ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಷ್ಟು ದಿನ ಏನೆಲ್ಲ ನಡೆದು ಹೋಯಿತು ..

By Staff
|
Google Oneindia Kannada News

ಅಂತೂ ರಾಜ್‌ ಬಿಡುಗಡೆಯಾಗಿದೆ. 109 ದಿನಗಳ ರಾಜ್‌ಕುಮಾರ್‌ ಅರಣ್ಯಪರ್ವ ಮುಕ್ತಾಯವಾಗುವುದರೊಂದಿಗೆ ರಾಜ್ಯದ ಜನತೆ ಅನುಭವಿಸುತ್ತಿದ್ದ ವಿಚಿತ್ರ ತಳಮಳ ಕೊನೆಗೊಂಡಿದೆ. ನವಂಬರ್‌ನಲ್ಲಿಯೇ ರಾಜ್‌ ಕಾಡಿನಿಂದ ವಾಪಸ್ಸಾಗಿರುವುದರಿಂದ ಮಂಕಾಗಿದ್ದ ನಾಡಹಬ್ಬದ ಸಂಭ್ರಮ ಮರುಕಳಿಸುವುದೀಗ ಸ್ಪಷ್ಟವಾಗಿದೆ.

ಟಾಡಾ ಬಂಧಿಗಳ ಬಿಡುಗಡೆಗೆ ಸುಪ್ರಿಂಕೋರ್ಟ್‌ ನಿರಾಕರಣೆಯಿಂದಾಗಿ ರಾಜ್‌ ಬಿಡುಗಡೆ ಕಗ್ಗಂಟಾಗಿತ್ತು . ಕಾಡಿಗೆ ಹೋಗಿ ಬಂದವರೆಲ್ಲಾ ಟಾಡಾ ಬಂಧಿಗಳ ಬಿಡುಗಡೆಗೆ ವೀರಪ್ಪನ್‌ ಪಟ್ಟು ಹಿಡಿದಿದ್ದಾನೆ ಎಂದು ಹೇಳಿದ್ದು ಕೂಡ ರಾಜ್‌ ಬಿಡುಗಡೆ ವಿಷಯವನ್ನು ಪ್ರಶ್ನೆಯಾಗುಳಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್‌ ಬಿಡುಗಡೆ ಕುರಿತ ಆಗು ಹೋಗಿನ ಕೆಲವು ವಿಷಯಗಳು ಕುತೂಹಲ ಹುಟ್ಟಿಸುತ್ತವೆ.

Nedumaranತಮ್ಮ ಮೊದಲನೆ ಸಂಧಾನ ಯಾತ್ರೆಯ ಸಂದರ್ಭದಲ್ಲೇ ತಮಿಳು ರಾಷ್ಟ್ರೀಯ ಇಯಕ್ಕಂನ ನಾಯಕ ಪಿ. ನೆಡುಮಾರನ್‌ ಅವರು, ರಾಜ್‌ಕುಮಾರ್‌ ಅವರೊಂದಿಗೇ ವಾಪಸ್ಸಾಗುತ್ತೇನೆ ಅನ್ನುವ ಆತ್ಮ ವಿಶ್ವಾಸದ ಮಾತುಗಳನ್ನಾಡಿದ್ದರು. ಆದರೆ, ಆ ಸಂಧಾನಯಾತ್ರೆಯ ಯಶಸ್ಸು ಕೇವಲ ಗೋವಿಂದರಾಜ್‌ ಅವರ ಬಿಡುಗಡೆಗೆ ಮಾತ್ರ ಸೀಮಿತವಾಯಿತು. ಆ ಸಂದರ್ಭದಲ್ಲಿ ಗೋಪಾಲ್‌ರ ದುಡುಕು ಮಾತೇ ರಾಜ್‌ ಬಿಡುಗಡೆಗೆ ಅಡ್ಡಿಯಾಯಿತು, ರಾಜ್‌ ಬಿಡುಗಡೆಯ ಗೌರವ ನನಗೆ ಸಿಕ್ಕುವುದು ಅವರಿಗೆ ಇಷ್ಟವಿರಲಿಲ್ಲ ಎಂದು ಆಪ್ತರ ಬಳಿ ನೆಡುಮಾರನ್‌ ಅಲವತ್ತು ಕೊಂಡಿದ್ದರು. ಕೇವಲ ಗೋವಿಂದರಾಜ್‌ ಅವರನ್ನು ಬಿಡಿಸಲು ಅಯ್ಯಾ ಕಾಡಿಗೆ ಹೋಗಬೇಕಿತ್ತೆ ! ಎಂದು ನೆಡುಮಾರನ್‌ ಅವರ ಅಭಿಮಾನಿಗಳೂ ಬೇಸರಿಸಿಕೊಂಡಿದ್ದರು.

ಮತ್ತೊಂದು ಸುದ್ದಿಯ ಪ್ರಕಾರ, ರಾಜ್‌ ಬಿಡುಗಡೆಗೆ ತಮಿಳುನಾಡು ಸರ್ಕಾರದ ಕೆಲವು ಉನ್ನತ ಅಧಿಕಾರಿಗಳು ಅಡ್ಡಿ ಮಾಡಿದ್ದರಂತೆ. ನೆಡುಮಾರನ್‌ ಅವರ ಎರಡನೆಯ ಯಾತ್ರೆಯ ಹೊತ್ತಿಗೆ ಕರುಣಾನಿಧಿ ಅವರನ್ನು ಸರಿಪಡಿಸಿದರು ಎನ್ನಲಾಗಿದೆ.

ಒಟ್ಟಿನಲ್ಲಿ ನೆಡುಮಾರನ್‌ ಅವರು, ವೀರಪ್ಪನ್‌ ಮನ ಒಲಿಸಿರುವುದು ಸ್ಪಷ್ಟವಾಗಿದೆ. ರಾಜ್‌ ಬಿಡುಗಡೆಯ ಸಂಪೂರ್ಣ ಕೀರ್ತಿ ಅವರದೇ. ಉಭಯ ಸರ್ಕಾರಗಳಿಂದ ಅಧಿಕೃತ ಸಂಧಾನಕಾರನ ಗೌರವ ಸಿಗದೇ ಇದ್ದರೂ, ಕಾಂಗ್ರೆಸ್ಸಿಗರಿಂದ ದೇಶ ದ್ರೋಹಿಯ ಆಪಾದನೆ ಹೊತ್ತರೂ, ಕೇವಲ ಮಾನವೀಯತೆಯ ಆಧಾರದ ಮೇಲೆ ಮತ್ತೆ ಕಾಡಿಗೆ ನಡೆದ ನೆಡುಮಾರನ್‌ ತಮ್ಮ ಸಂಧಾನ ಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ರಾಜ್‌ ಬಿಡುಗಡೆ ತಮ್ಮಿಂದ ಮಾತ್ರ ಸಾಧ್ಯ ಎಂದು ಬೀಗುತ್ತಿದ್ದ ಗೋಪಾಲ್‌ರ ನಂಬಿಕೆ ಹುಸಿಯಾಗಿದೆ. ಆರನೇ ಸಂಧಾನಯಾತ್ರೆಗೆ ತೆರಳಲು ವೀರಪ್ಪನ್‌ನಿಂದ ಗೋಪಾಲ್‌ ಸಂದೇಶದ ನಿರೀಕ್ಷೆಯಲ್ಲಿರುವಾಗಲೇ ರಾಜ್‌ ಬಿಡುಗಡೆಯಾಗಿದೆ. ಆ ಮಟ್ಟಿಗದು ಸರ್ಕಾರದ ಅಧಿಕೃತ ಸಂಧಾನಕಾರ ಗೋಪಾಲ್‌ ಅವರ ಸೋಲಾಗಿದೆ. ಬಾತ್‌ ರೂಂಗೆ ಹೋಗಿ ಬರುವಷ್ಟೇ ಗೋಪಾಲ್‌ ಕಾಡಿಗೆ ಹೋಗಿ ಬರುತ್ತಾರೆ, ಅವರು ವೀರಪ್ಪನ್‌ನ ಏಜೆಂಟ್‌ ಅನ್ನುವ ಟೀಕೆಗಳು ಮುಂದಿನ ದಿನಗಳಲ್ಲಿ ಮತ್ತೂ ಹೆಚ್ಚ ಬಹುದು.

ಏನೆಲ್ಲಾ ನಡೆದು ಹೋಯಿತು? ಈ ನಡುವೆ ನೂರಕ್ಕೂ ಮಿಕ್ಕ ದಿನಗಳಲ್ಲಿ ರಾಜ್ಯದಲ್ಲಿ ಏನೆಲ್ಲಾ ನಡೆದು ಹೋಯಿತು? ಆರಂಭದ ದಿನಗಳ ಬಿಸಿಯಲ್ಲಿ ನಾಡೇ ಕಳುವಾಯಿತು ಅನ್ನುವ ಆತಂಕ, ಮತ್ತೆ ಕೆಲವೇ ದಿನಗಳಲ್ಲಿ ನಾಡಿನ ಆತಂಕ ಕೇವಲ ಕುಟುಂಬದ ಸಮಸ್ಯೆ ಮಟ್ಟಕ್ಕೆ ಮಾತ್ರ ಇಳಿಯಿತು. ತಮ್ಮ ಹಿರಿಯಣ್ಣ ನ ಅಪಹರಣವಾಯಿತೋ ಅನ್ನುವಂತೆ ಪ್ರತಿದಿನ ರಾಜ್‌ಮನೆಗೆ ಭೇಟಿಕೊಟ್ಟು ಹೂವು ವಿಭೂತಿ ಕೊಟ್ಟು ಬರುತ್ತಿದ್ದ ಕೃಷ್ಣ , ಆನಂತರ ಪ್ರಕರಣದ ಸಂಪೂರ್ಣ ಹೊರೆಯನ್ನು ಗೃಹಸಚಿವ ಖರ್ಗೆಯವರ ಹೆಗಲಿಗೆ ವರ್ಗಾಯಿಸಿ ತಮಗೂ ಪ್ರಕರಣಕ್ಕೂ ಸಂಬಂಧ ಇಲ್ಲದ ರೀತಿ ಮುಗುಮ್ಮಾದರು. ಕೃಷ್ಣ ಮತ್ತು ರಾಜ್‌ ಕುಟುಂಬದ ನಡುವಿನ ಸಂಬಂಧ ಹಳಸಿದೆ ಅನ್ನುವ ವದಂತಿಗಳೂ ಹಬ್ಬಿದವು. ಇದಕ್ಕೆ ಸರಿಯಾಗಿ ರಾಜ್‌ ಪುತ್ರರು ತಾವೇ ನೇರವಾಗಿ ಕರುಣಾನಿಧಿ, ಗೋಪಾಲ್‌ ಹಾಗೂ ನೆಡುಮಾರನ್‌ ಅವರನ್ನು ಭೇಟಿಯಾಗಿ ಅಪ್ಪಾಜಿ ಬಿಡುಗಡೆ ಕುರಿತು ಚರ್ಚಿಸಲಾರಂಭಿಸಿದರು.

ರಾಜ್‌ ಬಿಡುಗಡೆ ವಿಳಂಬವಾಗುತ್ತಿರುವುದನ್ನು ಪ್ರತಿಭಟಿಸಿ ಬೀದಿಗಿಳಿದಿದ್ದ ಪುತ್ರತ್ರಯರು ಏಕಾಏಕಿ ಅನೂಹ್ಯ ಮೌನಕ್ಕೆ ಶರಣಾದರು. ಆ ಹೊತ್ತಿನಲ್ಲೇ ವೀರಪ್ಪನ್‌ ಅಡಗು ತಾಣದಿಂದ ಓಡಿಬಂದ ನಾಗಪ್ಪ ಮಾರನೇ ದಿನವೇ ನಾಪತ್ತೆಯಾದರು. ನಂತರ ವೀರಪ್ಪನ್‌ ಬಿಡುಗಡೆ ಮಾಡಿದ ಗೋವಿಂದರಾಜ್‌ ಕೂಡ ಹೆಚ್ಚು ಮಾತಾಡದೆ ಆಸ್ಪತ್ರೆ ಸೇರಿದರು. ಈ ಎಲ್ಲಾ ಘಟನೆಗಳು ರಾಜ್‌ ಪ್ರಕರಣ ಕುರಿತು ಜನತೆಯನ್ನು ಮತ್ತಷ್ಟು ಗೊಂದಲದಲ್ಲಿ ದೂಡಿದವು.

ಓಡಿ ಬಂದ ಒತ್ತೆಯಾಳು ನಾಗಪ್ಪ , ಅಣ್ಣಾವ್ರು ಬಂದ ಮೇಲೇ ನಿಜ ಗೊತ್ತಾಗುತ್ತದೆ ಎಂದು ಆಪ್ತರ ಬಳಿ ಹೇಳಿದ್ದರಂ ತೆ. ಅವರ ಮಾತು ನಿಜವಾಗುವ ಹೊತ್ತು ಬಂದಿದೆ. ರಾಜ್‌ ಮರಳಿ ಬಂದಿದ್ದಾರೆ. ಅವರ ಪ್ರತಿ ಮಾತಿಗೂ ಜನತೆ ಚಾತಕದಂತೆ ಕಾಯುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X