ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್‌ ಬಿಡುಗಡೆಗೆ ಛಲ ಬಿಡದ ಸಂಧಾನಕಾರರು ಮತ್ತೊಮ್ಮೆ ಕಾಡಿಗೆ

By Staff
|
Google Oneindia Kannada News

ಬೆಂಗಳೂರು : ಟಾಡಾ ಬಂದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸುರ್ಪೀಂ ಕೋರ್ಟ್‌ ನಿರಾಕರಿಸಿದೆ. ಹೊಸ ಬೆಳವಣಿಗೆಯ ಹಿನ್ನೆಲೆಯಲ್ಲಿ ವೀರಪ್ಪನ್‌ ಮನವೊಲಿಸಿ ಡಾ. ರಾಜ್‌ಕುಮಾರ್‌ ಅವರನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬರಲು ನಕ್ಕೀರನ್‌ ಗೋಪಾಲ್‌ ಹಾಗೂ ನೆಡುಮಾರನ್‌ ನೇತೃತ್ವದ ಸಂಧಾನಕಾರರ ತಂಡ 6 ನೇ ಬಾರಿಗೆ ಕಾಡಿನತ್ತ ಹೆಜ್ಜೆ ಇಡಲು ಸಜ್ಜಾಗಿದೆ.

ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರೊಂದಿಗೆ ಮಾತನಾಡಿದ ಬಳಿಕ ಮುಂದಿನ ನಿರ್ಧಾರದ ಬಗ್ಗೆ ತೀರ್ಮಾನಿಸಲಾಗುವುದು ಎಂದಿರುವ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ, ಒಂದೆರಡು ದಿನದಲ್ಲಿ ಸರ್ವಪಕ್ಷಗಳ ಸಭೆ ಕರೆಯುವುದಾಗಿಯೂ ತಿಳಿಸಿದ್ದಾರೆ. ರಾಜ್‌ ಸುರಕ್ಷಿತ ಬಿಡುಗಡೆಗೆ ಪರ್ಯಾಯ ಕ್ರಮಗಳ ಬಗ್ಗೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

ಈ ಮಧ್ಯೆ ನೆಡುಮಾರನ್‌ ಅವರನ್ನು ಅಧಿಕೃತ ಸಂಧಾನಕಾರರೆಂದು ಪರಿಗಣಿಸಲು ಇದ್ದ ವಿವಾದಕ್ಕೂ ಈಗ ತೆರೆ ಬಿದ್ದಂತಾಗಿದೆ. ಸೋಮವಾರ ನೆಡುಮಾರನ್‌ ಅವರನ್ನು ರಾಜ್ಯದ ಅಧಿಕೃತ ಸಂಧಾನಕಾರರೆಂದು ಪರಿಗಣಿಸುವ ಬಗ್ಗೆ ಯಾವುದೇ ವಿವಾದವಿಲ್ಲ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಡಿ.ಬಿ. ಚಂದ್ರೇಗೌಡರು ಸ್ಪಷ್ಟಪಡಿಸಿದ್ದಾರೆ. ಗೋಪಾಲ್‌, ನೆಡುಮಾರನ್‌, ಪ್ರೊ. ಕಲ್ಯಾಣಿ, ಸುಕುಮಾರನ್‌ ಅವರು ಮಂಗಳವಾರ ರಾತ್ರಿಯ ನಂತರ ಯಾವುದೇ ಕ್ಷಣದಲ್ಲಿ ವೀರಪ್ಪನ್‌ ಅಡಗುತಾಣದತ್ತ ತೆರಳುವ ಸಂಭವ ಇದೆ.

ತಮಿಳುನಾಡು ವಿಧಾನ ಸಭೆಯಲ್ಲಿ ಪ್ರತಿಧ್ವನಿಸಿದ ರಾಜ್‌ : ಈ ಮಧ್ಯೆ ತಮಿಳುನಾಡು ವಿಧಾನಸಭೆಯಲ್ಲಿ ಮಂಗಳವಾರ ರಾಜ್‌ ಅಪಹರಣ ಪ್ರಕರಣ ಪ್ರತಿಧ್ವನಿಸಿತು. ಸಭಾತ್ಯಾಗವೂ ನಡೆಯಿತು. ಎಲ್‌.ಟಿ.ಟಿ.ಇ. ಬಗ್ಗೆ ಸಹಾನುಭೂತಿ ಹೊಂದಿರುವ ನೆಡುಮಾರನ್‌ ಅವರನ್ನು ಸಂಧಾನಕ್ಕೆ ಕಳುಹಿಸುವ ಬಗ್ಗೆ ವಿರೋಧವೂ ವ್ಯಕ್ತವಾಯಿತು. ನೆಡುಮಾರನ್‌ ಕಾಡಿನಲ್ಲಿ ಪ್ರತ್ಯೇಕ ತಮಿಳುನಾಡು ಬಾವುಟ ಹಾರಿಸಿದ ನೆಡುಮಾರನ್‌ ಅವರನ್ನು ಬಂಧಿಸಿ ಜೈಲಿನಲ್ಲಿಡಬೇಕು ಎಂದು ತಮಿಳು ಮಾನಿಲ ಕಾಂಗ್ರೆಸ್‌ನ ಬಾಲಕೃಷ್ಣ ಆಗ್ರಹಿಸಿದರು.

ನೆಡುಮಾರನ್‌ ಕಾಡಿನಲ್ಲಿ ಪ್ರತ್ಯೇಕ ತಮಿಳುನಾಡಿನ ಧ್ವಜ ಹಾರಿಸಿಲ್ಲ ಎಂದು ಕರುಣಾನಿಧಿ ಸ್ಪಷ್ಟೀಕರಣವನ್ನೂ ನೀಡಿದರು.

ಅಪ್ಪಾಜಿ ನಮಗೆ ಬೇಕು ಅಷ್ಟೇ : ಸುಪ್ರೀಂ ಕೋರ್ಟ್‌ ತೀರ್ಪು ಹೊರಬಿದ್ದ ನಂತರ ಪ್ರತಿಕ್ರಿಯೆ ನೀಡಿರುವ ರಾಘವೇಂದ್ರ ರಾಜ್‌ಕುಮಾರ್‌ ನಮಗೆ ಅಪ್ಪಾಜಿ ಸುರಕ್ಷಿತವಾಗಿ ವಾಪಸು ಬರುವುದೇ ಮುಖ್ಯ. ಕಮಾಂಡೋ ಕಾರ್ಯಚರಣೆ ಸೂಕ್ತವಲ್ಲ. ಕಮಾಂಡೋ ಕಾರ್ಯಾಚರಣೆಗೆ 101ದಿನ ಬೇಕಿತ್ತೇ ಎಂದು ಪ್ರಶ್ನಿಸಿದರು.

ಅಬ್ದುಲ್‌ ಕರೀಂ ಸಂತಸ : (ಮೈಸೂರು ವರದಿ) ಸರ್ವೋನ್ನತ ನ್ಯಾಯಾಲಯ ತಮ್ಮ ಅರ್ಜಿಯನ್ನು ಪುರಸ್ಕರಿಸಿ, ಟಾಡಾ ಬಂದಿಗಳನ್ನು ಬಿಡುಗಡೆ ಮಾಡಲು ನಿರಾಕರಿಸಿರುವುದಕ್ಕೆ ಅಬ್ದುಲ್‌ ಕರೀಂ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಆಸ್ತಮಾ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ಅವರು, ತಮ್ಮ ಪುತ್ರ ಹಾಗೂ ಪೊಲೀಸ್‌ ಅಧಿಕಾರಿಯಾಗಿದ್ದ ಶಖೀಲ್‌ ಅಹ್ಮದ್‌ ಅವರನ್ನು ಕೊಲೆಗೈದಿದ್ದ ವೀರಪ್ಪನ್‌ ಸಹಚರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡದಂತೆ ಮೈಸೂರು ನ್ಯಾಯಾಲಯಕ್ಕೆ ಆದೇಶ ನೀಡುವಂತೆ ಕೋರಿ ಸರ್ವೋನ್ನತ ನ್ಯಾಯಾಲಯಕ್ಕೆ ವಿಶೇಷ ತೆರವು ಅರ್ಜಿ ಸಲ್ಲಿಸಿದ್ದರು.

ವಾರ್ತಾ ಸಂಚಯ
ಮುಖಪುಟ / ರಾಜ್‌ ಅಪಹರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X