿಸಿವೆ. ರಾಜ್‌ ಬಂದಾಯಿತು. ಆದರೆ ಅಮೆರಿಕಾದ ಅಧ್ಯಕ್ಷರಾರು? ಇನ್ನೂ ಅಧಿಕೃತವಾಗಿ ಗೊತ್ತಿಲ್ಲ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವಿಗಾಗಿ ಹಪಹಪಿಸಿ ಡೆಮಾಕ್ರಟಿಕ್‌ ಪಕ್ಷ ಸುಪ್ರಿಂಕೋರ್ಟಿನ ಕಟೆಕಟೆ ಹತ್ತಿದೆ. ಫ್ಲೋರಿಡಾ ಜಯ ಘೋಷಣೆಯಾದದ್ದೇ ತಡ, ತಾನೇ ಅಮೆರಿಕದ ಅಧ್ಯಕ್ಷ ಎಂದು ಬುಷ್‌ ಸ್ವಘೋಷಿಸಿಕೊಂಡು ಟೆಕ್ಸಾಸ್‌ನಲ್ಲಿ ಆಗಲೇ ಭಾಷಣ ಬಿಗಿದಿದ್ದಾರೆ. ಸಹವರ್ತಿ ಡಿಕ್‌ ಚೆನಿ ತಮ್ಮ ಉತ್ತರಾಧಿಕಾರಿ, ಅಂದರೆ ಅಮೆರಿಕ ಉಪಾಧ್ಯಕ್ಷ ಅಂತ ಆಗಲೆ ಘೋಷಿಸಿ ಬಿಟ್ಟಿದ್ದಾರೆ. ಬಿಲ್‌ ಕ್ಲಿಂಟನ್‌ ಅವರಿಗೂ ಜನವರಿ 20 ರಂದು ಸಾಂಪ್ರದಾಯಿಕವಾಗಿ ಅಧಿಕಾರ ಹಸ್ತಾಂತರ ಮಾಡುವಂತೆ ಓಲೆ ಕಳಿಸಿದ್ದಾರೆ.

ಸುಮ್ಮನೆ ಹಠ ಮಾಡುತ್ತಾ ಕೋರ್ಟಿಗೆ ಎಡತಾಗದೆ, ತಮ್ಮ ಸೋಲನ್ನು ತುಂಬು ಹೃದಯದಿಂದ ಒಪ್ಪಿಕೊಳ್ಳುವಂತೆ ತಮ್ಮ ಪ್ರತಿಸ್ಪರ್ಧಿ ಆಲ್‌ ಗೋರ್‌ ಅವರಿಗೂ ಕಳಕಳಿಯ ಮನವಿ ಸಲ್ಲಿಸಿದ್ದಾರೆ. ತಮ್ಮ ಮುಂದಿನ ಕಾರ್ಯಕ್ರಮಗಳ ಬಗೆಗೂ ಗಂಭೀರವಾಗಿ ಯೋಚಿಸಲು ಈ ಹೊತ್ತಿನಿಂದಲೇ ಶುರುವಿಟ್ಟಿದ್ದಾರೆ.

ಉಹುಂ. ಇವ್ಯಾವುದಕ್ಕೂ ಡೆಮಾಕ್ರಟಿಕ್‌ ಪಕ್ಷ ಹಾಗೂ ಆಲ್‌ ಗೋರ್‌ ಜಗ್ಗುತ್ತಿಲ್ಲ. ಪಟ್ಟು ಬಿಡದೆ ದುರ್ಯೋಧನ ಛಲ ಮೆರೆಯುತ್ತಿದ್ದಾರೆ. ಸಾಂಪ್ರದಾಯಿಕವಾಗಿ ಅಧಿಕಾರ ವಹಿಸಿಕೊಂಡ ನಂತರವೂ ಪ್ರತಿಸ್ಪರ್ಧಿಗೆ ಚುನಾವಣಾ ಬಲಾಬಲ ತೋರಿಸಲು 10 ದಿನಗಳ ಅವಕಾಶವಿರುತ್ತದೆ, ನಾವು ಬಿಡೋದಿಲ್ಲ ಅಂತ ಪಣ ತೊಟ್ಟು ಬಿಟ್ಟಿದ್ದಾರೆ.

ಈ ಅಧ್ಯಕ್ಷ ಸಮರ ಜನರಲ್ಲೂ ಬೇಸರ ಹುಟ್ಟಿಸಿದೆ. ಈಗಿನ ತೀರ್ಪನ್ನೇ ಒಪ್ಪಿಕೊಂಡು ಮುಂದೇನು ಜನೋಪಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಯೋಚಿಸುವುದೇ ತರ ಎಂದು ಶೇ. 56 ರಷ್ಟು ಜನ ಹೇಳಿದರೆ, ಇಲ್ಲ ನಮಗೆ ಫಲಿತಾಂಶ ಪೂರ್ತಿ ತೃಪ್ತಿ ತಂದಿಲ್ಲ ಅಂತ ಉಳಿದ ಜನ ಅಭಿಪ್ರಾಯ ಪಟ್ಟಿದ್ದಾರೆ. ಸ್ಥಳೀಯ ಪತ್ರಿಕೆಯಾಂದು ನಡೆಸಿರುವ ಸಮೀಕ್ಷೆ ಹೀಗೆ ಹೇಳಿದೆ.

ಯಾವುದಾದರೊಂದು ಘಳಿಗೆಯಲ್ಲಿ ಈ ಸ್ಪರ್ಧೆಯ ನಾಟಕಕ್ಕೆ ತೆರೆ ಬೀಳಲೇ ಬೇಕು, ಟಂಗಾಟುಂಗಿ ಮುಗಿಯಲೇ ಬೇಕು. ವಕೀಲರು ವಾದ ಮುಗಿಸಿ ಮನೆಗೆ ಹೋಗಬೇಕು. ಬಹುಶಃ ಅಂಥ ಕಾಲ ಈಗ ಸಮೀಪಿಸಿದೆ. ಎಲ್ಲ ಗೊಂದಲಗಳಿಗೂ ಒಂದು ಕೊನೆ ಹೇಳಿ, ಜನರ ಹಿತಾಸಕ್ತಿಯ ಕಡೆ ಗಮನ ಹರಿಸುವುದು ಸೂಕ್ತ ಎನ್ನುತ್ತಾರೆ ಅಮೆರಿಕೆಯ ರಾಜ್ಯವೊಂದರ ಮಾಜಿ ಕಾರ್ಯದರ್ಶಿ ಜೇಮ್ಸ್‌ ಬೇಕರ್‌. ಇದು ಜೇಮ್ಸ್‌ ಬೇಕರ್‌ ಅವರದಷ್ಟೇ ಅಲ್ಲ, ಈ ಚುನಾವಣೆಯ ನಡೆಗಳನ್ನು ನೋಡಿ ನೋಡಿ ದಣಿದಿರುವ ಜಗತ್ತಿನ ಕಣ್ಣಿನ ಹೆಬ್ಬಯಕೆ ಕೂಡ.

(ಐಎಎನ್‌ಎಸ್‌)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X