ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಲಿವೆ.. ಸಾರ್ವಜನಿಕ ಸ್ಥಳಗಳಲ್ಲಿ ಕಾಂಡೊಮ್‌ ವಿತರಣೆ ಯಂತ್ರಗಳು

By Staff
|
Google Oneindia Kannada News

ಬೀಜಿಂಗ್‌ : ಭಾರತದ ಪ್ರಮುಖ ಪಟ್ಟಣಗಳ ಸಾರ್ವತ್ರಿಕ ಸ್ಥಳಗಳಲ್ಲಿ ಕಾಂಡೊಮ್‌ ಮಾರಾಟ ಯಂತ್ರಗಳನ್ನು ಸ್ಥಾಪಿಸಲಾಗುವುದೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸಿ.ಪಿ. ಠಾಕೂರ್‌ ಭಾನುವಾರ ತಿಳಿಸಿದ್ದಾರೆ.

ದಿನೇ ದಿನೇ ಹೆಚ್ಚುತ್ತಿರುವ ಮಾರಣಾಂತಿಕ ಎಚ್‌ಐವಿ ಸೋಂಕಿನ ಪ್ರಸಾರ ತಡೆಯಲು ಕಾಂಡೊಮ್‌ ವಿತರಣ ಯಂತ್ರಗಳ ಸ್ಥಾಪನೆ ಅಗತ್ಯವಾಗಿದೆ ಎಂದು ಅವರು ಹೇಳಿದರು. ಸುರಕ್ಷಿತ ಲೈಂಗಿಕತೆ ಬಗ್ಗೆ ತಿಳಿವಳಿಕೆ ಮತ್ತು ಲೈಂಗಿಕ ಶಿಕ್ಷಣ, ಸೋಂಕನ್ನು ತಡೆಯುವ ಉತ್ತಮ ಉಪಾಯಗಳಾಗಿವೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ, ದೇಶದಲ್ಲಿ 3.7 ದಶಲಕ್ಷ ಏಡ್ಸ್‌ ಸೋಂಕಿನ ರೋಗಿಗಳಿದ್ದಾರೆ ಎಂದರು. ಬೀಜಿಂಗ್‌ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಅವರು ಮಾತನಾಡುತ್ತಿದ್ದರು.

ಪೆಟ್ರೊಲ್‌ ಬಂಕ್‌ನಂತಹ ಸಾರ್ವಜನಿಕ ಸ್ಥಳಗಳಲ್ಲಿ ಕಾಂಡೊಮ್‌ ವಿತರಣೆ ಯಂತ್ರಗಳನ್ನು ಸ್ಥಾಪಿಸುವ ಬಗೆಗೆ ಸಾರ್ವಜನಿಕರ ವಿರೋಧ ವ್ಯಕ್ತವಾಗುತ್ತದೆಂದು ತಾವು ಭಾವಿಸುವುದಿಲ್ಲ , ಜನಸಂಖ್ಯೆ ನಿಯಂತ್ರಣದಷ್ಟೇ ಏಡ್ಸ್‌ ಸೋಂಕಿನ ನಿಯಂತ್ರಣ ಮುಖ್ಯವಾಗಿದೆ ಎಂದು ಅವರು ಹೇಳಿದರು.

ಮುಂದಿನ ಮೂರು ವರ್ಷಗಳಲ್ಲಿ ಏಡ್ಸ್‌ ಸೋಂಕಿನ ಪ್ರಸರಣ ಪ್ರಬಲವಾಗುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಎಚ್‌ಐವಿ ಸೋಂಕನ್ನು ತಡೆಯಲು ಸರ್ಕಾರದೊಂದಿಗೆ ಮಾಧ್ಯಮಗಳು, ವಾಣಿಜ್ಯೋದ್ಯಮಿಗಳು ಹಾಗೂ ಸಾರ್ವಜನಿಕ ಸಂಸ್ಥೆಗಳು ಕೈಗೂಡಿಸುವ ಅಗತ್ಯವಿದೆ ಎಂದು ಠಾಕೂರ್‌ ಅಭಿಪ್ರಾಯಪಟ್ಟರು.

ಚೀನಾದಲ್ಲಿ ಜನಪ್ರಿಯತೆ ಗಳಿಸಿರುವ ಕಾಂಡೊಮ್‌ ಕಾರ್ಯಕ್ರಮ

ಸಾರ್ವಜನಿಕ ಕಾಂಡೊಮ್‌ ವಿತರಣೆ ಯಂತ್ರಗಳ ಸ್ಥಾಪನೆಯ ಯೋಜನೆ ಈಗಾಗಲೇ ಚೀನಾದಲ್ಲಿ ಯಶಸ್ವಿಯಾಗಿದೆ ಎಂದು ಮಾಧ್ಯಮದ ವರದಿಯಾಂದು ತಿಳಿಸಿದೆ. ಬೀಜಿಂಗ್‌ ಮತ್ತು ಷಾಂಗೈ ನಗರಗಳಲ್ಲಿನ ಕಾಲೇಜು ಕ್ಯಾಂಪಸ್‌, ಬಸ್‌ ನಿಲ್ದಾಣ, ಮೂತ್ರಿಗಳು ಹಾಗೂ ವಸತಿ ಸಮುಚ್ಚಯಗಳಂತಹ ಪ್ರದೇಶಗಳಲ್ಲಿ ಸ್ಥಾಪಿಸಿರುವ 100 ಕ್ಕೂ ಹೆಚ್ಚು ಕಾಂಡೊಮ್‌ ವಿತರಣೆ ಯಂತ್ರಗಳು ಜನಪ್ರಿಯತೆ ಗಳಿಸಿವೆ.

ಪ್ರತಿವರ್ಷ ಸುಮಾರು 1.2 ಶತಕೋಟಿ ಕಾಂಡೊಮ್‌ಗಳನ್ನು ಉತ್ಪಾದಿಸುವ ಚೀನಾ ಸರ್ಕಾರ, ಅವುಗಳನ್ನು ಉಚಿತವಾಗಿ ವಿತರಿಸುತ್ತಿದೆ. 1.3 ಶತಕೋಟಿ ಜನಸಂಖ್ಯೆಯನ್ನು ಹೊಂದಿರುವ ಚೀನಾ, ಕುಟುಂಬ ನಿಯಂತ್ರಣ ಕಾರ್ಯಕ್ರಮಗಳಿಗಾಗಿ 36.14 ದಶಲಕ್ಷ ಡಾಲರ್‌ಗಳನ್ನು ಖರ್ಚು ಮಾಡುತ್ತಿದೆ. ಜನತೆಗೆ ಸುಲಭವಾಗಿ ಕಾಂಡೊಮ್‌ ದೊರೆಯುವುದರಿಂದ ಏಡ್ಸ್‌ ಸೋಂಕು ತಗುಲುವ ಸಾಧ್ಯತೆಗಳು ಕಡಿಮೆಯಾಗುತ್ತವೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X