ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರ್ಮ ಉಳಿಸಿಕೊಳ್ಳಲು ಕರುಣಾನಿಧಿ ಓಳು : ಸಿಂಧ್ಯಾ- ಭೈರೇಗೌಡ

By Staff
|
Google Oneindia Kannada News

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರ ಉಡಾಫೆಯೇ ರಾಜ್‌ ಅಪಹರಣಕ್ಕೆ ಕಾರಣ ಎಂದಿರುವ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಹೇಳಿಕೆಯನ್ನು ಪಟೇಲ್‌ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದ ಭೈರೇಗೌಡ ಮತ್ತು ಗೃಹ ಸಚಿವರಾಗಿದ್ದ ಪಿ.ಜಿ.ಆರ್‌. ಸಿಂಧ್ಯಾ ಕಟುವಾಗಿ ಟೀಕಿಸಿದ್ದಾರೆ.

ಪಟೇಲ್‌ ಬಗ್ಗೆ ಕರುಣಾನಿಧಿ ಅವರ ಹೇಳಿಕೆಯ ಬಗ್ಗೆ ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಪ್ರಸ್ತಾಪವಾದಾಗ, ಸಂಯುಕ್ತ ಜನತಾದಳದ ಸದಸ್ಯರು ಕಿಡಿ ಕಾರಿದರು. ಕರುಣಾನಿಧಿ ಅವರು ಸುಳ್ಳು ಹೇಳಿದ್ದಾರೆ, ಪಟೇಲರು ಮಾತಿಗೆ ತಪ್ಪಿಲ್ಲ ಎಂದು ಸ್ಪಷ್ಟ ಪಡಿಸಿದ ಸಿಂಧ್ಯಾ- ಗೌಡ ಅವರು, ರಾಜ್‌ ಅವರನ್ನು ಕಾಡುಗಳ್ಳನಿಂದ ಬಿಡಿಸುವುದು ತಮಿಳುನಾಡು ಸರ್ಕಾರದ ಹೊಣೆ ಎಂದು ಹೇಳಿದರು. ರಾಜ್‌ ಅಪಹರಣಕ್ಕೆ ಪಟೇಲರ ಉಡಾಫೆಯೇ ಕಾರಣ ಎಂದು ಸೋಮವಾರ ತಮಿಳುನಾಡು ವಿಧಾನಸಭೆಯಲ್ಲಿ ಕರುಣಾನಿಧಿ ಹೇಳಿದ್ದರು.

ರಾಜ್‌ರ ಸುರಕ್ಷಿತ ಬಿಡುಗಡೆಗೆ ಯತ್ನಿಸುತ್ತಿರುವ ಕರುಣಾನಿಧಿ ಏಕಾಏಕಿ ವರಸೆ ಬದಲಿಸಿರುವ ಬಗ್ಗೆ ಸಿಂಧ್ಯಾ ಆಶ್ಚರ್ಯ ವ್ಯಕ್ತ ಪಡಿಸಿದರು. ತಮಿಳುನಾಡಿನಲ್ಲಿ ಜಯಲಲಿತಾ ಅವರ ಸರ್ಕಾರ ಆಡಳಿತದಲ್ಲಿದ್ದ ಕಾಲದಲ್ಲಿ ಜಂಟಿ ಕಾರ್ಯಾಚರಣೆ ಯಶಸ್ವಿಯಾಗಿ ನಡೆಯುತ್ತಿತ್ತು ಎಂದು ಹೇಳಿದ ಸಿಂಧ್ಯಾ, ಕರುಣಾನಿಧಿ ಅವರ ಕಾಲದಲ್ಲಿ ಕಾರ್ಯಾಚರಣೆಗೆ ಹೆಚ್ಚು ಪ್ರೋತ್ಸಾಹ ಸಿಗಲಿಲ್ಲ ಎಂದು ಪರೋಕ್ಷವಾಗಿ ಹೇಳಿದರು.

1997ರ ಆಗಸ್ಟ್‌ನಲ್ಲಿ ಕರುಣಾನಿಧಿ ಮತ್ತು ಪಟೇಲ್‌ ನಡುವೆ ನಡೆದ ಒಪ್ಪಂದದಲ್ಲಿ , ವೀರಪ್ಪನ್‌ ಶರಣಾದರೆ ತಮಿಳುನಾಡಿನ ವಿಶೇಷ ಕ್ಯಾಂಪ್‌ನಲ್ಲಿ ಆತನನ್ನು ಇರಿಸಲು ತೀರ್ಮಾನಿಸಲಾಗಿತ್ತು ಎನ್ನುವ ವಿಷಯವನ್ನು ಅವರು ಬಹಿರಂಗಪಡಿಸಿದರು. ರಾಜ್ಯದಲ್ಲಿ ಕರುಣಾನಿಧಿ ಎದುರಿಸುತ್ತಿರುವ ಒತ್ತಡಗಳು ನಮಗೆ ಅರ್ಥವಾಗುತ್ತಿವೆ. ಆದರೆ,ರಾಜ್‌ ಸುರಕ್ಷಿತ ಬಿಡುಗಡೆ ಎಲ್ಲಕ್ಕಿಂತ ಮುಖ್ಯ ಎಂದು ಹೇಳಿದ ಸಿಂಧ್ಯಾ, ತಮಿಳರೊಂದಿಗೆ ಸಾಮರಸ್ಯ ಕಾದುಕೊಂಡಿರುವ ಕನ್ನಡಿಗರ ಮನೋಭಾವವನ್ನು ಶ್ಲಾಘಿಸಿದರು.

ಪಟೇಲ್‌ ವಿರುದ್ಧದ ಕರುಣಾನಿಧಿ ಆಪಾದನೆ ಬಗ್ಗೆ ಮಾತನಾಡಿದ ಮತ್ತೊಬ್ಬ ಮಾಜಿ ಸಚಿವ ಬಿ. ಸೋಮಶೇಖರ್‌ ಅವರು, ತಮ್ಮ ಚರ್ಮವನ್ನು ಉಳಿಸಿಕೊಳ್ಳಲು ಕರುಣಾನಿಧಿ ಪಟೇಲರ ಮೇಲೆ ಗೂಬೆ ಹೊರಿಸಿದ್ದಾರೆ ಎಂದರು. ರಾಜ್ಯ ವಿಧಾನಸಭೆಯಲ್ಲಿ ಅಪಹರಣ ಪ್ರಕರಣದ ಬಗ್ಗೆ ಚರ್ಚೆ ನಡೆಸಲು ಹೆಚ್ಚಿನ ಕಾಲಾವಕಾಶ ನೀಡದ ಸಭಾಧ್ಯಕ್ಷರ ಕ್ರಮವನ್ನು ಅವರು ಟೀಕಿಸಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ರಾಜ್‌ ಅಪಹರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X