ಚಂದಿರನ ಹೊತ್ತು ಸಾಗುವ ನಾವೆ ದಿಕ್ಕು ತಪ್ಪಿದರೆ !
ಜಗತ್ತಿನಲ್ಲಿ ಹುಟ್ಟುವ ಪ್ರತಿ ಮಗುವೂ, ಮನುಷ್ಯನ ಬಗ್ಗೆ ದೇವರು ಇನ್ನೂ ಇರಿಸಿಕೊಂಡಿರುವ ವಿಶ್ವಾಸಕ್ಕೆ ಸಾಕ್ಷಿ
- ರವೀಂದ್ರನಾಥ್ ಠಾಗೂರ್
ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕ್ಕೆ ಎನ್ನುತ್ತಾಳೆ ಜಾನಪದ ಹೆಣ್ಣು. ಇಂದು ಆ ಹೆಣ್ಣೂ ಇಲ್ಲ , ಬೀಸಣಿಗೆ ಇರುವ ಮನೆಗಳೂ ಕಡಿಮೆಯಾಗಿವೆ. ಆದರೆ, ಆ ತಾಯ ಮಾತುಗಳು ಕಿಂಚಿತ್ತೂ ಅರ್ಥ ಕಳಕೊಂಡಿಲ್ಲ . ಹೆತ್ತವರ ಪಾಲಿಗೆ- ಕುಟುಂಬದ ಪಾಲಿಗೆ ಸಂತೋಷ ತುಂಬುವ ಬುಗ್ಗೆಯಾಗಿ, ಸಂಬಂಧಗಳನ್ನು ಬೆಸೆವ ಕೊಂಡಿಯಾಗಿ ಮಗುವಿನ ಪಾತ್ರ ಮುಂದುವರಿಯುತ್ತಲೇ ಬಂದಿದೆ.
ಸರ್ವವ್ಯಾಪಿಯಾಗಿದ್ದರೂ ಮಗುವಿನ ಮನಸ್ಸನ್ನು ಮುಟ್ಟುವಲ್ಲಿ ಮಲಿನತೆ ವಿಫಲವಾಗಿರುವುದರಿಂದಲೇ, ಇಂದಿಗೂ ಮಗುವೆಂದರೆ ಶಾಂತಿದೂತ ಅನ್ನುವ ಪರಿಕಲ್ಪನೆ ಕ್ಲೀಷೆಯಾಗದೆ ಉಳಿದಿದೆ. ಆದರೆ, ಇದೇ ಮಗು ಬೆಳೆಯುತ್ತಾ ಬೆಳೆಯುತ್ತಾ ತನ್ನ ಸಾತ್ವಿಕ ಗುಣಗಳನ್ನು ಕಳೆದುಕೊಂಡು, ಸಂಪೂರ್ಣ ರೂಪಾಂತರದ ಒಗಟಾಗುತ್ತದೆ, ಬೆರಗಾಗುತ್ತದೆ. ಆಗೆಲ್ಲಾ , ಮಗುವನ್ನು ಉತ್ತಮವಾಗಿ ರೂಪಿಸುವ ಹೊಣೆಗಾರಿಕೆಯಲ್ಲಿ ಹೆತ್ತವರು ವಿಫಲವಾಗುತ್ತಿದ್ದಾರಾ? ನಮ್ಮ ಸಮಾಜ ಮಗುವೊಂದು ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಬೇಕಾದ ಪೂರಕಾಂಶಗಳನ್ನು ಒದಗಿಸುವ ಸ್ಥಿತಿಯಲ್ಲಿ ಇಲ್ಲವಾ? ಮುಂತಾದ ಅನುಮಾನಗಳು ಬಲವಾಗುತ್ತವೆ.
ಇತ್ತೀಚೆಗೆ ತಾನೇ ಕಣ್ಣಿನಲ್ಲಿ ಕಲ್ಲು ಉದುರುತ್ತಿರುವ ಬಾಲಕಿಯಾಬ್ಬಳ ಕುತೂಹಲಕಾರಿ ಪ್ರಕರಣ ವರದಿಯಾಗಿತ್ತು . ಅಮ್ಮನ ಅಗಲಿಕೆಯ ಮಾನಸಿಕ ಆಘಾತದಿಂದಾಗಿ ಬಾಲಕಿ ತನ್ನ ಕಣ್ಣಿನಲ್ಲಿ ತಾನೇ ಕಲ್ಲು ಹಾಕಿಕೊಳ್ಳುವ ಖಿನ್ನತೆಯಿಂದ ಬಳಲುತ್ತಿರುವುದು ಆನಂತರ ತಜ್ಞರ ಪರೀಕ್ಷೆಯಿಂದ ಬೆಳಕಿಗೆ ಬಂತು. ವ್ಯವಹಾರದ ಬೆನ್ನತ್ತಿರುವ ಬದುಕುಗಳಿಗೆ ಎಳೆ ಮನಸ್ಸುಗಳು ಹೊಂದಿಕೊಳ್ಳಲಾಗದ ವಿಷಮತೆಯಿಂದಾಗಿ ಇಂಥಾ ಪ್ರಕರಣಗಳು ಹೆಚ್ಚುತ್ತಿವೆ. ಅಪ್ಪ , ಅಮ್ಮಂದಿರು ಇಷ್ಟೊಂದು ವ್ಯವಹಾರಸ್ಥರಾಗುತ್ತಿದ್ದಾರಾ?
ನಾನೊಂದು ದಡ, ಅವಳೊಂದು ದಡ, ಎರಡು ದಡಗಳ ನಡುವೆ ಚಂದಿರನ ಹೊತ್ತು ಸಾಗುವ ನಾವೆ ಅವಳು ಎಂದು ಮಗಳು ತುಂಗಭದ್ರೆಯ ಬಗ್ಗೆ ಮಲ್ಲಿಗೆಯ ಕವಿ ಕೆ.ಎಸ್. ನರಸಿಂಹ ಸ್ವಾಮಿ ತುಂಬಾ ಮಾರ್ಮಿಕವಾಗಿ ಬರೆಯುತ್ತಾರೆ. ಮಗಳಿಗೇನೋ ಎರಡು ದಡವಿದೆ. ಇಲ್ಲಿ ಬೇಸರವಾದರೆ ಅಲ್ಲಿ . ಅಲ್ಲಿ ತಪ್ಪಿದರೆ ಇಲ್ಲಿದ್ದೇ ಇದೆ ಆಸರೆಯ ತಟ. ಆದರೆ, ದಡಗಳಿಗೇ ಬೇಸರವಾದರೆ? ಕವಿಯ ಗೊಂದಲವೇ ಈ ಹೊತ್ತು ನಮ್ಮ ಅಪ್ಪ , ಅಮ್ಮಂದಿರದಾಗಿದೆ. ಬಿಸಿಲು ಕುದುರೆಯ ಬೆನ್ನು ಹತ್ತುತ್ತಾ, ಸ್ವಂತಿಕೆಯಿಂದ ದೂರಾಗುವ ಅವರು, ಕೊನೆಮುಟ್ಟುವುದು ಕವಲು ದಾರಿಯನ್ನು. ಇದೇ ದಾರಿ ಮಗುವನ್ನು ತಬ್ಬಿಬ್ಬಾಗಿಸುತ್ತದೆ.
ವಾಸ್ತವವಾಗಿ ಹೆಚ್ಚಿನ ಅಪ್ಪ, ಅಮ್ಮಂದಿರು ಗೊಂದಲದಲ್ಲಿದ್ದಾರೆ. ತಮ್ಮ ಮಗುವಿಗೆ ಏನು ಬೇಕು ಅನ್ನುವುದನ್ನು ನಿಶ್ಚಯಿಸುವಲ್ಲಿ ಅವರು ಸೋಲುತ್ತಿದ್ದಾರೆ. ಕುಡಿಯನ್ನು ಉತ್ತಮ ಪ್ರಜೆಯಾಗಿ ರೂಪಿಸುವುದಕ್ಕಿಂತ, ಉತ್ತಮ ಬಂಡವಾಳದಾರನನ್ನಾಗಿ ರೂಪಿಸುವುದರಲ್ಲೇ ಅವರಿಗೆ ಆಸಕ್ತಿ ಹೆಚ್ಚು . ತಮ್ಮ ಮಗು, ವೈದ್ಯನೋ- ಇಂಜಿನಿಯರ್ರೋ ಆದರೆ ಉತ್ತಮ ಪ್ರಜೆಯಾದಂತಾಯಿತು ಎಂದು ಭಾವಿಸುವ ಅಪ್ಪ ಅಮ್ಮಂದಿರೂ ಇದ್ದಾರೆ. ಇದರರ್ಥ ಮಕ್ಕಳ ಭವಿಷ್ಯದ ಬಗ್ಗೆ ಹೆತ್ತವರು ಯೋಚಿಸಬಾರದು ಎಂದಲ್ಲ . ಅವರ ಯೋಚನೆಗಳು ಹೆಚ್ಚೆಚ್ಚು ಜೀವನ್ಮುಖಿಯಾದರೆ ಸಮಾಜದ ಸೊಗಸು ಹೆಚ್ಚುತ್ತದೆ.
ಕೊನೆಯದಾಗಿ, ಮತ್ತೊಮ್ಮೆ ನೆನಪಾಗುತ್ತಾಳೆ ನಗುವ ಕಂದನ ತುಟಿಯು ಹವಳದ ಕುಡಿಯಾಂಗ ಎಂದು ಹಾಡಿದ ಜಾನಪದ ತಾಯಿ. ಆ ನಗು ಮಾಸದಿರಬೇಕಾದರೆ, ಮಕ್ಕಳಿಗೆ ಗೋಲಿಯಾಡಲು ಬಯಲು- ಬಿಡುವು ಬೇಕು. ಕಣ್ಣ ತುಂಬ ಹಸಿರು ತುಂಬಿಕೊಳ್ಳಲು ಅವಕಾಶ ಬೇಕು. ಮಳೆ- ಬಿಸಿಲು- ನೆರಳು ಭಾವಗಳಿಗೆ ಹಸಿಯಾಗುವ ಹೃದಯ ಬೇಕು. ಇದಕ್ಕೆಲ್ಲಾ ಪೂರಕವಾಗುವ ಸಂದರ್ಭಗಳನ್ನು ಸಮಾಜ, ಪೋಷಕರು ಸೃಷ್ಟಿಸಬೇಕು. ಆಗ, ದಂಡೆಗಳಿಗೆ ಬೆಳಕು ಮುಡಿಸುತ್ತ ಸರಾಗವಾಗಿ ಸಾಗುತ್ತದೆ ಚಂದಿರನ ಹೊತ್ತ ನಾವೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications