ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾಮಿಯೇ ಶರಣಂ ಅಯ್ಯಪ್ಪ

By Staff
|
Google Oneindia Kannada News

ಲೌಕಿಕ : ರಾಜ್ಯದಲ್ಲಿ ಈಗ ಮೆಟಡಾರ್‌, ಮ್ಯಾಕ್ಸಿ ಕ್ಯಾಬ್‌, ಟೆಂಪೋ ಟ್ರಾಕ್ಸ್‌, ಮಾರುತಿ ವ್ಯಾನ್‌, ಕಾರುಗಳು ಬಾಡಿಗೆಗೆ ದೊರಕುವುದೇ ಕಷ್ಟ. ನವೆಂಬರ್‌, ಡಿಸೆಂಬರ್‌, ಜನವರಿ ತಿಂಗಳೇ ಹಾಗೆ. ಬಾಡಿಗೆ ವಾಹನಗಳಿಗೆ ಎಲ್ಲಿಲ್ಲದ ಬೇಡಿಕೆ. ವಾಹನಗಳು ಸಿಕ್ಕರೂ, ಮಾಮೂಲಿಗಿಂತಲೂ ಹೆಚ್ಚು ಬಾಡಿಗೆ ನೀವು ಕೊಡಲೇ ಬೇಕು.

ಜಾಸ್ತಿ ಯಾಕೆ ಕಕ್ಕಬೇಕು ಅಂತೀರಾ ? ಇದು ಅಯ್ಯಪ್ಪನ ಸೀಸನ್‌. ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಕಪ್ಪು ಬಟ್ಟೆ ತೊಟ್ಟು, ಮಾಲೆ ಹಾಕಿ, ಶ್ರದ್ಧಾ ಭಕ್ತಿಗಳಿಂದ ಶಬರಿ ಮಲೆಗೆ ಹೋಗುವ ಭಕ್ತರ ಸಂಖ್ಯೆ ಕರ್ನಾಟಕದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಯಾವುದೇ ಕಾಲೋನಿಯಲ್ಲಿ ನೋಡಿ , ಅಲ್ಲೊಂದು ಅಯ್ಯಪ್ಪನ ಮೇಕ್‌ ಶಿಫ್ಟ್‌ ದೇವಸ್ಥಾನ - ಭಜನಾ ಮಂದಿರ ಇರುತ್ತದೆ. ಶಬರಿಮಲೆ, ಶಬರಿಮಲೆ... ಭಜನೆ ಕಿವಿಗೆ ಬೀಳುತ್ತದೆ. ಇವತ್ತು ಸಮಾಜದ ಎಲ್ಲ ವರ್ಗ, ಜಾತಿಯ ಜನತೆ ಅಯ್ಯಪ್ಪನ ಭಕ್ತರಾಗುತ್ತಿದ್ದು ಹರಕೆ ಪೂರೈಸಲು ಶಬರಿಮಲೈಗೆ ಯಾತ್ರೆ ಕೈಗೊಳ್ಳುವ ಪರಿಪಾಠ ಬೆಳೆಯುತ್ತಿದೆ. ಹಾಗಾಗಿ ವ್ಯಾನ್‌ಗೆ, ಕಾರುಗಳಿಗೆ ಭಾರೀ ಬೇಡಿಕೆ.

ದಿನೇ ದಿನೇ ಹೆಚ್ಚುತ್ತಿರುವ ಶಬರಿ ಯಾತ್ರಾಥಿಗಳಿಗೆ ಪ್ರವಾಸ ಸೌಕರ್ಯ ಕಲ್ಪಿಸಲು ಸರಕಾರಗಳು ಮುಂದಾಗಿವೆ. ಶಬರಿ ಮಲೆ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ವಿಶೇಷ ಬಸ್‌ ಹಾಗೂ ರೈಲು ಸೌಕರ್ಯಗಳೂ ಇವೆ. ಶಬರಿ ಮಲೆಗೆ ಹೋಗುವ ಭಕ್ತಾದಿಗಳು, ಆನಂತರ ಧರ್ಮಸ್ಥಳ, ನಂಜನಗೂಡು, ಕೊಡಗು, ಬೇಲೂರು, ಹಳೇಬೀಡು, ಕೊಲ್ಲೂರು, ಉಡುಪಿ, ಕಾರ್ಕಳ, ಮುರುಡೇಶ್ವರ... ಹೀಗೆ ರಾಜ್ಯದ ನಾನಾ ಭಾಗಗಳ ತೀರ್ಥ ಕ್ಷೇತ್ರಗಳಿಗೂ ಭೇಟಿ ನೀಡುತ್ತಾರೆ.

ನವೆಂಬರ್‌ ತಿಂಗಳಿನಿಂದ ಮಕರ ಸಂಕ್ರಮಣದವರೆಗೆ ರಾಜ್ಯದ ಬಹುತೇಕ ಎಲ್ಲ ದೇವಾಲಯಗಳೂ ಅಯ್ಯಪ್ಪನ ಭಕ್ತರಿಂದ ತುಂಬಿರುತ್ತವೆ. ಈ ಕಲಿಯುಗದಲ್ಲಿ ಎಲ್ಲ ವರ್ಣದ ಎಲ್ಲ ವರ್ಗದ ಜನರನ್ನೂ ತನ್ನತ್ತ ಸೆಳೆಯುವ ಅಯ್ಯಪ್ಪ ಹರಿ ಹರ ಸುತನಂತೆ.

ಪೌರಾಣಿಕ : ಬ್ರಹ್ಮನ ವರದಿಂದ ಬಲಿಷ್ಠಳಾದ ರಕ್ಕಸಿ ಮಹಿಷಿಯ ಮರ್ದನಕ್ಕಾಗಿ ಹುಟ್ಟಿದವನೇ ಈ ಅಯ್ಯಪ್ಪ. ಘನ ಘೋರ ತಪವನ್ನು ಆಚರಿಸಿದ ಮಹಿಷಿ ಸಾವೇ ಇಲ್ಲದ ವರವನ್ನು ಕೇಳಿದಳಂತೆ. ಸೃಷ್ಟಿ ಸ್ಥಿತಿಗೆ ವಿರುದ್ಧವಾದ ಈ ವರ ನೀಡುವುದ ಸಾಧ್ಯವಿಲ್ಲ ಬೇರೆ ಏನಾದರೂ ವರ ಕೇಳು ಎಂದಾಗ ಮಹಿಷಿ, ಹಾಗಾದರೆ, ಶಿವ - ವಿಷ್ಣುವಿನ ಸಮಾಗಮದಿಂದ ಹುಟ್ಟುವ ಮಗುವಿಂದ ನನ್ನ ಸಾವು ಸಂಭವಿಸಬೇಕು ಎಂದು ವರ ಕೇಳಿದಳಂತೆ. ವಿಷ್ಣುವೂ ಪುರುಷ, ಶಿವನೂ ಪುರುಷ ಹೀಗಾಗಿ ತನಗೆ ಸಾವೆ ಬಾರದು ಎಂಬುದು ಆಕೆಯ ಕಲ್ಪನೆಯಾಗಿತ್ತು.

ಆದರೆ, ಮಹಿಷಿಯ ಅಟ್ಟಹಾಸ ಮಿತಿ ಮೀರಿದಾಗ, ಭಸ್ಮಾಸುರನ ನಾಶಕ್ಕೆ ಮೋಹಿನಿಯ ರೂಪ ಧರಿಸಿದ್ದ ವಿಷ್ಣುವನ್ನು ಮೋಹಿಸಿದ ಶಿವನ ಅನುಗ್ರಹದಿಂದ ಅಯ್ಯಪ್ಪ ಜನ್ಮತಳೆದನೆನ್ನುತ್ತದೆ ಪುರಾಣ. ಆನಂತರ, ತನ್ನ ಸಾಕುತಾಯಿಯ ಕೋರಿಕೆ ಈಡೇರಿಸಲು ಹುಲಿಯನ್ನೇ ಹಿಡಿದು, ಅದರ ಮೇಲೆ ಸವಾರಿ ಮಾಡಿ ಬಂದ ಅಯ್ಯಪ್ಪ, ದೇವಾನುದೇವತೆಗಳ ಕೋರಿಕೆಯ ಮೇರೆಗೆ ಮಹಿಷಿಯನ್ನು ಕೊಂದ ನಂತರ, ಶಬರಿಗಿರಿಗೆ ಹೋಗಿ ನೆಲೆಸಿದನಂತೆ.

ಮಹಾ ಮಹಿಮನೆಂದು ಜನ ಪೂಜಿಸುವ ಈ ಅಯ್ಯಪ್ಪನ ಕಾಣಲು, ಜನ ನೇಮ ನಿಷ್ಠೆಯಿಂದ ಮಾಲೆ ಧರಿಸಿ, ಕಪ್ಪು ಬಟ್ಟೆ ತೊಟ್ಟು, ಇರುಮುಡಿ ಹೊತ್ತು , ಕಲ್ಲು ಮುಳ್ಳಿನ ಹಾದಿಯಲ್ಲಿ ಅಯ್ಯಪ್ಪನ ಸನ್ನಿಧಿಗೆ ಹೊಗುತ್ತಾರೆ. ಇರುಮುಡಿ ಹೊತ್ತವರು 18 ಮೆಟ್ಟಿಲುಹತ್ತಿ ದೇವರ ದರ್ಶನ ಮಾಡುತ್ತಾರೆ. ಸಂಕ್ರಮಣದ ದಿನ ಉದ್ಭವಿಸುವ ಮಕರಜ್ಯೋತಿಯ ನೋಡಲು ಲಕ್ಷಾಂತರ ಮಂದಿ ಭಕ್ತರು ಶಬರಿ ಮಲೆಯಲ್ಲಿ ಸೇರುತ್ತಾರೆ.

ಮೇಲು ಕೀಳೆಂಬ ಭಾವನೆ ಇಲ್ಲದೆ, ಸಿರಿವಂತ - ಬಡವ ಎಂಬ ಭೇದವಿಲ್ಲದೆ, ಹುದ್ದೆ - ಪದವಿಗಳ ಪರಿವೆಯಿಲ್ಲದೆ, ಅಧಿಕಾರಿಯಿಂದ ಆಳಿನವರೆಗೆ ಎಲ್ಲರೂ ಶಬರಿ ಮಲೆಗೆ ಹೋಗುತ್ತಾರೆ. ಈಗ ರಾಜ್ಯದಲ್ಲಿ ಅಯ್ಯಪ್ಪನ ಮಾಲೆ ಹಾಕಿದ ಭಕ್ತಾದಿಗಳು ಶಬರಿಗಿರಿಯತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಈ ಅವಧಿಯಲ್ಲಿ ಮಾಲೆ ತೊಟ್ಟವರು ಇತರರನ್ನು ಸ್ವಾಮಿ ಎಂದೇ ಕರೆಯುತ್ತಾರೆ. ಇತರರೂ ಮಾಲೆ ತೊಟ್ಟವರನ್ನು ಸ್ವಾಮಿ ಎಂದೇ ಸಂಭೋದಿಸುತ್ತಾರೆ. 18 ಬಾರಿ ಶಬರಿಮಲೆಗೆ ಹೋಗಿ ಬಂದವರನ್ನು ಗುರುಸ್ವಾಮಿ ಎಂದೂ ಕರೆಯಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X