Bagalkot: ಬಾಗಲಕೋಟೆಯಲ್ಲಿ ಕಮಲದ ವಿಜಯೋತ್ಸವ ನಿಶ್ಚಿತ: ಪ್ರಹ್ಲಾದ್ ಜೋಶಿ ವಿಶ್ವಾಸ
ಬಾಗಲಕೋಟೆ: ಬಾಗಲಕೋಟೆ ಉಪ ಚುನಾವಣೆ ಪ್ರಯುಕ್ತ ಬಿಜೆಪಿ ನಾಯಕರಾದ ಮಾಜಿ ಸಿಎಂ ಬಿಎಸ್.ಯಡಿಯೂರಪ್ಪ ಆದಿಯಾಗಿ ಅನೇಕ ನಾಯಕರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಮತ್ತೊಂದೆಡೆ ಹಿಂದು ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಚಾರ ನಡೆಸುತ್ತಿದ್ದಾರೆ. ವಿವಿಧ ಸಭೆಗಳು ನಡೆದರೂ ಯತ್ನಾಳ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ನಾಯಕರು ಒಂದೇ ವೇದಿಕೆಯಲ್ಲಿ ಜೊತೆಯಾಗದಿರುವು ಕೆಲವು ಅನುಮಾನಗಳಿಗೆ ಕಾರಣವಾಗಿದೆ.
ಭಾನುವಾರ ಕ್ಷೇತ್ರದಲ್ಲಿ ಬ್ರಾಹ್ಮಣ ಸಮಾಜದ ಪ್ರಮುಖರೊಂದಿಗೆ ಮಹತ್ವದ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಪ್ರಹ್ಲಾದ್ ಜೋಶಿಯವರು, ಪ್ರಧಾನಿ ನರೇಂದ್ರ ಮೋದಿಯವರ ಶಕ್ತ ಭಾರತದ ಕನಸು ಮತ್ತು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಮಂತ್ರವು ಪ್ರತಿ ಮನೆಮನೆಗೂ ತಲುಪಿದೆ. ಮೋದಿಯವರ ಜನಪರ ಯೋಜನೆಗಳು ಬಾಗಲಕೋಟೆಯ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿವೆ ಎಂದು ಬಿಜೆಪಿ ಸಾಧನೆ ಶ್ಲಾಘಿಸಿದರು.

ಕ್ಷೇತ್ರದ ಜನತೆ ತೋರುತ್ತಿರುವ ಅಭೂತಪೂರ್ವ ಪ್ರೀತಿ ಮತ್ತು ಬೆಂಬಲವನ್ನು ನೋಡಿದರೆ, ಈ ಬಾರಿ ಬಾಗಲಕೋಟೆಯಲ್ಲಿ ಕಮಲದ ವಿಜಯೋತ್ಸವ ನಿಶ್ಚಿತ ಎಂಬುದು ದೃಢಪಟ್ಟಿದೆ. ಇಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರ ನೇತೃತ್ವದಲ್ಲಿ ಕ್ಷೇತ್ರದ ಸಮಸ್ತ ಬಂಜಾರ ಸಮಾಜ ತಾಂಡಾದ ಪ್ರಚಾರ ಸಭೆ ನಡೆದಿದೆ. ಎಲ್ಲ ಸಮಾಜದವರು ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂದು ತಿಳಿಸಿದರು.
ಬಾಗಲಕೋಟೆ ಉಪಚುನಾವಣೆ ಪ್ರಚಾರದ ವೇಳೆ ಕ್ಷೇತ್ರದ ಜನತೆ ಮತ್ತು ಬಿಜೆಪಿ ಕಾರ್ಯಕರ್ತರಿಂದ ವ್ಯಕ್ತವಾಗುತ್ತಿರುವ ಅಪಾರ ಬೆಂಬಲ ಹಾಗೂ ಉತ್ಸಾಹ ಪಕ್ಷದ ಗೆಲುವಿನ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುತ್ತಿದೆ ಎಂದು ಹೇಳಿದರು.
ದೇಶದಲ್ಲಿ ಬಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು, ಜನಪರ ಯೋಜನೆಗಳು ಮತ್ತು ಸುಶಾಸನದ ಸಂಕಲ್ಪಗಳು ರಾಜ್ಯದ ಪ್ರತಿಯೊಂದು ಮನೆಗೂ ತಲುಪುತ್ತಿವೆ. ಇದೇ ವಿಶ್ವಾಸದ ಬಲದಿಂದ ಬಾಗಲಕೋಟೆ ಕ್ಷೇತ್ರದಲ್ಲಿಯೂ ಭಾರತೀಯ ಜನತಾ ಪಕ್ಷಕ್ಕೆ ಜನತೆ ಸ್ಪಷ್ಟ ಬೆಂಬಲ ನೀಡುತ್ತಿದ್ದಾರೆ ಎಂದು ಮತದಾರರನ್ನು ಉದ್ದೇಶಿಸಿ ತಿಳಿಸಿದರು.
ಪಕ್ಷದ ಕಾರ್ಯಕರ್ತರ ಸಮರ್ಪಣೆ, ಸಂಘಟನೆಯ ಶಕ್ತಿ ಮತ್ತು ಜನರ ಆಶೀರ್ವಾದದಿಂದ ಬಾಗಲಕೋಟೆಯಲ್ಲಿ ಭಾರೀ ಮತಗಳ ಅಂತರದಿಂದ ಬಿಜೆಪಿ ಜಯ ಸಾಧಿಸುವುದು ನಿಶ್ಚಿತ - ಕಮಲ ಅರಳುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂದಿನ ಸಭೆಯಲ್ಲಿ ಸಂಸದ ಈರಣ್ಣ ಕಡಾಡಿ, ಮಾಜಿ ಸಚಿವ ಪ್ರಭು ಚವ್ಹಾಣ, ಎಂಎಲ್‌ಸಿ ಹನಮಂತ ನಿರಾಣಿ, ಪಿ ಹೆಚ್ ಪೂಜಾರ, ಶಾಸಕ ಚಂದ್ರು ಲಮಾಣಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾಜಿ ಶಾಸಕ ಪಿ. ರಾಜೀವ್, ರಾಜು ನಾಯಕ್, ಅಶೋಕ ಕಾಟವೆ ಇನ್ನಿತರ ನಾಯಕರು ಪಾಲ್ಗೊಂಡು ಸಭೆಯಲ್ಲಿ ಬಿಜೆಪಿ ಸಾಧನೆ, ವಿವರಿಸಿದರು. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರಿಗೆ ಮತ ನೀಡುವಂತೆ ಒಕ್ಕೋರಲಿನಿಂದ ಕೋರಿದರು.












Click it and Unblock the Notifications