ಹತ್ತನೇ ತರಗತಿಯ ವರಗೆ ಪಾಸು-ಫೇಲಿನ ಪ್ರಶ್ನೆಯೇ ಬೇಡ
ಹೊಸದೆಹಲಿ : ಮಕ್ಕಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ದೃಷ್ಠಿಯಿಂದ ಹತ್ತನೇ ತರಗತಿಯವರೆಗೆ ಪಾಸು -ಫೈಲು ಪದ್ಧತಿಯನ್ನು ಕೈ ಬಿಡುವ ರಾಷ್ಟ್ರೀಯ ಪರಿಷ್ಕೃತ ಪಠ್ಯ ನೀತಿಯಾಂದು ಸರಕಾರದ ಮುಂದಿದೆ.
ಈ ಕುರಿತು ರಾಷ್ಟ್ರೀಯ ಶಿಕ್ಷಣ, ಅಧ್ಯಯನ ಮತ್ತು ತರಬೇತಿ ಪರಿಷತ್ತಿ ನ (ಎನ್‌ಸಿಇಆರ್‌ಟಿ) ಸಮಿತಿ ನಡೆಸಿದ ಅಧ್ಯಯನ ವರದಿಯನ್ನು ಮಂಗಳವಾರದಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಮುರಳಿ ಮನೋಹರ್ ಜೋಶಿಯವರಿಗೆ ಸಲ್ಲಿಸಲಾಗಿದೆ.
ಸಿಬಿಎಸ್‌ಇ ನಡೆಸುವ ಪರೀಕ್ಷೆಗಳಿಗಾಗಿ ಮಕ್ಕಳು ವರ್ಷವಿಡೀ ತಯಾರಿ ನಡೆಸಬೇಕಾಗಿರುವುದರಿಂದ ಅಂತಹ ಪಠ್ಯ ಚಟುವಟಿಕೆಗಳನ್ನು ಕಡಿಮೆ ಮಾಡುವುದು, ದೇಶದ ಎಲ್ಲ ಮಕ್ಕಳಿಗೂ ಶಿಕ್ಷಣ ಒದಗಿಸುವುದು, ಕಲಿಕೆಗೆ ಬೇಕಾದ ವಿಷಯಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಮಕ್ಕಳಿಗೆ ನೀಡುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಸಮಿತಿ ಶಿಫಾರಸು ಮಾಡಿದ ವರದಿಯನ್ನು ದೈಶಾದ್ಯಂತ ಇರುವ ಶಿಕ್ಷಣ ಸಂಸ್ಥೆಯ ನಿರ್ದೇಶಕರಿಗೆ ಕಳುಹಿಸಿ, ಅವರ ಅಭಿಪ್ರಾಯ ಪಡೆಯಲಾಗುವುದು. 2002ನೇ ಇಸವಿಯ ವೇಳೆಗೆ ಈ ನೀತಿಯನ್ನು ಅಳವಡಿಸಲಾಗುವುದು ಎಂದು ವರದಿಯನ್ನು ಪರಿಶೀಲಿಸಿದ ಸಚಿವರು ಹೇಳಿದರು.
ಸೆಮಿಸ್ಟರ್ ಪದ್ಧತಿಯಲ್ಲಿ ಪ್ರೌಢ ಶಿಕ್ಷಣವನ್ನು ರೂಪಿಸಿ, ವಿವಿಧ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಗುಣಮಟ್ಟವನ್ನು ಗಮನಿಸಲಾಗುವುದು. ಶುರುವಿನ ಮೂರು ಸೆಮಿಸ್ಟರ್‌ಗಳ ಮೌಲ್ಯ ಮಾಪನ ಶಾಲೆಯಲ್ಲಿಯೇ ನಡೆದರೆ, ಕೊನೆಯ ಸೆಮಿಸ್ಟರ್‌ನ ಮೌಲ್ಯ ಮಾಪನವನ್ನು ಕೇಂದ್ರ ಪರೀಕ್ಷಾ ಮಂಡಳಿ ನಡೆಸುತ್ತದೆ.
ಸಮಿತಿ ಮಾಡಿದ ಶಿಫಾರಸಿನ ಪ್ರಕಾರ
- ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುವ ನಿಟ್ಟಿನಿಂದ ಪರ ಧರ್ಮ ಸಹಿಷ್ಣುತೆ, ವಿವಿಧ ಧರ್ಮಗಳ ಧಾರ್ಮಿಕ ತತ್ವಗಳು , ರಾಷ್ಟ್ರೀಯತೆ ಮತ್ತು ದೇಶಭಕ್ತಿ ಯ ಪಾಠ .
- ಆಡಳಿತ ಭಾಷೆಯಾಗಿ ಹಿಂದಿ, ಸಂಸ್ಕೃತ ಕಲಿಕೆ ಮತ್ತು ಪ್ರಾದೇಶಿಕ ಭಾಷಾ ಪಾಠಗಳಿಗೆ ಪ್ರಾಮುಖ್ಯತೆ
- 4-6 ವರ್ಷದವರೆಗೆ ಶಿಕ್ಷಣ ಪೂರ್ವ ಪಾಠಗಳು
- 1-2ನೇ ತರಗತಿಯವರೆಗೆ ಭಾಷೆ ಮತ್ತು ಗಣಿತ ಪಾಠ, 3ರಿಂದ 4ನೇತರಗತಿಯಲ್ಲಿ ಪರಿಸರ ಕುರಿತ ಪಠ್ಯ.
- ಇಂಗ್ಲಿಷ್ ಸೇರಿದಂತೆ ಇತರ ಭಾಷೆಯ ಪಠ್ಯ ಗಣಿತ, ತಂತ್ರಜ್ಞಾನ, ಸಮಾಜ ಶಾಸ್ತ್ರ, ಕಂಪ್ಯೂಟರ್ ಮತ್ತು ಕಲೆಯ ಪಠ್ಯಗಳನ್ನು ಮಾಧ್ಯಮಿಕ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು.
(ಐಎಎನ್‌ಎಸ್)