ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶ್ವತ್‌ಗೆ ಹಣ ಸಂದಾಯ ಮಾಡಲು ಅಕ್ಕಾ ವ್ಯವಸ್ಥೆ ?

By Staff
|
Google Oneindia Kannada News

ಬೆಂಗಳೂರು : ಖ್ಯಾತ ಗಾಯಕ ಸಿ. ಅಶ್ವತ್‌ ಅವರಿಗೆ ಅಮೆರಿಕಾ ಕನ್ನಡ ಸಂಘಗಳ ಒಕ್ಕೂಟ ಅಕ್ಕಾ ನೀಡಿದ್ದ 4500 ಡಾಲರ್‌ಗಳ ಚೆಕ್‌ ಬೌನ್ಸ್‌ ಆದ ಪ್ರಕರಣ ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಯಲು ಕಾರಣವಾಗಿ, ತನ್ಮೂಲಕ ಹಲವು ಗೊಂದಲಗಳಿಗೂ ಕಾರಣವಾಗಿದೆ. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಕ್ಕಾ ಸಂಸ್ಥೆಯ ನಿರ್ದೇಶಕರಲ್ಲೊಬ್ಬರು ಎಂದು ಹೇಳಿಕೊಂಡ ಪ್ರಭುದೇವ್‌ ಅವರು, ಸಿ. ಅಶ್ವತ್‌ ತಮಗೆ ಚೆಕ್‌ ವಾಪಸ್‌ ಮಾಡಿದರೆ, ಹಣ ಸಂದಾಯ ಮಾಡುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಅಶ್ವತ್‌ ಅವರು ಚೆಕ್‌ ನೀಡಲು ನಿರಾಕರಿಸಿದಲ್ಲಿ ಆರ್‌.ಬಿ.ಐ. ಮಾರ್ಗಸೂಚಿಯ ರೀತ್ಯ ಅವರಿಗೆ ಹಣ ನೀಡಲಾಗುವುದೂ ಎಂದು ತಿಳಿಸಿದ್ದಾರೆ. ತಾವು ಕೋಲಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಪ್ರಕರಣ ನಡೆದಿದ್ದು, ಈ ಪ್ರಕರಣಕ್ಕೆ ಮುಕ್ತಾಯ ಹಾಡಲಾಗುವುದು ಎಂದು ಅವರು ಹೇಳಿದರು.

ಅಶ್ವತ್‌ ಅವರು ಹೂಸ್ಟನ್‌ನಲ್ಲಿ ಜರುಗಿದ ಸಹಸ್ರಮಾನದ ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ಮನುಜಮತ - ವಿಶ್ವಪಥ ಯೋಜನೆಯಲ್ಲಿ 120ಕ್ಕೂ ಹೆಚ್ಚು ಮಂದಿ ಗಾಯಕರಿಗೆ 3 ತಿಂಗಳಕಾಲ ಯಶಸ್ವಿಯಾಗಿ ತರಬೇತಿ ನೀಡಿದರು ಎಂದೂ ಅವರು ಹೇಳಿದರು. ಇದೇ ಯೋಜನೆಯ ಸಂಬಂಧ ಅಶ್ವತ್‌ ಅವರಿಗೆ 4500 ಡಾಲರ್‌ ಹಣ ನೀಡುವ ಒಡಂಬಡಿಕೆ ಆಗಿತ್ತೂ ಎಂದು ಅವರು ಒಪ್ಪಿಕೊಂಡರು.

ಈಗಾಗಲೇ ಅಕ್ಕಾ ಬಳಗದಿಂದ ಬಂದಿರುವ ಕೆಲವು ಇ ಮೇಲ್‌ ಸ್ಪಷ್ಟೀಕರಣಗಳಿಗೆ ಸಂಬಂಧಿಸಿದಂತೆ ಅಕ್ಕಾ ಸಂಸ್ಥೆಯ ಟ್ರಸ್ಟಿಗಳಲ್ಲಿ ಒಬ್ಬರು ತಾವೆಂದು ಹೇಳಿಕೊಂಡ ಪ್ರಭುದೇವ್‌ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ - ಆ ಪ್ರತಿಕ್ರಿಯೆಗಳು ಇ ಮೇಲ್‌ ಕಳುಹಿಸಿರುವವರ ವೈಯಕ್ತಿಕ ಅಭಿಪ್ರಾಯಗಳು ಎಂದು ಬಣ್ಣಿಸುವ ಮೂಲಕ ಮತ್ತಷ್ಟು ಗೊಂದಲವನ್ನು ಹುಟ್ಟಿಹಾಕಿದರು. ಪ್ರಭುದೇವ್‌ರ ಗೊಂದಲದ ಮಾತುಗಳಿಂದ ಬೇಸತ್ತ ಕೆಲವು ಪತ್ರಕರ್ತರು ಪತ್ರಿಕಾಗೋಷ್ಠಿಯಿಂದ ಹೊರ ನಡೆದ ಪ್ರಸಂಗವೂ ನಡೆಯಿತು.

ಕೆಲವು ಪತ್ರಕರ್ತರಿಗೆ ಪ್ರಭುದೇವ್‌ ಮಾತನಾಡುತ್ತಿದ್ದ ಶೈಲಿಯನ್ನು ನೋಡಿದಾಗ - ನಿಜಕ್ಕೂ ಇವರು ಅಕ್ಕಾ ಬಳಗದ ಪ್ರತಿನಿಧಿಯೇ ಎಂಬ ಸಂಶಯವೂ ಮೂಡಿತು. ಆದರೂ, ಪ್ರಭುದೇವ್‌ ಸಿ. ಅಶ್ವತ್‌ ಅವರಿಗೆ ನ್ಯಾಯ ದೊರಕಿಸಿಕೊಡುವ ಮಾತನಾಡಿದ್ದಾರೆ. ಏನಕೇನ ಪ್ರಕಾರೇಣ, ಈ ವಿವಾದ ಅಂತ್ಯಗೊಳ್ಳಲಿ. ಹೊರನಾಡಿನಲ್ಲಿ ಕನ್ನಡದ ಕೆಲಸ ಮಾಡುತ್ತಿರುವ ಕನ್ನಡದ ಸಂಘಟನೆಗಾಗಲೀ ಅಥವಾ ಕನ್ನಡದ ಹೆಸರಾಂತ ಕಲಾವಿದರಿಗಾಗಲೀ ಅವಮಾನವಾಗುವಂತಹ ಯಾವುದೇ ಪ್ರಸಂಗಗಳು ನಡೆಯದಿರಲಿ ಎಂದು ಆಶಿಸೋಣ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X