ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂಚಕ ಕಂಪನಿಗಳ ವಿರುದ್ಧ ಕಠಿಣ ಕ್ರಮ : ಮಸೂದೆಗೆ ವಿಧಾನಸಭೆ ಅಸ್ತು

By Staff
|
Google Oneindia Kannada News

ಬೆಂಗಳೂರು : ಜನ ಸಾಮಾನ್ಯರನ್ನು ಮರುಳುಮಾಡಿ ಕೋಟ್ಯಂತರ ರುಪಾಯಿ ವಂಚಿಸುವ ಬ್ಲೇಡ್‌ ಕಂಪನಿಗಳು ಹಾಗೂ ಚಿಟ್‌ಫಂಡ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮಸೂದೆಯನ್ನು ವಿಧಾನಸಭೆ ಶುಕ್ರವಾರ ಸರ್ವಾನುಮತದಿಂದ ಅಂಗೀಕರಿಸಿತು.

ವೃದ್ಧರ ನಿವೃತ್ತಿ ವೇತನ, ಕಾಸಿಗೆ ಕಾಸು ಕೂಡಿಟ್ಟ ಗೃಹಿಣಿಯರ ಕಾಸು, ಬಡವರ ಬೆವರು- ಆಸೆಗಳನ್ನು ಬಂಡವಾಳ ಮಾಡಿಕೊಂಡು ವಂಚಿಸುವ ವಂಚಕರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರುಪಾಯಿ ದಂಡ ವಿಧಿಸುವ ಮಸೂದೆಯನ್ನು ಎಲ್ಲಾ ಪಕ್ಷಗಳ ಸದಸ್ಯರು ಸ್ವಾಗತಿಸಿದರು. ಹಣಕಾಸು ಖಾತೆ ರಾಜ್ಯ ಸಚಿವ ಶಿವಣ್ಣ ಅವರು ಮಸೂದೆ ಮಂಡಿಸಿದರು.

ಇದಕ್ಕೆ ಮೊದಲು ಹುಬ್ಬಳ್ಳಿ, ಬೆಳಗಾವಿ, ಚಿತ್ರದುರ್ಗ ಮುಂತಾದ ಜಿಲ್ಲೆಗಳಲ್ಲಿ ಬ್ಲೇಡ್‌ ಕಂಪನಿಗಳ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ವಂಚಕರ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಾನೂನನ್ನು ಬಲಪಡಿಸಬೇಕು ಎಂದು ವಿರೋಧ ಪಕ್ಷದ ನಾಯಕ, ಬಿಜೆಪಿಯ ಜಗದೀಶ್‌ ಶೆಟ್ಟರ್‌ ಒತ್ತಾಯಿಸಿದ್ದರು.

ಚಿತ್ರದುರ್ಗದಲ್ಲಿ ಸದರನ್‌ ವಂಡರ್‌ವರ್ಲ್ಡ್‌ ರೆಸಾರ್ಟ್‌ ಅನ್ನುವ ಕಂಪನಿ 20 ಕೋಟಿ ರುಪಾಯಿಗಳನ್ನು ವಂಚಿಸಿದೆ. ಮತ್ತೊಂದು ಕಂಪನಿ ಹುಬ್ಬಳ್ಳಿಯಲ್ಲಿ 1.8 ಕೋಟಿ ರುಪಾಯಿ ವಂಚಿಸಿದೆ ಎಂದು ಶೆಟ್ಟರ್‌ ಹೇಳಿದರು. ಠೇವಣಿದಾರರು ಕಂಪನಿಗಳ ಆಕರ್ಷಕ ಜಾಹಿರಾತುಗಳಿಗೆ ಮರುಳಾಗಬಾರದು. ಹೆಚ್ಚು ಬಡ್ಡಿ ಯ ಆಮಿಷ ಒಡ್ಡಿ ಹಣ ಸಂಗ್ರಹಿಸಿದ ಕಂಪನಿಗಳು ರಾತ್ರೋರಾತ್ರಿ ಪರಾರಿಯಾದಾಗ, ವಂಚನೆಗೊಳಗಾದ ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂಥಾ ದುರಂತಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ಜನತಾದಳದ ಬಚ್ಚೇಗೌಡ ಹೇಳಿದರು.

ಇಲ್ಲಿದೆ ಹಾಸನ ಚಿಟ್‌ ಫಂಡ್‌ ವಂಚನೆಯ ಕಥೆ

ಹಾಸನದಲ್ಲಿ ಚಿಟ್‌ ಫಂಡ್‌ ಕಂಪನಿಯಾಂದು ಜನ ಸಾಮಾನ್ಯರಿಂದ ಕೋಟ್ಯಾಂತರ ರುಪಾಯಿ ಸಂಗ್ರಹಿಸಿ ಪರಾರಿಯಾಗಿದೆ ಎಂದು ಶಾಸಕ ಹನುಮೇಗೌಡ ಸದನದಲ್ಲಿ ಹೇಳಿದರು. ರಾಜ್ಯ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ವಿಧೇಯಕದ ಮೇಲಿನ ಚರ್ಚೆಯಲ್ಲಿ ಅವರು ಮಾತನಾಡುತ್ತಿದ್ದರು.

ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದ ವ್ಯಕ್ತಿಯಾಬ್ಬ, ಉದ್ಯೋಗಕ್ಕೆ ನಮಸ್ಕಾರ ಹೇಳಿ ಚಿಟ್‌ಫಂಡ್‌ ಮೂಲಕ ಕೋಟಿಗಟ್ಟಲೆ ಹಣ ಗಳಿಸಿ ಸಿಂಗಪುರ ಸೇರಿದ ಕಥೆಯನ್ನು ಅವರು ಸದನದಲ್ಲಿ ಬಿಡಿಸಿಟ್ಟರು. ಬಡವರು, ನಿರ್ಗತಿಕರು, ಹೆಣ್ಣು ಮಕ್ಕಳ ಕಣ್ಣೀರಿನಲ್ಲಿ ತಮ್ಮ ಬೇಳೆ ಬೇಯಿಸುತ್ತಿರುವ ಇಂಥಾ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ವಂಚನೆ ಯತ್ನ, ಆರು ಜನರ ಬಂಧನ : ಲಕ್ಕಿ ಡ್ರಾ ನಡೆಸುವುದಾಗಿ ಲಕ್ಷಾಂತರ ರುಪಾಯಿಗಳನ್ನು ಸಂಗ್ರಹಿಸಿ ವಂಚಿಸಲು ಪ್ರಯತ್ನಿಸಿದ ತಂಡವೊಂದರ ಯತ್ನವನ್ನು ಇಲ್ಲಿನ ಪೊಲೀಸರು ವಿಫಲಗೊಳಿಸಿದ್ದು , ಆರೋಪದ ಸಂಬಂಧ 6 ಜನರನ್ನು ಬಂಧಿಸಿದ್ದಾರೆ.

ಕಾರ್ಪೊರೇಷನ್‌ ಎನ್ನುವ ಸಂಸ್ಥೆಯ ಪಾಲುದಾರರಾಗಿದ್ದ ವಂಚಕರು, ವಿವಿಧ ಗ್ರಾಹಕ ವಸ್ತುಗಳನ್ನು ನೀಡುವುದಾಗಿ ಜನರಿಂದ ಲಕ್ಷಾಂತರ ರುಪಾಯಿಗಳನ್ನು ಸಂಗ್ರಹಿಸಿದ್ದರು ಎನ್ನಲಾಗಿದೆ. ಬಂಧಿತರನ್ನು ನೂರ್‌ ಅಹ್ಮದ್‌ ಚಾಂದ್‌ಸಾಬ ನಾಗನೂರ, ಸುಭಾಷ್‌ ದತ್ತಾತ್ರೇಯ ಪುರಿ, ಕಾಶಿಂಸಾಬ ಹುಸೇನ ಸಾಬ, ಕೃಷ್ಣಗಿರಿ ಶಿವಗಿರಿ ಗೋಸಾವಿ, ಅಬ್ಬಾಸ್‌ ಅಫೀಜ ಶೇಖ ಹಾಗೂ ಅತಾವುಲ್ಲ ಅಮೀರಭಾಯಿ ಜಮಾದಾರ ಎಂದು ಪೊಲೀಸರು ಗುರ್ತಿಸಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X