ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಕೆಲಸದಲ್ಲಿ ಹಳ್ಳಿಗರಿಗೆ ಶೇ.25 ಮೀಸಲಾತಿ : ವಿಧಾನಸಭೆ ಅಸ್ತು

By Staff
|
Google Oneindia Kannada News

ಬೆಂಗಳೂರು : ರಾಜ್ಯ ಸರ್ಕಾರಿ ಹುದ್ದೆಗಳಲ್ಲಿ ಗ್ರಾಮೀಣ ಅಭ್ಯರ್ಥಿಗಳಿಗೆ ಶೇ. 25ರಷ್ಟು ಮೀಸಲಾತಿ ನೀಡುವ ಮಸೂದೆಗೆ ವಿಧಾನಸಭೆ ಗುರುವಾರ ಒಪ್ಪಿಗೆ ನೀಡಿದೆ.

ಮೊದಲು ಗ್ರಾಮೀಣ ಅಭ್ಯರ್ಥಿಗಳಿಗೆ ಶೇ. 10ರಷ್ಟು ಮೀಸಲಾತಿಯನ್ನು ನೀಡಬೇಕೆಂದು ಮಸೂದೆ ಮಂಡಿಸಿದ್ದ ಸರ್ಕಾರ, ನಂತರ ಪ್ರತಿಪಕ್ಷಗಳ ಮನವಿಗೆ ಮಣಿದು, ಅದಕ್ಕೆ ತಿದ್ದುಪಡಿ ತಂದು ಶೇ. 25ಕ್ಕೆ ಹೆಚ್ಚಿಸಿತು. ವೃತ್ತಿಶಿಕ್ಷಣದಲ್ಲೂ ಈ ಮೀಸಲಾತಿ ನೀಡಬೇಕೆಂಬ ತಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಲಿಲ್ಲವೆಂಬ ಕಾರಣಕ್ಕೆ ಸಿಂಧ್ಯಾ ನೇತೃತ್ವದ ಸಂಯುಕ್ತ ಜನತಾ ದಳದ ಸದಸ್ಯರು ಸಭಾತ್ಯಾಗ ಮಾಡಿದರು. ಆದರೆ, ಬಿಜೆಪಿ ಸದಸ್ಯರು ಮಸೂದೆಯನ್ನು ಸಮ್ಮತಿಸಿದರು.

ಈ ಹೊಸ ಮಸೂದೆಯನ್ವಯ 1ರಿಂದ 10ನೇ ಇಯತ್ತೆವರೆಗೆ ಗ್ರಾಮೀಣ ಪ್ರದೇಶದಲ್ಲಿ ಓದಿರುವವರು ರಾಜ್ಯ ಸಿವಿಲ್‌ ಸೇವೆಗಳಲ್ಲಿ ಶೇ. 25ರಷ್ಟು ಮೀಸಲಾತಿಗೆ ಅರ್ಹರಾಗಲಿದ್ದಾರೆ. ಗ್ರಾಮೀಣ ಪ್ರದೇಶದ ಜನಸಂಖ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಂಡು ಶೇ. 70ರಷ್ಟು ಮೀಸಲಾತಿ ಕೊಟ್ಟರೂ ತಪ್ಪೇನಿಲ್ಲ. ವೃತ್ತಿಶಿಕ್ಷಣ ಮತ್ತು ವಿಶ್ವವಿದ್ಯಾಲಯ ಪ್ರವೇಶದಲ್ಲೂ ಮೀಸಲಾತಿ ಅತ್ಯಗತ್ಯ ಎಂದು ಸಂಯುಕ್ತ ಜನತಾ ದಳದ ಸದಸ್ಯರು ಹಿಡಿದ ಪಟ್ಟಿಗೆ ಸರ್ಕಾರ ಓ ಎನ್ನಲಿಲ್ಲ. ಹೀಗಾಗಿ ಸಂಯುಕ್ತ ಜನತಾ ದಳದ ಸದಸ್ಯರು ಸಭಾತ್ಯಾಗ ಮಾಡಿದರು.

ಸದ್ಯಕ್ಕೇನೋ ಇದೊಂದು ಪ್ರಯೋಗವಾದ್ದರಿಂದ ಪರವಾಗಿಲ್ಲ. ಆದರೆ ಮುಂದೆ ಮೀಸಲಾತಿ ಪ್ರಮಾಣವನ್ನು ಶೇ.70ರಷ್ಟಕ್ಕೆ ಹೆಚ್ಚಿಸಬೇಕು ಎಂದು ಪ್ರತಿಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಆಗ್ರಹಿಸಿದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ಈ ಮಸೂದೆ ಇನ್ನಷ್ಟು ಅವಕಾಶ ನೀಡುತ್ತದಷ್ಟೆ. ತಮಿಳುನಾಡಿನಂತೆ ನಮ್ಮಲ್ಲೂ ಸಂವಿಧಾನದ 9ನೇ ಪರಿಚ್ಛೇದದಲ್ಲಿ ಈ ಮಸೂದೆಯನ್ನು ಸೇರಿಸುವಂತೆ ಒತ್ತಡ ತರಬೇಕಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಡಿ.ಬಿ.ಚಂದ್ರೇಗೌಡ ಪ್ರತಿಕ್ರಿಯಿಸಿದರು.

ಸಂಪುಟ ಉಪ ಸಮಿತಿ ವರದಿ ಸಿದ್ಧವಾಗಲಿ : ಜಿಲ್ಲಾ ಅಥವ ಪ್ರದೇಶವಾರು ನೇಮಕಾತಿ ಬಗೆಗೆ ಸಚಿವ ಸಂಪುಟದ ಉಪ ಸಮಿತಿ ವರದಿ ಸಿದ್ಧಪಡಿಸುತ್ತಿದೆ. ವರದಿ ಪೂರ್ಣವಾದ ನಂತರ ಸರ್ಕಾರ ಮುಂದೇನು ಮಾಡಬೇಕೆಂಬುದನ್ನು ನಿರ್ಧರಿಸಲಿದೆ ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆಯಾಂದಕ್ಕೆ ಉ್ತತರಿಸಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X