ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸ್ತ್ರೀಶಕ್ತಿ ’- ಗ್ರಾಮೀಣ ಮಾನಿನಿಯರ ಉದ್ಧಾರಕ್ಕೆ ಸಹಾಯಹಸ್ತ

By Staff
|
Google Oneindia Kannada News

ರಾಯಚೂರು : ಗ್ರಾಮೀಣ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ರೂಪಿಸಲು ಉದ್ದೇಶಿಸಿರುವ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ‘ಸ್ತೀಶಕ್ತಿ ’ ಯೋಜನೆಗೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾಗಾಂಧಿ ಬುಧವಾರ ಹಸಿರು ನಿಶಾನೆ ತೋರಿಸಿದ್ದಾರೆ.

ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸಮಾಜದಲ್ಲಿನ ಸ್ಥಾನಮಾನದ ಬಗ್ಗೆ ಅರಿವು ಮೂಡಿಸುವ ಮೂಲಕ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಸದೃಢರನ್ನಾಗಿ ರೂಪಿಸಲು ಉದ್ದೇಶಿಸಲಾಗಿದೆ. ರಾಜ್ಯದ ಮಹಿಳೆಯರ ಸರ್ವತೋಮುಖ ಅಬಿವೃದ್ಧಿಗೆ ರೂಪಿಸಲಾಗಿರುವ ಯೋಜನೆ ನಾಲ್ಕು ತಿಂಗಳ ಹಿಂದೆಯೇ ಜಾರಿಗೆ ಬರಬೇಕಿತ್ತು. ಅದಕ್ಕಾಗಿ ವಿಚಾರಸಂಕಿಣ, ಕಾರ್ಯಾಗಾರಗಳನ್ನು ನಡೆಸಿದ್ದ ಸರಕಾರ ಬೇರೆ ಬೇರೆ ತೊಂದರೆಗಳಿಂದ ಅನಿವಾರ್ಯವಾಗಿ ಮುಂದೂಡತ್ತಲೇ ಬಂದಿತ್ತು.

ಗ್ರಾಮೀಣ ಪ್ರದೇಶದ ಮಹಿಳೆಯರ ಅಭ್ಯುದಯವನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ಅನೇಕ ಯೋಜನೆಗಳು ಈಗಾಗಲೇ ಜಾರಿಯಲ್ಲಿದ್ದರೂ ನಿರೀಕ್ಷಿತ ಫಲಶ್ರುತಿ ದೊರೆಯದ ಹಿನ್ನಲೆಯಲ್ಲಿ ಈ ಯೋಜನೆಯಿಂದ ಹೆಚ್ಚಿನ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ. ವಿವಿಧ ಯೋಜನೆಗಳ ಮೂಲಕ ಧನಸಹಾಯ ನಿಡುವುದನ್ನೇ ಮುಖ್ಯ ಉದ್ದೇಶವನ್ನಾಗಿಟ್ಟುಕೊಂಡಿದ್ದ ಅನೇಕ ಯೋಜನೆಗಳ ಲೋಪದೋಷಗಳನ್ನು ಕಂಡುಕೊಂಡಿರುವ ಸರಕಾರ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಈಗಾಗಲೇ ಹಲವಾರು ಪ್ರಾಯೋಗಿಕ ಕಾರ್ಯಕ್ರಮಗಳನ್ನೂ ನಡೆಸಿದೆ.

ರೂಪುರೇಷೆ : ಯೋಜನೆ ಅಡಿಯಲ್ಲಿ ಗ್ರಾಮೀಣ ಮಹಿಳೆಯರನ್ನು ಸಣ್ಣ ಗುಂಪುಗಳಲ್ಲಿ ಸಂಘಟಿಸಿ ಅವರಲ್ಲಿ ಉಳಿತಾಯ ಮನೋಭಾವ ಮತ್ತು ಸಂಪನ್ಮೂಲ ಅಭಿವೃದ್ಧಿಪಡಿಸುವುದು, ಸಾಲ ನಿರ್ವಹಣೆ ಜಾಗೃತಿ ಮೂಲಕ ಆತ್ಮವಿಶ್ವಾಸ ಮೂಡಿಸುವುದು ಮುಂತಾದವುಗಳು ಸೇರಿವೆ. ಆರ್ಥಿಕ ಪ್ರಗತಿ ಜೊತೆ ಸಾಮಾಜಿಕ ಬದಲಾವಣೆಗೆ ಸೂಕ್ತ ವಾತಾವರಣ ರೂಪಿಸುವುದು, ಸ್ವಾವಲಂಬನೆ ಕುದುರಿಸಿ ಸಂಪನ್ಮೂಲಗಳ ಮೇಲೆ ಹತೋಟಿ ಸಾಧಿಸುವುದು, ಆದಾಯೋತ್ವನ್ನ ಚಟುವಟಿಕೆಗಳಲ್ಲಿ ತೊಡಗಿಸಿ ಬಡತನ ನಿವಾರಣೆ ಮಾಡುವುದು, ವಿವಿಧ ಇಲಾಖೆಗಳನ್ನು ಒಮ್ಮುಖಗೊಳಿಸಿ ಅಭಿವೃದ್ಧಿ ಕಾರ್ಯಕ್ರಮಗಳ ಫಲ ದೊರೆಯುವಂತೆ ಅವಕಾಶ ಕಲ್ಪಿಸಿಕೊಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ನಗರದ ಮಹಿಳೆಯರಿಗೆ ಇದೇ ರೀತಿಯ ‘ಸ್ವರ್ಣಜಯಂತಿ ಪಟ್ಟಣ ರೋಜ್‌ಗಾರ್‌’ ಯೋಜನೆ ಜಾರಿಯಲ್ಲಿರುವುದರಿಂದ ‘ಸ್ತ್ರೀಶಕ್ತಿ ಯೋಜನೆಯನ್ನು ಕೇವಲ ಗ್ರಾಮೀಣ ಮಹಿಳೆಯರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 20 ಸದಸ್ಯರಿರುವ ಒಂದು ಲಕ್ಷ ಸ್ವಸಹಾಯ ಗುಂಪುಗಳನ್ನು ರಚಿಸುವ ಮೂಲಕ 20 ಲಕ್ಷ ಮಹಿಳೆಯರನ್ನು ಸಂಘಟಿಸಲು ಉದ್ದೇಶಿಸಲಾಗಿದೆ.

ಪ್ರಸಕ್ತ ಸಾಲಿನಲ್ಲೇ ಅನುಷ್ಠಾನ : 2000-2001ನೇ ಸಾಲಿನಲ್ಲಿಯೇ ಅನುಷ್ಠಾನಗೊಳ್ಳಲಿರುವ ಈ ಯೋಜನೆಗೆ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅವರು ಒಂದೇ ಬಾರಿಗೆ 72 ಕೋಟಿ ರುಪಾಯಿಗಳನ್ನು ಅನುದಾನ ರೂಪದಲ್ಲಿ ತೊಡಗಿಸಲು ನಿರ್ಧರಿಸಿದ್ದಾರೆ. ರಾಜ್ಯಾದ್ಯಂತ ಇರುವ 175 ತಾಲ್ಲೂಕಿನ ಗ್ರಾಮೀಣ ಪ್ರದೇಶದ ಎಲ್ಲ ಮಹಿಳೆಯರು ಯೋಜನೆ ವ್ಯಾಪ್ತಿಯಲ್ಲಿ ಬರಲಿದ್ದಾರೆ.

ಸಂಘಟನೆಗೆ ಅಂಗನವಾಡಿ ಕಾರ್ಯಕರ್ತೆಯರು : ಯೋಜನೆ ಉದ್ದೇಶ ಕೈಗೂಡಲು ಅಂಗನವಾಡಿ ಕಾರ್ಯಕರ್ತೆಯರನ್ನು ತೊಡಗಿಸಿಕೊಂಡು ಮಹಿಳೆಯರ ಸ್ವಸಹಾಯ ಗುಂಪುಗಳನ್ನು ರಚಿಸಲಾಗುವುದು. ಮೊದಲ ಹಂತದಲ್ಲಿ ಇಂತಹ 50 ಸಾವಿರ ಮಹಿಳೆಯರ ಗುಂಪುಗಳನ್ನು ರಚಿಸಿ ಯೋಜನೆಯ ಕಾರ್ಯಾರಂಭ ಮಾಡಲಾಗುತ್ತಿದೆ. ಸ್ವಸಹಾಯ ಗುಂಪುಗಳು ಉಳಿತಾಯ, ಸಾಲ ನೀಡುವುದು, ಸಾಮಾನ್ಯ ನಿಧಿ ರೂಡಿಸುವುದು, ತಮ್ಮ ಗ್ರಾಮದ ಸಮಸ್ಯೆಗಳಿಗೆ ಸ್ಪಂಧಿಸಿ ಕಾರ್ಯನಿರ್ವಹಿಸುವ ಜವಾಬ್ಧಾರಿ ಹೊತ್ತಿವೆ. ಅಂಗನವಾಡಿ ಕಾರ್ಯಕರ್ತೆಯರು ಮೊದಲ 6 ತಿಂಗಳು ಮಾತ್ರ ಚಟುವಟಿಕೆಗಳಿಗೆ ಸಹಕಾರ ನೀಡುವರು.

ಧನ ಸಹಾಯ ಸೌಲಭ್ಯ : ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿದ್ದು, ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿ, ತಾಲ್ಲೂಕು ಮಟ್ಟದಲ್ಲಿ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ಅಧ್ಯಕ್ಷರಾಗಿ ಯೋಜನೆ ಅನುಷ್ಠಾನಕ್ಕೆ ನೆರವಾಗಲಿದ್ದಾರೆ. ಗುಂಪುಗಳ ರಚನೆ ಹಂತದಲ್ಲಿ ಆಯಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬ್ಯಾಂಕ್‌ಗೆ ಸಂಬಂಧ ಕಲ್ಪಿಸಲು ಉದ್ದೇಶಿಸಲಾಗಿದೆ.

ಶಿಕ್ಷಣ, ಕೃಷಿ, ಆರೋಗ್ಯ, ತೋಟಗಾರಿಕೆ, ರೇಷ್ಮೆ, ಕೈಗಾರಿಕೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಇತರೆ ಇಲಾಖೆಗಳನ್ನು ಗುಂಪುಗಳ ಜೊತೆ ನೇರವಾಗಿ ಸಮನ್ವಯಗೊಳಿಸಿ ಮಹಿಳೆಯರ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಯೋಜನೆ ಪರಿಣಾಮಕಾರಿಯಾಗಿ ಜಾರಿಯಾದರೆ ವಾರ್ಷಿಕ 72 ಕೋಟಿ ಉಳಿತಾಯವಾಗಲಿದೆ. ಇಂಥ ಎಲ್ಲ ಕ್ರಮಗಳಿಂದ ಗ್ರಾಮೀಣ ಮಹಿಳೆಯರ ಅಭ್ಯುದಯ ಸಾಧ್ಯ ಎಂಬುದು ಸರಕಾರದ ನಿರೀಕ್ಷೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X