Get Updates
Get notified of breaking news, exclusive insights, and must-see stories!

ಟೀಎಸ್ಸಾರ್‌ ಹಾಗೂ ಟೀಎಸ್ಸಾರ್‌ ಪ್ರಶಸ್ತಿ ಪುರಸ್ಕೃತ ಪತ್ರಕರ್ತರು

ಬೆಂಗಳೂರು : ನಾಲ್ಕು ವರ್ಷಗಳಿಂದಲೂ ಬಾಕಿ ಉಳಿದಿದ್ದ ಟೀಸ್ಸಾರ್‌ ಪ್ರಶಸ್ತಿಗೆ ನಾಲ್ವರು ಹಿರಿಯ ಪತ್ರಕರ್ತರು ಭಾಜನರಾಗಿದ್ದಾರೆ. ಹಿರಿಯ ಪತ್ರಕರ್ತರಾದ ಪಿ.ಎಲ್‌. ಬಂಕಾಪುರ, ಎಸ್‌.ವಿ. ಜಯಶೀಲರಾವ್‌, ವಡ್ಡರ್ಸೆ ರಘುರಾಮ ಶೆಟ್ಟಿ ಹಾಗೂ ಎಂ.ಬಿ. ಸಿಂಗ್‌ ಪ್ರಶಸ್ತಿಗೆ ಪಾತ್ರರಾದ ಪತ್ರಿಕಾರಂಗದ ದಿಗ್ಗಜರು.

ಟೀಎಸ್ಸಾರ್‌ ಹಾಗೂ ಟೀಎಸ್ಸಾರ್‌ ಪ್ರಶಸ್ತಿಗೆ ಪಾತ್ರರಾದ ಪತ್ರಕರ್ತರ ಕಿರು ಪರಿಚಯ ಇದು:

ಟೀಎಸ್ಸಾರ್‌ : ಟೀಎಸ್ಸಾರ್‌ ಅವರನ್ನು ಪತ್ರಿಕಾರಂಗದ ಭೀಷ್ಮ ಎಂದೇ ಕರೆಯಲಾಗುತ್ತದೆ. ಕನ್ನಡ ಪತ್ರಿಕೋದ್ಯಮಕ್ಕೆ ಘನತೆ, ಗೌರವ ಹಾಗೂ ಶಿಸ್ತು ತಂದುಕೊಟ್ಟವರಲ್ಲಿ ದಿವಂಗತ ಟಿ.ಎಸ್‌. ರಾಮಚಂದ್ರರಾವ್‌ ಅಗ್ರಗಣ್ಯರು. ಪ್ರಜಾವಾಣಿ ದಿನಪತ್ರಿಕೆಗೆ ಅತಿ ಕಿರಿಯ ವಯಸ್ಸಿನಲ್ಲೇ ಸಂಪಾದಕರಾಗಿ 25ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೆಯನ್ನು ಮುನ್ನಡೆಸಿದ ಕೀರ್ತಿ ಟೀಎಸ್ಸಾರ್‌ ಅವರಿಗೆ ಸಲ್ಲುತ್ತದೆ.

ಕನ್ನಡ ಭಾಷೆಯನ್ನು ಪತ್ರಿಕೋದ್ಯಮಕ್ಕೆ ಸಮರ್ಥವಾಗಿ ದುಡಿಸಿಕೊಂಡ ಮೇಧಾವಿ ರಾಮಚಂದ್ರರಾಯರು. ಎಲ್ಲಕ್ಕಿಂತ ಮಿಗಿಲಾಗಿ ಸಮರ್ಥ ಹಾಗೂ ಯುವ ಪತ್ರಕರ್ತರ ತಂಡವನ್ನು ಕಟ್ಟುವಲ್ಲಿ ಇವರ ಶ್ರಮ ಅವಸ್ಮರಣೀಯ. ಕನ್ನಡ ಜನತೆಗೆ ಟೀಎಸ್ಸಾರ್‌ ಎಂದೇ ಖ್ಯಾತರಾಗಿದ್ದ ಇವರು, ತಮ್ಮ ಛೂಬಾಣ ಅಂಕಣದಿಂದ ಪತ್ರಿಕಾರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಇಂತಹ ಮೇಧಾವಿ ಪತ್ರಕರ್ತರ ಹೆಸರಿನಲ್ಲಿ ರಾಜ್ಯ ಸರಕಾರ 1993ರಿಂದ ಪತ್ರಿಕಾರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯರಿಗೆ ಒಂದು ಲಕ್ಷ ರುಪಾಯಿಗಳ ಪ್ರಶಸ್ತಿಯನ್ನು ನೀಡುತ್ತಿದೆ.

ಆದರೆ, ಕಳೆದ ನಾಲ್ಕು ವರ್ಷದಿಂದ ಸರಕಾರ ಪತ್ರಕರ್ತರಿಗೆ ನೀಡಲಾಗುತ್ತಿದ್ದ ಈ ಪ್ರಶಸ್ತಿಯ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಎಸ್‌.ಎಂ. ಕೃಷ್ಣ ನೇತೃತ್ವದ ಸರಕಾರ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರ ನೇತೃತ್ವದಲ್ಲಿ ಸಮಿತಿಯಾಂದನ್ನು ರಚಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ಪಿ.ಎಲ್‌. ಬಂಕಾಪುರ್‌ (1996), ಎಂ.ಬಿ. ಸಿಂಗ್‌ (1997) ಜಯಶೀಲರಾವ್‌ (1998), ವಡ್ಡರ್ಸೆ ರಘುರಾಮ ಶೆಟ್ಟಿ (1999) ಅವರನ್ನು ಆಯ್ಕೆ ಮಾಡಿತು.

ಪಿ.ಎಲ್‌. ಬಂಕಾಪುರ್‌ : 81 ವರ್ಷ ವಯಸ್ಸಿನ ಬಂಕಾಪುರ್‌ ಪತ್ರಕರ್ತರಷ್ಟೇ ಅಲ್ಲ ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ ಹೌದು. ಸ್ವತಂತ್ರ ಪೂರ್ವದಿಂದಲೂ ಕನ್ನಡ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಉತ್ತರ ಕರ್ನಾಟಕದ ಜನ -ಮನ ಗೆದ್ದ ಹಿರಿಯ ಚೇತನ. ಕೈಬರಹದ ಪತ್ರಿಕೆಯನ್ನು ತರುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ಬಂಕಾಪುರ್‌ ಮೊದಲ ಸಂಜೆ ಪತ್ರಿಕೆ ಆರಂಭಿಸಿದ ಕೀರ್ತಿಗೂ ಪಾತ್ರರಾಗಿದ್ದಾರೆ. ಚಿತ್ರಾ, ನವಯುಗ, ಪ್ರಾರಬ್ಧ, ಕರ್ನಾಟಕ ಬಂಧು, ಉಷಾ ಮುಂತಾದ ಪತ್ರಿಕೆಗಳಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ. ಸಣ್ಣಪ್ಪ ಸತ್ತಾಗ, ನಗ್ನ ಸತ್ಯ ಎಂಬ ಎರಡು ಕಾದಂಬರಿಗಳನ್ನೂ ಬರೆದಿದ್ದಾರೆ.

ಎಂ.ಬಿ. ಸಿಂಗ್‌ : ನಾಲ್ಕು ದಶಕಗಳಿಗೂ ಹೆಚ್ಚುಕಾಲ ಪ್ರಜಾವಾಣಿ, ಸುಧಾ ಮತ್ತು ಮಯೂರ ಪತ್ರಿಕೆಗಳಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಸಿಂಗ್‌ ಅವರಿಗೀಗ 75 ವರ್ಷ. ಇವರ ಸಂಪಾದಕತ್ವದಲ್ಲಿ ಹರಿದುಬಂದ ಸುದ್ದಿ ಸುಧೆ ಸಾರ್ವತ್ರಿಕ ಜನಮನ್ನಣೆ ಪಡೆದಿದೆ. ಹಿರಿಯ ಪತ್ರಕರ್ತರಾದ ಇವರ ನೇತೃತ್ವದಲ್ಲಿ ಸಣ್ಣ ಪತ್ರಿಕೆಗಳ ಸಮಸ್ಯೆಗಳ ಅಧ್ಯಯನಕ್ಕೆ ಸಮಿತಿಯಾಂದನ್ನೂ ರಚಿಸಲಾಗಿತ್ತು. ಆದರೆ, ಇನ್ನೂ ಆ ವರದಿ ಜಾರಿಗೆ ಬಂದಿಲ್ಲ ಎನ್ನುವುದು ವಿಷಾದದ ಸಂಗತಿ. ಈಗಾಗಲೇ ಖಾದ್ರಿ ಶಾಮಣ್ಣ ಪ್ರಶಸ್ತಿಯೇ ಮುಂತಾದ ಪುರಸ್ಕಾರಗಳಿಗೆ ಪಾತ್ರರಾಗಿರುವ ಸಿಂಗ್‌ ಸಂಪಾದಕ ಶ್ರೇಷ್ಠರಲ್ಲಿ ಒಬ್ಬರು.

ವಡ್ಡರ್ಸೆ ರಘುರಾಮ ಶೆಟ್ಟಿ : ಸಮಕಾಲೀನ ಪತ್ರಿಕೋದ್ಯಮವನ್ನು ಸಮಾಜ ಶಾಸ್ತ್ರೀಯ ದೃಷ್ಟಿ ಕೋನದಿಂದ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ರಘುರಾಮ ಶೆಟ್ಟರು ಮಂಗಳೂರಿನ ನವಭಾರತ ಪತ್ರಿಕೆಯಿಂದ ತಮ್ಮ ವೃತ್ತಿ ಜೀವನ ಆರಂಭಿಸಿ, ಪ್ರಜಾವಾಣಿ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಮುಂಗಾರು ಎಂಬ ದಿನಪತ್ರಿಕೆ ಪ್ರಾರಂಭಿಸಿ ರೈತರು ಹಾಗೂ ದುರ್ಬಲ ವರ್ಗದವರಲ್ಲಿ ಸಾಮಾಜಿಕ ಜಾಗೃತಿ ಮೂಡಿಸಲು ಹೋರಾಡಿದ ಕ್ರಿಯಾಶೀಲ ಪತ್ರಕರ್ತ. 72ರ ವಯಸ್ಸಿನಲ್ಲೂ ಇವರು, ಸಾಮಾಜಿಕ ಜಾಗೃತಿಯ ಬಗ್ಗೆ ಹೋರಾಟ ಮುಂದುವರಿಸಿದ್ದಾರೆ.

ಎಸ್‌.ವಿ. ಜಯಶೀಲರಾವ್‌ : ನಿರರ್ಗಳವಾಗಿ ಮಾತನಾಡುವ, ಸಹೃದಯಿ ಪತ್ರಕರ್ತರೆಂದೇ ಖ್ಯಾತರಾದ ಜಯಶೀಲರಾವ್‌ ಸ್ವಾತಂತ್ರೋದಯದಲ್ಲೇ ಪತ್ರಿಕಾ ಕ್ಷೇತ್ರಕ್ಕೆ ಪದಾರ್ಪಣ ಮಾಡಿದವರು. 70ರ ಹರೆಯದಲ್ಲೂ ಲವಲವಿಕೆಯಿಂದಿರುವ ಶ್ರೀಯುತರು 26 ವರ್ಷಗಳ ಕಾಲ ಪ್ರಜಾವಾಣಿಯಲ್ಲಿ, 8 ವರ್ಷಗಳ ಕಾಲ ಸಂಯುಕ್ತ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದಾರೆ. ಮುಂಜಾನೆ ಪತ್ರಿಕೆಯ ಸಂಪಾದಕರೂ ಆಗಿದ್ದ ರಾವ್‌ ಅವರು, ಗುಣಾತ್ಮಕ ಪತ್ರಿಕೋದ್ಯಮಕ್ಕೆ ಅಪರೂಪದ ಕಾಣಿಕೆ ನೀಡಿದ್ದಾರೆ.

ಕಾರ್ಮಿಕ ಸಂಘಟನೆಯ ನಾಯಕರಾಗಿಯೂ ದುಡಿದ ಇವರು ಭಾರತೀಯ ಪತ್ರಕರ್ತರ ಒಕ್ಕೂಟದ ಉಪಾಧ್ಯಕ್ಷರಾಗಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಲವು ಯುವ ಪತ್ರಕರ್ತರಿಗೆ ತರಬೇತಿ ನೀಡಿ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದ ಕೀರ್ತಿ ಇವರದು.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+