ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರೆತೆಯಾದರೆ ಅಯ್ಯೋ ಮರೆತಂತೆ ನನ್ನ ..

By Staff
|
Google Oneindia Kannada News

ಸಾಂಪ್ರದಾಯಿಕ ನಾಡಹಬ್ಬ ದಸರೆಯ ಬೆನ್ನಲ್ಲೇ ಬರುವ ಕನ್ನಡಿಗರ ಹೆಮ್ಮೆಯ ಉತ್ಸವ ಕನ್ನಡ ರಾಜ್ಯೋತ್ಸವ. ರಾಜ್ಯೋತ್ಸವವನ್ನು ಉತ್ಸವಗಳ ಉತ್ಸವ ಎಂದೂ ಕರೆಯುವುದುಂಟು. ಏಕೀಕರಣಾನಂತರ, ಮೈಸೂರು ಸಂಸ್ಥಾನ ಕರ್ನಾಟಕ ಎಂದು ಹೆಸರಾದ ಈ ದಿನವನ್ನು ನಾಡಿನ ಜನತೆ ಅತ್ಯಂತ ಆನಂದದಿಂದ ಆಚರಿಸುತ್ತಾರೆ.

ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎಂದು ರಾಷ್ಟ್ರಕವಿ ಕುವೆಂಪು ಅವರ ಕವಿವಾಣಿಯಿಂದ ಪ್ರೇರೇಪಿತರಾದ ಹೊರನಾಡ ಕನ್ನಡಿಗರು ಕೂಡ ತಾವು ಎಲ್ಲೇ ಇದ್ದರು, ರಾಜ್ಯೋತ್ಸವವನ್ನು ಆಚರಿಸೇ ಆಚರಿಸುತ್ತಾರೆ. ಕನ್ನಡದ ಕಂಪನ್ನು ಕಡಲಾಚೆಯ ನಾಡಿನಲ್ಲೂ ಪಸರಿಸುತ್ತಿದ್ದಾರೆ. ತನ್ಮೂಲಕ ಕನ್ನಡ ನಾಡು ನುಡಿ ಪರಂಪರೆಗೆ ತಮ್ಮ ಅಳಿಲು ಸೇವೆಯನ್ನೂ ಸಲ್ಲಿಸುತ್ತಿದ್ದಾರೆ.

ಕನ್ನಡ ನಾಡು, ನುಡಿ, ಪರಂಪರೆಗೆ 2000 ವರ್ಷಗಳ ಇತಿಹಾಸವಿದೆ. ಬಹು ಭಾಷೀಯರ ಹಿಂದಿಗಿಂತಲೂ ಮಿಗಿಲಾಗಿ 7 ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿರುವ ಏಕೈಕ ಪ್ರಾದೇಶಿಕ ಭಾಷೆ ಕನ್ನಡ. ಸರಳ, ಸುಂದರ, ಸಾಹಿತ್ಯಿಕ ಕನ್ನಡ ಭಾಷೆಯ ಹಿರಿಮೆ ವರ್ಣಿಸಲಸದಳ. ಕನ್ನಡ ನೆಲವನ್ನು, ಕನ್ನಡ ತನವನ್ನು, ಕನ್ನಡ ಭಾಷೆಯ ಸೊಗಡನ್ನು ವರ್ಣಿಸದ ಕವಿವರೇಣ್ಯರೇ ವಿರಳ.

ಕನ್ನಡದ ಆದಿ ಕವಿ ಪಂಪ ಅಂದೇ ತನ್ನ ಕನ್ನಡ ತನ ಮೆರೆದು ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ.... ಎಂದು ಸಾರಿದರೆ, ಬಾರಿಸು ಕನ್ನಡ ಡಿಂಡಿಮವ... ಎಂದು ಕುವೆಂಪು ಹಾಡಿದರು. ಕನ್ನಡಕ್ಕೆ ಕಿರುಬೆರಳೆತ್ತಿದರೂ ಸಾಕು ಅದು ಕಲ್ಪವೃಕ್ಷವಾಗುತ್ತದೆ ಎಂದರು ಕನ್ನಡದ ಕಣ್ವ ಬಿ.ಎಂ.ಶ್ರೀ. ಹೆಂಡ ಹೆಂಡ್ತಿ ಕನ್ನಡ ಪದಗೋಳ್‌ ಅಂದ್ರೆ ರತ್ನಂಗೆ ಪ್ರಾಣ ಎಂದ ರತ್ನನ ಪದಗಳ ಖ್ಯಾತಿಯ ಜಿ.ಪಿ. ರಾಜರತ್ನಂ ಅವರಂತೂ ನರಕಕ್‌ ಇಳ್ಸಿ ನಾಲ್ಗೆ ಸೀಳ್ಸಿ ಬಾಯಿ ಹೊಲಿಸಾಕಿದ್ರೂನು ಮೂಗ್ನಲ್ಲಿ ಕನ್ನಡ ಪದವಾಡ್ತೀನಿ ನನ್‌ ಮನಸ್‌ ನೀಕಾಣೆ ಎಂದರು.

ಕಾವೇರಿಯಿಂದಮಾ ಗೋದಾವರಿ ವರಮಿರ್ದ ನಾಡಾಗಿದ್ದ ವಿಶಾಲ ಕರ್ನಾಟಕದ ಉದಯದ ಕನಸು ಕಂಡಿದ್ದ ಹುಯಿಲಗೋಳ ನಾರಾಯಣ ರಾಯರು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಗೀತೆಯ ಮೂಲಕ ಕನ್ನಡ ಜನರಲ್ಲಿ ಕನ್ನಡ ಪ್ರೇಮ ಹುಟ್ಟುಹಾಕಿದರು. ಕನ್ನಡದ ಕೋಗಿಲೆ ಪಿ. ಕಾಳಿಂಗ ರಾಯರು, ಕರ್ನಾಟಕ ಎಂದು ಮರು ನಾಮಕರಣ ಆದ ನಂತರ, ಉದಯ ವಾಯಿತು ನಮ್ಮ ಚೆಲುವ ಕನ್ನಡ ನಾಡು ಎಂದು ಹಾಡಿ ತಮ್ಮ ಕನ್ನಡ ಪ್ರೇಮ ಮೆರೆದರು.

ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ನಾವೂ , ನೀವೂ ಕನ್ನಡಿಗರಾಗೋಣ, ನಮ್ಮ ತಾಯ್ನುಡಿನ ಉಳಿವಿಗೆ ಹೋರಾಡೋಣ. ಕನ್ನಡಕ್ಕಾಗಿ ಹೋರಾಡಿದ, ಕನ್ನಡ ನಾಡ ದೇವಿ ಭುವನೇಶ್ವರಿಯ ಪೂಜೆ ಮಾಡಿದ ಮಹಾನ್‌ ವ್ಯಕ್ತಿಗಳ ನೆನೆಯೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X