ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಪೇಟೆಯ 1ನೇ ಇಯತ್ತೆ ಹುಡುಗನ ಅಪಹರಣ, 15 ಲಕ್ಷ ಬೇಡಿಕೆಮೂರ್ನಾಲ್ಕು ತಿಂಗಳುಗಳಲ್ಲಿ ಬೆಂಗಳೂರಲ್ಲಿ ನಡೆದಿರುವ 4ನೇ ಅಪಹರಣ

By Staff
|
Google Oneindia Kannada News

ಬೆಂಗಳೂರು : ನಗರದ ಪಾಲಿಗೆ ಅಕ್ಟೋಬರ್‌ ತಿಂಗಳು ವೃದ್ಧರ ಕೊಲೆಗಳ ಹಾಗೂ ಅಪಹರಣಗಳ ಮಾಹೆಯಾಗಿತ್ತು. ಕೆಲ ಅಪಹರಣ ಪ್ರಕರಣಗಳಲ್ಲಿ ಒತ್ತೆಯಾಳುಗಳನ್ನು ಬಿಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರೂ, ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿಲ್ಲ. ವಿವೇಕ ನಗರದ 6 ವರ್ಷದ ಮಗು ದೀಪಕ್‌ನನ್ನು ಅಪಹರಿಸಿದ ಒತ್ತೆಯಾಳುಗಳು ಕೇಳಿದ್ದ ಹಣ ಕೊಡಲಿಲ್ಲವೆಂದು ಕೊಂದು ಬಿಸುಟ ಸುದ್ದಿ ಮನದಲ್ಲಿ ಹಸುರಾಗಿರುವಾಗಲೇ ಚಿಕ್ಕಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 1ನೇ ಇಯತ್ತೆಯ ಮತ್ತೊಬ್ಬ ಹುಡುಗನ ಅಪಹರಣವಾಗಿದೆ. ಈತನ ತಲೆಗೆ ಕಟ್ಟುತ್ತಿರುವ ಬೆಲೆ 15 ಲಕ್ಷ ರುಪಾಯಿ.

ಹುಡುಗನ ಹೆಸರು ರಾಘವೇಂದ್ರ. ಉದಯ ಶಾಲೆಯ ವಿದ್ಯಾರ್ಥಿ. ಸೋಮವಾರ ಬೆಳಗ್ಗೆಯಿಂದ ನಾಪತ್ತೆ. ಈತನ ತಂದೆ ನೇಕಾರ ಹೇಮರಾಜು ಗುರುವಾರ ಪೊಲೀಸರಿಗೆ ಈ ಕುರಿತು ದೂರು ಕೊಟ್ಟಿದ್ದಾರೆ. ಚಿಕ್ಕಪೇಟೆ ಎಸಿಪಿ ಜಿ.ಎ.ಬಾವ ಹಾಗೂ ಇನ್ಸ್‌ಪೆಕ್ಟರ್‌ ಬಿ.ಬಿ.ಅಶೋಕ್‌ ಕುಮಾರ್‌ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಅಲಸೂರಿನ ಮದ್ಯ ವ್ಯಾಪಾರಿ ಬಾಬುರಾವ್‌ ಎಂಬುವರನ್ನು ಅಪಹರಿಸಿ, ಆತನ ಕುಟುಂಬದವರಿಂದ 5 ಲಕ್ಷ ರುಪಾಯಿ ಕೇಳಲಾಗಿತ್ತು. ರಾವ್‌ ಜೊತೆಗೆ ಹಣಕಾಸಿನ ವಿಷಯದಲ್ಲಿ ಜಗಳ ಆಡಿದ್ದ ಸೈಮನ್‌ ಎಂಬ ಶಂಕಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ತಕ್ಷಣ ರಾವ್‌ ಬಿಡುಗಡೆಯಾಗಿತ್ತು. ಆದರೆ ಅಪಹರಣಕಾರರನ್ನು ಇನ್ನೂ ಬಂಧಿಸಬೇಕಿದೆ.

ಅಕ್ಟೋಬರ್‌ ಮೊದಲ ವಾರದಲ್ಲಿ ನಮಸ್ತೆ ಗಾರ್ಮೆಂಟ್ಸ್‌ನ ಅಧ್ಯಕ್ಷ ನಾರಾಯಣ್‌ ಭಟ್‌ ಅವರನ್ನೂ ಅಪಹರಿಸಲಾಗಿತ್ತು. ಈ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

ಇನ್ನಷ್ಟು ವಾರಗಳ ಹಿಂದಿನ ಉದಾಹರಣೆಯೆಂದರೆ ಹೊಟೇಲ್‌ ಉದ್ಯಮಿ ವೆಂಕಟೇಶ್‌ ಎಂಬುವರನ್ನು ಆಟೋವೊಂದರಲ್ಲಿ ಒತ್ತೆಯಾಗಿಟ್ಟುಕೊಂಡು ನಗರವನ್ನು ಸುತ್ತುತ್ತಿದ್ದ ಅಪಹರಣಕಾರರನ್ನು ಪೊಲೀಸರು ಬಂಧಿಸಿರುವುದು. ಅದಕ್ಕೂ ಹಿಂದೆ ಜಯನಗರ ನಿವಾಸಿ ಗಂಧದ ಮರದ ಕುಶಲ ಕರ್ಮಿಯಾಬ್ಬರ 5 ವರ್ಷದ ಮಗ ಸಯ್ಯಮ ಎಂಬುವನನ್ನು ಆತನ ಮನೆಯಿಂದ ಅಪಹರಿಸಿ, ಕೊಂದುಹಾಕಲಾಗಿತ್ತು.

ಆರು ತಿಂಗಳ ಹಿಂದೆ ಆಟೊಮೊಬೈಲ್‌ ಉದ್ಯಮಿ ಪುತ್ರ ವಿನೀತ್‌ ವಾಚಾನಿ ಪ್ರಕರಣದಿಂದ ಬೆಂಗಳೂರಿನಲ್ಲಿ ಮತ್ತೆ ಹೆಚ್ಚಿರುವ ಅಪಹರಣ ಪ್ರಕರಣಗಳನ್ನು ಸಂಪೂರ್ಣವಾಗಿ ಬೇಧಿಸಲು ಪೊಲೀಸರು ಇನ್ನೂ ಯಶಸ್ವಿಯಾಗಿಲ್ಲ. 1997ರಲ್ಲಿ ವ್ಯಾಪಾರಿ ಎನ್‌.ಕೆ.ಜಯ್‌ಪುರಿಯ ಎಂಬುವರ ಅಪಹರಣ ಪ್ರಕರಣವನ್ನು ಸಂಪೂರ್ಣ ಯಶಸ್ವಿಯಾಗಿ ಬೇಧಿಸಿದ್ದ ಬೆಂಗಳೂರು ಪೊಲೀಸರಿಗೆ ಪರೀಕ್ಷೆಯ ಮೇಲೆ ಪರೀಕ್ಷೆ ಬಂದೆರಗುತ್ತಿದೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X