ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಾ ದುರಂತಗಳಿಗೆ ರಾಜ್‌ ಅವರೇ ಹೊಣೆ- ಎಂ. ಚಿದಾನಂದ ಮೂರ್ತಿ

By Staff
|
Google Oneindia Kannada News

ಬೆಂಗಳೂರು : ನಾಡಿನ ಪ್ರಮುಖರೆಲ್ಲಾ ರಾಜ್‌ ಬಿಡುಗಡೆಯ ಬಗ್ಗೆ ಸಂಭ್ರಮಿಸುತ್ತಾ , ಅವರ ಸಜ್ಜನಿಕೆಯನ್ನು ಹೊಗಳುತ್ತಿರುವಾಗ ಕನ್ನಡ ಶಕ್ತಿ ಕೇಂದ್ರ ವರನಟನ ಅರಣ್ಯಪರ್ವದ ನಡವಳಿಕೆಗಳ ಬಗ್ಗೆ ಅಪಸ್ವರವೆತ್ತಿದೆ.

ಒತ್ತೆಯಾಳಾಗಿದ್ದಾಗ ವೀರಪ್ಪನ್‌ಗೆ ಅನುಕೂಲವಾಗುವಂತಹ ಸಂದೇಶಗಳನ್ನು ಕಳುಹಿಸುವ ಮೂಲಕ ಅವರು ತಮಿಳರ ದೃಷ್ಟಿಯಲ್ಲಿ ವೀರಪ್ಪನನ್ನು ನಾಯಕನನ್ನಾಗಿಸಿದರು. ಇದನ್ನು ಅವರ ಮೇಲೆ ಅಭಿಮಾನವಿಟ್ಟ ಕನ್ನಡದ ಜನತೆ ಸಹಿಸಿಕೊಳ್ಳುವುದು ಕಷ್ಟ ಎಂದು ಶಕ್ತಿ ಕೇಂದ್ರ ಆಪಾದಿಸಿದೆ.

ಕೇಂದ್ರದ ಪರವಾಗಿ ಶಕ್ತಿಕೇಂದ್ರದ ಅಧ್ಯಕ್ಷ ಎಂ. ಚಿದಾನಂದಮೂರ್ತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ವೀರಪ್ಪನ್‌ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಹಾಗೂ ಅವನ ವಿರುದ್ಧ ಕಾರ್ಯಾಚರಣೆ ನಡೆಸದಂತೆ ಕಾಡಿನಿಂದ ಸಂದೇಶ ಕಳಿಸಿದ ರಾಜ್‌ ನಡವಳಿಕೆಯನ್ನು ಅವರು ಟೀಕಿಸಿದರು. ಕರ್ನಾಟಕದ ಹಿತ ನನಗೆ ಮುಖ್ಯ ಎಂದು ರಾಜ್‌ ಹೇಳಿಕೆ ನೀಡಿದ್ದಲ್ಲಿ ಅವರು ಅಭಿಮಾನಿಗಳ ದೃಷ್ಟಿಯಲ್ಲಿ ದೊಡ್ಡವರಾಗುತ್ತಿದ್ದರು ಎಂದರು.

ರಾಜ್‌ ಅಪಹರಣ ಪ್ರಕರಣದಿಂದಾಗಿ ರಾಜ್ಯಕ್ಕೆ ಅಪಾರ ನಷ್ಟ ಹಾಗೂ ಮುಖಭಂಗ ಉಂಟಾಗಿದೆ. ರಾಜ್ಯ ಸರ್ಕಾರವಂತೂ ತಮಿಳುನಾಡಿಗೆ ಬೇಷರತ್ತಾಗಿ ಶರಣಾಗಿದೆ. ಕೆಜಿಎಫ್‌ನಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆದಿದೆ. ರಾಜ್ಯದಲ್ಲಿನ ತಮಿಳರ ಆತ್ಮವಿಶ್ವಾಸ ಹೆಚ್ಚಿದೆ ಮುಂತಾಗಿ ಅವರು ಟೀಕಿಸಿದರು.

ಸರ್ಕಾರದ ಎಚ್ಚರಿಕೆಯನ್ನು ಮೀರಿ ಗಾಜನೂರಿಗೆ ಹೋದ ರಾಜ್‌, ಗಂಡಾಂತರವನ್ನು ತಾವಾಗಿಯೇ ತಂದುಕೊಂಡರು. ಆನಂತರದ ಎಲ್ಲಾ ದುರಂತಗಳಿಗೆ ಅವರೇ ಹೊಣೆ ಎಂದು ದೂರಿದ ಅವರು, ಪ್ರಕರಣದ ಬಗ್ಗೆ ಅನೇಕ ಗೊಂದಲಗಳಿದ್ದು ಅವುಗಳ ಬಗ್ಗೆ ರಾಜ್‌ ಸ್ಪಷ್ಟನೆ ನೀಡಬೇಕು, ಜನತೆಗೆ ಸತ್ಯಾಂಶ ತಿಳಿಸಬೇಕು, ತಮ್ಮ ಹೆಸರಿನಲ್ಲಿ ನಡೆಯುತ್ತಿರುವ ಹಣ ವಸೂಲಿ, ಗಲಭೆಗಳನ್ನು ರಾಜ್‌ ಬಹಿರಂಗವಾಗಿ ಖಂಡಿಸಬೇಕು ಎಂದು ಆಗ್ರಹಿಸಿದರು.

ರಾಜ್‌ಕುಮಾರ್‌ ಬಗ್ಗೆ ನಮಗೆ ಗೌರವವಿದೆ. ಪ್ರಸ್ತುತದ ಅಳಲು ಕನ್ನಡದ ಹಿತಾಸಕ್ತಿಗೆ ಸಂಬಂಧಿಸಿದುದು ಎಂದು ಸ್ಪಷ್ಟಪಡಿಸಿದ ಚಿದಾನಂದ ಮೂರ್ತಿ, ಪ್ರಕರಣ ಸದ್ಯಕ್ಕೆ ಬಗೆಹರಿದಿದ್ದರೂ ಮುಂದೆ ಏನೆಲ್ಲಾ ದುರಂತಗಳಿಗೆ ಕುಡಿಯಾಗುತ್ತದೆಯೋ ಎನ್ನುವ ಶಂಕೆ ವ್ಯಕ್ತಪಡಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X