ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಮಾಝಾ’ದಂಥ ಒಂದೂ ನಾಡಗೀತೆ ನಮ್ಮಲ್ಲಿಲ್ಲ : ಬಲ್ಲಾಳ

By Staff
|
Google Oneindia Kannada News

ನೆಲಮಂಗಲ : ಕುವೆಂಪು, ಹುಯಿಲುಗೋಳ ನಾರಾಯಣರಾಯರು ನಾಡಗೀತೆಗಳಲ್ಲಿ ಕನ್ನಡವನ್ನು ವೈಭವೀಕರಿಸಿದ್ದಾರೆ. ಕನ್ನಡತನದ ನೈಜ ದರ್ಶನ ಅವುಗಳಲ್ಲಿ ಕಾಣದು. ‘ಮಹಾರಾಷ್ಟ್ರ ಮಾಝಾ’ದಂಥ ಒಂದೂ ನಾಡಗೀತೆ ನಮ್ಮಲ್ಲಿಲ್ಲ. ಈ ಮಾತುಗಳನ್ನಾಡಿ ರುವವರು ಖ್ಯಾತ ಕಾದಂಬರಿಕಾರ ವ್ಯಾಸರಾಯ ಬಲ್ಲಾಳ.

ಭಾನುವಾರ ಸ್ಥಳೀಯ ಗೆಳಯರ ಬಳಗ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಸಮಾರಂಭದಲ್ಲಿ ಸನ್ಮಾನಿತರಾದ ಬಲ್ಲಾಳರು ಕನ್ನಡತನ, ಸ್ತ್ರೀ ಶೋಷಣೆ ಬಗೆಗೆ ಮಾತನಾಡಿದರು. ಕನ್ನಡ ನಮ್ಮ ಮಾನಸ ದೇವತೆಯಾಗಿಲ್ಲ. ಮೂಲತಃ ನಮ್ಮ ಅಸ್ಮಿತೆಯನ್ನು ನಮ್ಮ ಅಹಂಕಾರದಿಂದಲೇ ಗುರ್ತಿಸಿಕೊಳ್ಳಬೇಕೆಂಬ ಮಾತಿದೆ. ಆದರೆ ಈವತ್ತು ನಮ್ಮ ಬಗೆಗೇ ನಮಗೆ ಅಭಿಮಾನವಿಲ್ಲ. ಇನ್ನು ನಾಡು- ನುಡಿಯ ಬಗ್ಗೆ ಅಭಿಮಾನ ಎಲ್ಲಿಂದ ಬರಬೇಕು ಎಂದು ವಿಷಾದ ವ್ಯಕ್ತಪಡಿಸಿದರು.

ಬೆಂಗಳೂರಿನ ಎಷ್ಟೋ ಶಾಲೆಗಳಲ್ಲಿ ಹಿಂದಿ ಪಾಠ ಮಾಡುವ ಉಪಾಧ್ಯಾಯರೇ ಕನ್ನಡ ಬೋಧಿಸುತ್ತಿದ್ದಾರೆ ಎಂದು ಕೇಳಿದ್ದೇನೆ. ಇದಕ್ಕಿಂತ ದುರಂತ ಇನ್ನೇನಿದೆ. ಇವತ್ತು ಪತ್ರಿಕೆಗಳನ್ನೋದಿದಾಗ ಕಣ್ಣಿಗೆ ರಾಚಿದ್ದು ಮಂಡ್ಯದಲ್ಲಿ ಯಾವ ತಪ್ಪನ್ನೂ ಮಾಡದ ಹೆಣ್ಣು ಮಗಳೊಬ್ಬಳು ಆತ್ಮ ಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ. ಈ ಸುದ್ದಿ ನನ್ನನ್ನು ವ್ಯಸ್ತನನ್ನಾಗಿಸಿತು. ಏನಪ್ಪಾ, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇನ್ನೂ ಜಾತೀಯ ದ್ವೇಷ, ಜನಾಂಗೀಯ ದ್ವೇಷ, ಸ್ತ್ರೀ ಶೋಷಣೆಗಳನ್ನು ನಾವು ಮಟ್ಟ ಹಾಕಿಲ್ಲವಲ್ಲ ಎಂದೆನಿಸಿತು ಎಂದು ಹೇಳುವಾಗ ಬಲ್ಲಾಳರು ಗದ್ಗದಿತರಾಗಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇತಿಹಾಸ ತಜ್ಞ ಡಾ.ಎಚ್‌.ಎಸ್‌.ಗೋಪಾಲ ರಾವ್‌, ಮುಂಬೈನಂಥ ‘ತಳ್ಳು- ನೂಕು ನಗರಿ’ಯಲ್ಲಿ ಅರ್ಧ ಶತಮಾನ ಕಳೆದರೂ ತಮ್ಮ ಸೌಂದರ್ಯ ಪ್ರಜ್ಞೆಯನ್ನು ಕಾಪಿಟ್ಟುಕೊಂಡು ಬಂದವರು ಬಲ್ಲಾಳರು. ಅವರ ಕಾದಂಬರಿಗಳ ಪಾತ್ರಗಳು ಕನ್ನಡವನ್ನೇ ಮಾತನಾಡುತ್ತವೆಯೇ ಹೊರತು ಬೇರೆ ಭಾಷೆಯನ್ನಲ್ಲ ಎಂದರು. ನೆಲಮಂಗಲ ತಾಲ್ಲೂಕಿನ ಐತಿಹಾಸಿಕ ಪ್ರದೇಶ ಮಣ್ಣೆಯಲ್ಲಿನ ಕೆಲ ಸ್ಮಾರಕಗಳನ್ನು ತಾಲ್ಲೂಕಿನ ಎರಡು ಕಾಲೇಜಿನ ವಿದ್ಯಾರ್ಥಿಗಳು ರಕ್ಷಿಸುವ ಕೆಲಸ ಮಾಡಿರುವುದನ್ನು ಅವರು ಶ್ಲಾಘಿಸಿದರು.

ನೆಲಮಂಗಲದ ಡಿವೈಎಸ್‌ಪಿ ರಾಜಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿವಿಧ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಗೆದ್ದ ತಾಲ್ಲೂಕಿನ ಶಾಲಾ ಮಕ್ಕಳಿಗೆ ಬಹುಮಾನ ನೀಡಲಾಯಿತು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X