ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮೂರ ದೇವರ ಕಾಡಿಗೆ ಕೊಡಲಿಯಿಕ್ಕಿದವರಾರು?

By Staff
|
Google Oneindia Kannada News

ಬೆಂಗಳೂರು : ಜನರು ತಮ್ಮ ನೆಚ್ಚಿನ ದೇವರು ಮತ್ತು ದೇವತೆಗಳನ್ನು ಪೂಜಿಸುತ್ತಿದ್ದ ‘ದೇವರ ಕಾಡು’ಗಳಲ್ಲಿ ಇನ್ನು ಮುಂದೆ ಕಾಡು ಇರುವುದಿಲ್ಲ , ಕೇವಲ ದೇವರು ಮಾತ್ರ ಇರುತ್ತಾರೆ ! ಮಲೆನಾಡಿನ ದಟ್ಟಕಾಡುಗಳ ಮೇಲೆ ಮನುಷ್ಯನ ಕಾಕ ದೃಷ್ಠಿ ಬಿದ್ದು ಬಹಳೇ ವರ್ಷಗಳಾಗಿರುವುದಕ್ಕೆ ಕಾಡಿನ ವ್ಯಾಪ್ತಿ ವ್ಯಾಪಕವಾಗಿ ಕಡಿಮೆಯಾಗುತ್ತಿರುವುದೇ ಸಾಕ್ಷಿಯಾಗಿದೆ.

ಮನೆಯಲ್ಲಿನ ಹಣ ಮುಗಿಸಿ ದೇವರ ಮುಡಿಪಿ(ಹುಂಡಿ)ಗೆ ಕೈಯಿಟ್ಟಂತೆ, ಮನುಷ್ಯ ದೇವರ ಕಾಡುಗಳಿಗೂ ಕೊಡಲಿಯನ್ನು ಬೀಸತೊಡಗಿದ್ದಾನೆ. ಕೊಡವ ಸಂಸ್ಕೃತಿಯ ಅವಿಭಾಜ್ಯ ಅಂಗಗಳಂತಿರುವ ದೇವಕಾಡು ಅಥವ ದೇವರ ಕಾಡುಗಳು ಸ್ವತಃ ದೇವರ ಕಣ್ಣೆದುರಿನಲ್ಲೇ ಇಲ್ಲವಾಗುತ್ತಿವೆ.

ಪ್ರತಿಜ್ಞೆ : ಕಾವೇರಿ ಹುಟ್ಟುವ ತಲಕಾವೇರಿ ತಾಣದಲ್ಲಿ ಇತ್ತೀಚೆಗೆ ನಡೆದ ದೇವಕಾಡು ಹಬ್ಬದ ಸಂದರ್ಭದಲ್ಲಿ ಅನೇಕ ಕೊಡವರು ಭವಿಷ್ಯತ್ತಿನಲ್ಲಿ ದೇವಕಾಡುಗಳನ್ನು ರಕ್ಷಿಸುವ ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಇದಕ್ಕೆ ಕೇವಲ ಭಕ್ತಿಯ ತಾಣ ಎಂಬ ಧಾರ್ಮಿಕ ಶರದ್ಧೆ ಮಾತ್ರ ಕಾರಣವಲ್ಲ. ದೇವಕಾಡುಗಳು ಕೊಡವರ ಇತಿಹಾಸ, ಸಂಸ್ಕೃತಿ, ಸಾಮಾಜಿಕ ಪರಂಪರೆಯ ಸಂಕೇತಗಳಷ್ಟೇ ಅಲ್ಲದೆ ಆರ್ಥಿಕ ಬೆನ್ನೆಲುಬುಗಳೂ ಹೌದು. ಕೊಡಗಿನಲ್ಲಿ ಕೇವಲ 80 ವರ್ಷಗಳ ಇತಿಹಾಸದಲ್ಲಿ 9 ಸಾವಿರ ಎಕರೆ ದೇವರ ಕಾಡುಗಳನ್ನು ನಾಶ ಮಾಡಲಾಗಿದೆ. ದೇವಕಾಡು ಉತ್ಸವವನ್ನು ಸಂಘಟಿಸಿದ್ದ ಪೊನ್ನಂಪೇಟೆಯ ಫಾರೆಸ್ಟ್ರಿ ಕಾಲೇಜಿನ ಡಾ. ಸಿ. ಬಿ. ಕುಶಾಲಪ್ಪ ಅವರ ಪ್ರಕಾರ ಇತ್ತೀಚಿನ ದಿನಗಳಲ್ಲಿ ಸೌದೆ, ಮತ್ತು ಇತರ ಕಾರಣಗಳಿಗಾಗಿ ಕಾಡಿನ ಮೇಲೆ ಆಕ್ರಮಣ ಹೆಚ್ಚಾಗಿದೆ.

ಬೆದರಿಕೆ : ಭಾರತದಲ್ಲೇ ಹೆಚ್ಚಾಗಿ ಕಾಫಿ ಬೆಳೆಯುವ ಜಿಲ್ಲೆಯೆಂಬ ಹೆಗ್ಗಳಿಕೆ ಪಡೆದಿರುವ ಕೊಡಗು, ಈ ಹಿಂದೆ ಸುಮಾರು 15 ಸಾವಿರದ 506 ಎಕರೆ ಪ್ರದೇಶದಲ್ಲಿ ದೇವಕಾಡುಗಳನ್ನು ಹೊಂದಿತ್ತು ಇವತ್ತು ಅರ್ಥ ಕಾಡಿನ ವ್ಯಾಪ್ತಿ 6 ಸಾವಿರದ 299. 61 ಎಕರೆಗಿಳಿದಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಮತ್ತು ಜನರಲ್‌ ತಿಮ್ಮಯ್ಯ ಅವರಂತ ಯೋಧರನ್ನು ನೀಡಿದ ಕೊಡಗಿನ ದೇವರಕಾಡುಗಳಿಗೆ ಬೆದರಿಕೆ ಬಂದಿರುವುದು ಅಲ್ಲಿ ನಡೆಯುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳಿಂದ ಎಂಬುದು ಪ್ರಮುಖ ಅಂಶ.

4102 ಚದುರ ಕಿಲೋಮೀಟರ್‌ ವ್ಯಾಪ್ತಿಯ ಕೊಡಗಿನಲ್ಲಿ 2,550 ಹೆಕ್ಟೇರು ವ್ಯಾಪ್ತಿಯಲ್ಲಿ 1214 ದೇವರ ಕಾಡುಗಳಿವೆ. ಪ್ರತಿ ಹಳ್ಳಿ ಕೂಡಾ ಕನಿಷ್ಠ ಒಂದೊಂದು ದೇವರ ಕಾಡನ್ನು ಹೊಂದಿದೆ. ಕೆಲವು ಹಳ್ಳಿಗಳಲ್ಲಿ ಒಂದಕ್ಕಿಂತ ಹೆಚ್ಚು ಕಾಡುಗಳೂ ಇವೆ. ಪ್ರತಿ ಜಾತಿಗೂ ಸ್ವಂತ ದೇವರ ಕಾಡುಗಳಿವೆ. ಇವುಗಳ ಉಸ್ತುವಾರಿಯನ್ನು ಹಳ್ಳಿಗಳ ದೇವಸ್ಥಾನದ ಸಮಿತಿಗಳು ನೋಡಿಕೊಳ್ಳುತ್ತಿವೆ.

10 ಸಾವಿರ ಎಕರೆ ಕಾಡು ನಾಶ : ಮದ್ರಾಸ್‌ ವಿಶ್ವವಿದ್ಯಾಲಯದ ಪ್ರೊ. ಎಂ. ಎ. ಕಲಮ್‌ ಅವರು ಒದಗಿಸುವ ಅಂಕಿಅಂಶದ ಪ್ರಕಾರ ಕೊಡಗು ಈಗಾಗಲೇ 100 ವರ್ಷಗಳಲ್ಲಿ 10 ಸಾವಿರ ಎಕರೆ ಪ್ರದೇಶದ ದೇವರಕಾಡುಗಳನ್ನು ಕಳೆದುಕೊಂಡಿದೆ. ಕಲಾಮ್‌ ಕೈಗೊಂಡಿದ್ದ ಅಧ್ಯಯನದ ಪ್ರಕಾರ 1905ರಿಂದ 1985ನೇ ಇಸವಿ ನಡುವೆ ಹೆಚ್ಚು ಕಾಡುಗಳನ್ನು ಕಡಿಯಲಾಗಿದೆ. 1992ರ ಹೊತ್ತಿಗೆ ಜಿಲ್ಲೆಯಾದ್ಯಂತ ಇದ್ದ ಕಾಡುಗಳ ವ್ಯಾಪ್ತಿ ಕೇವಲ 5950 ಎಕರೆ ಮಾತ್ರ. 1214 ದೇವರಕಾಡುಗಳ ಪೈಕಿ ಶೇಕಡಾ 45ರಷ್ಟು ಕಾಡುಗಳು ಒಂದು ಎಕರೆಗಿಂತ ಕಡಿಮೆ ಇವೆ. ಉಳಿದವುಗಳಲ್ಲಿ ಶೇಕಡಾ 80ರಷ್ಟು ತೋಪುಗಳು 5 ಎಕರೆ ಜಾಗದಲ್ಲಿ ಹರಡಿಕೊಂಡಿವೆ. ಕೆಲವು ತೋಪುಗಳು 0.1 ಎಕರೆ ವ್ಯಾಪ್ತಿಯಲ್ಲೂ, ಇನ್ನೂ ಕೆಲವು 350 ಎಕರೆ ಜಾಗವನ್ನೂ ಆಕ್ರಮಿಸಿಕೊಂಡಿವೆ.

ಇದೀಗ ದೇವರ ಕಾಡುಗಳನ್ನು ರಕ್ಷಿಸಬೇಕೆಂಬ ಬಗ್ಗೆ ದನಿ ಎತ್ತಿರುವ ಕೆಲವರು ದೇವರಕಾಡುಗಳ ಪುನಾ ಸರ್ವೇಕ್ಷಣೆ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇದರಿಂದ ದೇವರ ಕಾಡುಗಳನ್ನು ರಕ್ಷಿಸಲು ಸೂಕ್ತ ನೀತಿ ರೂಪಿಸಬಹುದೆಂಬ ನಿರೀಕ್ಷೆ ಅವರದು. ನಮ್ಮ ಸಂಸ್ಕೃತಿಯ ಸಂಕೇತಗಳಾಗಿರುವ ದೇವರಕಾಡುಗಳು ಮುಂದಿನ ಪೀಳಿಗೆಗೆ ಇರಲಿ ಎಂದು ಹಾರೈಸೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X