ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದಿತ ಆನೆಗೊಂದಿ ಸೇತುವೆ ಬಗ್ಗೆ ಯುನೆಸ್ಕೋಮನವೋಲಿಸಲು ಯತ್ನ

By Staff
|
Google Oneindia Kannada News

ಬೆಂಗಳೂರು : ಕಾಮಗಾರಿ ನಡೆಯುತ್ತಿರುವ ಬಹು ಉದ್ದೇಶಿತ ಆನೆಗೊಂದಿ ಸೇತುವೆ ಒಡೆಯುವ ಬಗ್ಗೆ ಸರಕಾರ ಇನ್ನೂ ನಿರ್ಧರಿಲ್ಲ ಎಂದು ಲೋಕೋಪಯೋಗಿ ಸಚಿವ ಧರ್ಮಸಿಂಗ್‌ ನಿಧಾನಸಭೆಯಲ್ಲಿ ಸೋಮವಾರ ಹೇಳಿದ್ದಾರೆ.

ಆನೆಗೊಂದಿ ಮತ್ತು ವಿಶ್ವವಿಖ್ಯಾತ ಹಂಪಿ ಕ್ಷೇತ್ರಗಳನ್ನು ಸೇರಿಸುವ ವಿವಾದಾತ್ಮಕ ಆನೆಗೊಂದಿ ಸೇತುವೆ ನಿರ್ಮಿಸಿದರೆ, ಹಂಪಿಯನ್ನು ವಿಶ್ವಪ್ರವಾಸಿ ಸ್ಥಳಗಳ ಪಟ್ಟಿಯಿಂದ ಕೈಬಿಡುವುದಾಗಿ ಯುನೆಸ್ಕೋ ಎಚ್ಚರಿಸಿತ್ತು. ಈ ಹಿನ್ನೆಲೆಯಲ್ಲಿ ಸೇತುವೆ ಕೆಲಸವನ್ನು ಪೂರ್ಣಗೊಳಿಸಬೇಕೆ ಬೇಡವೆ ಎಂಬ ಬಗ್ಗೆಯೂ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಧರ್ಮಸಿಂಗ್‌ ವಿವರಿಸಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ್‌ ಶಟ್ಟರ್‌ ಸರಕಾರದಿಂದ ಉತ್ತರ ಬಯಸಿದರು. ಉದ್ದೇಶಿತ 4.12 ಕೋಟಿ ರುಪಾಯಿ ವೆಚ್ಚದ ಸೇತುವೆಗೆ ಈಗಾಗಲೇ 3.75 ಕೋಟಿ ರುಪಾಯಿಗಳನ್ನು ಖರ್ಚು ಮಾಡಲಾಗಿದ್ದು, ಈ ಸಂಬಂಧ ಯುನೆಸ್ಕೋ ಪ್ರತಿನಿಧಿಗಳೊಂದಿಗೆ ಸರಕಾರ ಚರ್ಚಿಸಲು ಸಿದ್ಧವಿದೆ. ಹಂಪಿಯ ಪರಂಪರೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೇತುವೆಯನ್ನು ನಿರ್ಮಿಸಲಾಗುವುದಲ್ಲದೆ ಎಲ್ಲ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದ್ದಾರೆ.

ಹೈವೇಗೆ 8 ಸಾವಿರ ಎಕರೆ ಸ್ವಾದೀನ : ಬೆಂಗಳೂರು - ಮೈಸೂರು ನಡುವಿನ ಉದ್ದೇಶಿತ 2 ಸಾವಿರ ಕೋಟಿ ರುಪಾಯಿ ವೆಚ್ಚದ ಹೆದ್ದಾರಿ ಯೋಜನೆಗೆ 8 ಸಾವಿರ ಎಕರೆ ಭೂಮಿಯನ್ನು ಸ್ವಾದೀನಪಡಿಸಿಕೊಳ್ಳಲಾಗುವುದೆಂದು ಧರ್ಮಸಿಂಗ್‌ ತಿಳಿಸಿದ್ದಾರೆ. ಈ ಉದ್ದೇಶಕ್ಕಾಗಿ 450 ಕೋಟಿ ರುಪಾಯಿ ಖರ್ಚು ಮಾಡಲಾಗುತ್ತಿದ್ದು, 11 ಸಾವಿರದ 581 ಜನ ಭೂಮಿ ಕಳೆದುಕೊಳ್ಳಲಿದ್ದಾರೆ. ಹೆದ್ದಾರಿ ಸಂತ್ರಸ್ಥರಿಗೆ ಸರಕಾರ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಲಿದೆ. ಪುನರ್ವಸತಿಗಾಗಿ ಬಿಡದಿ, ರಾಮನಗರ ಮತ್ತು ಶ್ರೀರಂಗಪಟ್ಟಣಗಳ ಬಳಿ ಐದು ವಸತಿ ಸಂಕೀರ್ಣಗಳನ್ನು ನಿರ್ಮಿಸಲಾಗುವುದೆಂದು ಸಚಿವರು ತಿಳಿಸಿದ್ದಾರೆ.

ಪ್ರಾಚ್ಯವಸ್ತು ಸಂಗ್ರಹಾಲಯ ಸ್ಥಳಾಂತರ : ಮೈಸೂರಿನಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯದ ಕೇಂದ್ರೀಯ ನಿರ್ದೇಶನಾಯಲಯ ಮತ್ತು ವಸ್ತು ಸಂಗ್ರಹಾಲಯವನ್ನು ಹಂಪಿಗೆ ಸ್ಥಳಾಂತರಿಸುವುದನ್ನು ವಿರೋಧಿಸಿ ಬಿಜೆಪಿಯ ಶಂಕರಲಿಂಗೇಗೌಡ ಧರಣಿ ನಡೆಸಿದರು. ಸ್ಥಳಾಂತರದಿಂದ ನಿರ್ದೇಶನಾಲಯದಲ್ಲಿ ಕೆಲಸ ಮಾಡುತ್ತಿರುವ 200 ಮಂದಿ ಉದ್ಯೋಗಿಗಳಿಗೆ ತೊಂದರೆಯಾಗುವುದರಿಂದ ಸರಕಾರ ಸ್ಥಳಾಂತರ ನಿರ್ಧಾರವನ್ನು ಕೈಬಿಡಬೇಕೆಂದು ಒತ್ತಾಯಿಸಿದರು.

ಈ ಮಂಚೆ ಪ್ರಶ್ನೆಯಾಂದಕ್ಕೆ ಉತ್ತರಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್‌, ವಸ್ತು ಸಂಗ್ರಹಾಲಯದ ಸುರಕ್ಷತೆ ದೃಷ್ಟಿಯಿಂದ ಸ್ಥಳಾಂತರಕ್ಕೆ ಸರಕಾರ ಆದೇಶ ನೀಡಿದೆ ಎಂದು ತಿಳಿಸಿದರು.

ಉದ್ಯೋಗಿಗಳ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವೆ ಸ್ಪಷ್ಟಪಡಿಸದ ನಂತರ ಪ್ರತಿಪಕ್ಷದ ನಾಯಕ ಜಗದೀಶ್‌ ಶಟ್ಟರ್‌ ಅವರ ಮನವಿ ಮೇರೆಗೆ ಶಂಕರಲಿಂಗೇಗೌಡ ಧರಣಿ ಹಿಂತೆಗೆದುಕೊಂಡರು.

ಮೂರು ಯೋಜನೆಗಳಿಗೆ ಒಪ್ಪಿಗೆ : ಜೂನ್‌ನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ನಂತರ 254 ಯೋಜನೆಗಳ ಪೈಕಿ ಮೂರು ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದು ಕೈಗಾರಿಕೆ ಸಚಿವ ಆರ್‌. ವಿ. ದೇಶಪಾಂಡೆ ವಿಧಾನಪರಿಷತ್‌ನಲ್ಲಿ ತಿಳಿಸಿದ್ದಾರೆ.

ಬಿಜೆಪಿಯ ರಾಮಚಂದ್ರಗೌಡ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವರು ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 27 ಸಾವಿರ ಕೋಟಿ ರುಪಾಯಿ ಬಂಡವಾಳ ಹೂಡಿಕೆಯ 254 ಯೋಜನೆಗಳಿಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಜಾಗತಿಕ ಟೆಂಡರ್‌ : ಮೈಸೂರು, ಗುಲ್ಬರ್ಗಾ, ಬಳ್ಳಾರಿ, ಬಿಜಾಪುರ ಮತ್ತು ಹಾಸನಗಳಲ್ಲಿ ಸಣ್ಣ ವಿಮಾನ ನಿಲ್ದಾಣ ನಿರ್ಮಿಸಲು ಜಾಗತಿಕ ಮಟ್ಟದ ಟೆಂಡರ್‌ ಕರೆಯಲಾಗಿದೆ. ಈ ಸಂಬಂಧ ಕೇಂದ್ರದ ನಾಗರಿಕ ವಿಮಾನಯಾನ ಸಮಿತಿ ನಿಲ್ದಾಣ ನಿರ್ಮಾಣ ಸಾಧ್ಯತೆಗಳ ಬಗ್ಗೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ ಎಂದು ದೇಶಪಾಂಡೆ ತಿಳಿಸಿದ್ದಾರೆ.

ಸಣ್ಣ ಉದ್ದಿಮೆ ನಿಗಮ ಮುಚ್ಚುವುದಿಲ್ಲ : ರಾಜ್ಯದ ಸಣ್ಣ ಉದ್ದಿಮೆ ಮಾರುಕಟ್ಟೆ ನಿಗಮವನ್ನು ಮುಚ್ಚುವುದಿಲ್ಲ ಎಂದು ಸಣ್ಣ ಉದ್ದಿಮೆ ಸಚಿವ ಎಸ್‌. ಆರ್‌. ಕಾಶಪ್ಪನವರ್‌ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಪುರಸಭೆ ಕಾಯ್ದೆಗೆ ತಿದ್ದುಪಡಿ : ಪುರಸಭೆ ಕಾಯ್ದೆಗೆ ತಿದ್ದುಪಡಿ ಸೂಕ್ತ ತಂದು ಎಲ್ಲಾ ಪುರಸಭೆಗಳಿಗೆ ಏಕ ಕಾಲದಲ್ಲಿ ಚುನಾವಣೆ ನಡೆಸುವ ಸಲಹೆಯನ್ನು ಪರಿಶೀಲಿಸುವುದಾಗಿ ಪುರಸಭೆ ಆಡಳಿತಗಳ ರಾಜ್ಯ ಸಚಿವ ಬಿ. ಬಿ. ಚಿಮ್ಮನಕಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X