ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಣಜಿ : ತಿಲಕ್‌ ನಾಯ್ಡು ಶತಕ, ಸುಭದ್ರ ಸ್ಥಿತಿಯಲ್ಲಿ ಕರ್ನಾಟಕ

By Staff
|
Google Oneindia Kannada News

ಬೆಂಗಳೂರು : ಕರ್ನಾಟಕದ ಯುವ ಆಟಗಾರ ತಿಲಕ್‌ ನಾಯ್ಡು (122) ಅವರ ಶತಕ ಹಾಗೂ ಸುನಿಲ್‌ ಜೋಷಿ (92) ಅವರೊಂದಿಗೆ ಆರನೇ ವಿಕೆಟ್‌ ಜತೆಯಾಟದಲ್ಲಿ ಸೇರಿಸಿದ ದಾಖಲೆಯ 170ರನ್‌ಗಳ ನೆರವಿನಿಂದ ಕರ್ನಾಟಕ ತಂಡ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ರಣಜಿ ಟ್ರೋಫಿ ಲೀಗ್‌ ಪಂದ್ಯದ ಎರಡನೇ ದಿನವಾದ ಗುರುವಾರ ಹೈದರಾಬಾದ್‌ ವಿರುದ್ಧ 9 ವಿಕೆಟ್‌ ನಷ್ಟಕ್ಕೆ 545ರನ್‌ಗಳನ್ನು ಕಲೆಹಾಕಿ ಡಿಕ್ಲೇರ್‌ ಮಾಡಿಕೊಂಡಿತು.

ಕರ್ನಾಟಕದ ಈ ಬೃಹತ್‌ ಮೊತ್ತಕ್ಕೆ ಉತ್ತರವಾಗಿ ಹೈದರಾಬಾದ್‌ ತಂಡ ದಿನದಾಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 48ರನ್‌ ಗಳಿಸಿತ್ತು. ದಿನದ ಕೊನೆಯಲ್ಲಿ ಡೇನಿಯಲ್‌ ಮನೋಹರ್‌ (30) ಹಾಗೂ 16ರನ್‌ ಗಳಿಸಿರುವ ನಂದಕಿಶೋರ್‌ ಆಡುತ್ತಿದ್ದರು.

ಇದಕ್ಕೂ ಮುನ್ನ ಬುಧವಾರ ನಾಲ್ಕು ವಿಕೆಟ್‌ ನಷ್ಟಕ್ಕೆ 279ರನ್‌ ಗಳಿಸಿದ್ದ ಕರ್ನಾಟಕ ಇಂದು ಉತ್ತಮವಾಗೇ ತನ್ನ ಬ್ಯಾಟಿಂಗ್‌ ಆರಂಭಿಸಿತಾದರೂ 50 ರನ್‌ ಗಳಿಸಿದ ಭಾರದ್ವಾಜ್‌ ಬೇಗನೆ ಔಟಾದರು. ಎನ್‌.ಪಿ. ಸಿಂಗ್‌ ಬೌಲಿಂಗ್‌ನಲ್ಲಿ ನಂದಕಿಶೋರ್‌ ಹಿಡಿದ ಅದ್ಭುತ ಕ್ಯಾಚ್‌ಗೆ ಇವರು ಬಲಿಯಾದರು. ಆ ಹಂತದಲ್ಲಿ ತಿಲಕ್‌ ನಾಯ್ಡು ಅವರನ್ನು ಜತೆಗೂಡಿದ ಸುನಿಲ್‌ ಜೋಷಿ ಕರ್ನಾಟಕ ಬೃಹತ್‌ ಮೊತ್ತ ಪೇರಿಸಲು ನೆರವಾದರು. ಈ ಇಬ್ಬರ ಜೋಡಿ 6ನೇ ವಿಕೆಟ್‌ಗೆ ಇದ್ದ 148 ರನ್‌ಗಳ ದಾಖಲೆಯನ್ನು ಅಳಿಸಿಹಾಕಿತು. (1984ರಲ್ಲಿ ಬ್ರಿಜೇಶ್‌ ಪಟೇಲ್‌ ಹಾಗೂ ಜೆ. ಅಭಿರಾಮ್‌ ಹೈದರಾಬಾದ್‌ ವಿರುದ್ಧ ವೇ 148 ರನ್‌ಗಳ ಜತೆಯಾಟದ ಈ ದಾಖಲೆ ಮಾಡಿದ್ದರು)

ತಿಲಕ್‌ ನಾಯ್ಡು ಅವರು ತಮ್ಮ ಜೀವಿತದ ಮೂರನೇ ಶತಕವನ್ನು ಇಂದು ಸಂಪಾದಿಸಿದ್ದೇ ಅಲ್ಲದೆ ರಣಜಿ ಪಂದ್ಯದಲ್ಲಿ 1000 ರನ್‌ ಮಾಡಿದ ಖ್ಯಾತಿಗೂ ಪಾತ್ರರಾದರು. 98-99ರಲ್ಲಿ ಕ್ರಿಕೆಟ್‌ ರಂಗಕ್ಕೆ ಪದಾರ್ಪಣ ಮಾಡಿದ ತಿಲಕ್‌ ಜೋಷಿ ಅವರೊಂದಿಗೆ 170ರನ್‌ ಜತೆಯಾಟದ ದಾಖಲೆಯನ್ನೂ ಸೇರಿಸಿಕೊಂಡರು. ಈ ಇಬ್ಬರು 254 ನಿಮಿಷಗಳಲ್ಲಿ 179 ಚೆಂಡುಗಳನ್ನೆದುರಿಸಿ 170ರನ್‌ ಕಲೆ ಹಾಕಿದರು.

ನಾಯ್ಡು ಅವರು ತಂಡದ ಸ್ಕೋರು 470 ಅಗಿದ್ದಾಗ ವೆಂಕಟಪತಿ ರಾಜು ಅವರ ಬೌಲಿಂಗ್‌ನಲ್ಲಿ ವಿನಯ್‌ಕುಮಾರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಆನಂತರ ಬಿಡುಬೀಸಾಗಿ ಆಡಿದ ಜೋಷಿ ಶತಕಗಳಿಸುವ ಕುರುಹು ತೋರಿದರಾದರೂ ಡೇನಿಯಲ್‌ ಮನೋಹರ್‌ ಬೌಲಿಂಗ್‌ನಲ್ಲಿ ಸ್ವೀಪ್‌ ಮಾಡುವ ಯತ್ನದಲ್ಲಿ ವೆಂಕಟಪತಿ ರಾಜು ಅವರಿಗೆ ಕ್ಯಾಚಿತ್ತು ಶತಕ ವಂಚಿತರಾದರು. ಆಗ ತಂಡದ ಸ್ಕೋರು 524. ಭುಜದ ನೋವಿನಿಂದ 6 ತಿಂಗಳ ಕಾಲ ಅಜ್ಞಾತವಾಸದಲ್ಲಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ ಜಾವಗಲ್‌ ಶ್ರೀನಾಥ್‌ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟಿಂಗ್‌ ಆರಂಭಿಸಿ ಎರಡು ಸಿಕ್ಸರ್‌ಗಳ 23 ರನ್‌ ಗಳಿಸಿದರು.

13 ರನ್‌ ಗಳಿಸಿದ ಆನಂದ್‌ ಯಾವಳಗಿ ಔಟಾದ ನಂತರ ನಾಯಕ ವೆಂಕಟೇಶ್‌ ಪ್ರಸಾದ್‌ ತಂಡದ ಸ್ಕೋರು 545 ಆಗಿದ್ದಾಗ ಡಿಕ್ಲೇರ್‌ ಮಾಡಿಕೊಂಡರು. ಪ್ರವಾಸಿ ತಂಡದ ಪರ ವೆಂಟಕಪತಿ ರಾಜೂ ಹಾಗೂ ಕನ್ವಲ್‌ಜಿತ್‌ ಸಿಂಗ್‌ ಅನುಕ್ರಮವಾಗಿ 4 ಹಾಗೂ 2 ವಿಕೆಟ್‌ ಗಳಿಸಿ ಯಶಸ್ವೀ ಬೌಲರ್‌ ಎನಿಸಿದರು. ಈಗ ಕರ್ನಾಟಕ ಬೌಲರ್‌ಗಳು ಹೈದರಾಬಾದ್‌ ಬ್ಯಾಟ್ಸ್‌ಮನ್‌ಗಳನ್ನು ಹೇಗೆ ನಿಯಂತ್ರಿಸುತ್ತಾರೆ ಎಂಬ ಕುತೂಹಲ ಮೂಡಿದೆ.

ಸಂಕ್ಷಿಪ್ತ ಸ್ಕೋರು : ಕರ್ನಾಟಕ 160.3 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 545 ಡಿಕ್ಲೇರ್‌. ಜೆ. ಅರುಣ್‌ಕುಮಾರ್‌ (28), ಮಿಥುನ್‌ ಬಿರಾಲಾ (73), ಬ್ಯಾರಿಂಗ್ಟನ್‌ (70), ಸುಜಿತ್‌ ಸೋಮಸುಂದರ್‌ (43), ವಿಜಯ್‌ ಭಾರದ್ವಾಜ್‌ ನಾಟೌಟ್‌ (50), ತಿಲಕ್‌ ನಾಯ್ಡು (122), ಸುನಿಲ್‌ ಜೋಷಿ (92), ಜಾವಗಲ್‌ ಶ್ರೀನಾಥ್‌ (23), ಆನಂದ್‌ ಯಾವಳಗಿ (13), ಡಿ. ಗಣೇಶ್‌ ನಾಟೌಟ್‌(4). ಬೌಲಿಂಗ್‌ ವಿವರ - ಎನ್‌.ಪಿ. ಸಿಂಗ್‌ 78ಕ್ಕೆ 1, ಫಿರೋಜ್‌ ಅಹ್ಮದ್‌ 79ಕ್ಕೆ 0, ಪ್ರತಾಪ್‌ 56ಕ್ಕೆ 1, ವೆಂಕಟಪತಿ ರಾಜು 118ಕ್ಕೆ 4, ಕನ್ವಲ್‌ಜಿತ್‌ಸಿಂಗ್‌ 120ಕ್ಕೆ2, ಡೇನಿಯಲ್‌ ಮನೋಹರ್‌ 50ಕ್ಕೆ 1, ವಿ.ವಿ.ಎಸ್‌. ಲಕ್ಷ್ಮಣ್‌ 23ಕ್ಕೆ0.

ವಿಕೆಟ್‌ ಪತನ : 1-55, 2-161, 3-194, 4-246, 5-300, 6-470, 7-524, 8-534, 9-545.

ಹೈದರಾಬಾದ್‌ ಮೊದಲ ಇನ್ನಿಂಗ್ಸ್‌ ವಿಕೆಟ್‌ ನಷ್ಟವಿಲ್ಲದೆ 48 : ಡೇನಿಯಲ್‌ ಮನೋಹರ್‌ ನಾಟೌಟ್‌ 30, ನಂದ ಕಿಶೋರ್‌ ನಾಟೌಟ್‌ 16.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X