ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಧವಾರದಿಂದ ಭಾರತದಲ್ಲಿ ಸೈಬರ್‌ ಕಾಯಿದೆ ಅನುಷ್ಠಾನ

By Staff
|
Google Oneindia Kannada News

ನವದೆಹಲಿ : ಭಾರತದಲ್ಲಿ ಸೈಬರ್‌ ಕಾಯಿದೆ ಬುಧವಾರದಿಂದ ಜಾರಿಗೆ ಬಂದಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆ 2000ದ ಅಡಿಯಲ್ಲಿ ರೂಪಿಸಲಾಗಿರುವ ಈ ಹೊಸ ಕಾಯಿದೆಗೆ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಪ್ರಮೋದ್‌ ಮಹಾಜನ್‌ ಮಂಗಳವಾರ ಅಂಕಿತ ಹಾಕಿದ್ದಾರೆ. ಈ ಕಾಯಿದೆಯನ್ನು ಕಳೆದ ಮೇ ತಿಂಗಳಿನಲ್ಲೇ ಸಂಸತ್ತು ಸ್ಥಿರೀಕರಿಸಿತ್ತು.

ಇದರಿಂದಾಗಿ ಕೊನೆಗೂ ಬುಧವಾರದಿಂದ ಇ ವಾಣಿಜ್ಯ ಹಾಗೂ ಇ ಆಡಳಿತಕ್ಕೆ ಅಂತಿಮ ರೂಪ ದೊರಕಿದೆ. ಆದಾಗ್ಯೂ ಈ ಕಾಯಿದೆಯ ಕ್ರಿಯಾತ್ಮಕ ಜಾರಿಗೆ ಕನಿಷ್ಠ ಒಂದು ತಿಂಗಳು ಬೇಕಾಗುತ್ತದೆ ಎಂದು ಮಹಾಜನ್‌ ಹೇಳಿದ್ದಾರೆ. ಎಕನಾಮಿಕ್‌ ಸಂಪಾದಕರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಇನ್ನೆರಡು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಯಿದೆ ಜಾರಿಗೆ ಬರುತ್ತದೆ ಎಂದರು.

ವಿಶ್ವದಲ್ಲಿ ಕೇವಲ 12 ರಾಷ್ಟ್ರಗಳು ಮಾತ್ರ ಸೈಬರ್‌ಕಾಯಿದೆ ಇದ್ದು, ಭಾರತವು ಈ ಡಿಜಿಟಲ್‌ ಡಜನ್‌ ವರ್ಗಕ್ಕೆ ಸೇರ್ಪಡೆಯಾಗಿದೆ ಎಂದರು. ಈ ಕಾಯಿದೆಯು ಡಿಜಿಟಲ್‌ ಸಹಿಯಾಂದಿಗೆ ನಡೆಸುವ ವ್ಯವಹಾರಗಳಿಗೆ ಕಾನೂನು ಮಾನ್ಯತೆಯನ್ನು ನೀಡಲಿದೆ. ಇದನ್ನು ಪ್ರಮಾಣೀಕೃತ ಪ್ರಾಧಿಕಾರಗಳು ಪರಿಶೀಲಿಸಲಿವೆ ಎಂದರು.

ಕೈಲಾಶ್‌ನಾಥ್‌ ಗುಪ್ತಾ ಅವರನ್ನು ಕೇಂದ್ರೀಯ ಮಾನ್ಯತಾ ಪ್ರಾಧಿಕಾರದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಪ್ರಸ್ತುತ ಸಿ ಡಾಟ್‌ ಟೆಲಿಮಾಟಿಕ್ಸ್‌ ಅಭಿವೃದ್ಧಿ ಕೇಂದ್ರದ ಕಾರ್ಯನಿರ್ವಾಹಕರಾಗಿರುವ ಗುಪ್ತಾ ಅವರ ಅವಧಿ ಮೂರು ವರ್ಷಗಳದ್ದಾಗಿರುತ್ತದೆ ಎಂದರು.

ಈ ಕಾಯಿದೆಗೆ ಸಂಸತ್‌ನಲ್ಲಿ ಕಳೆದ ಮೇ 17ರಂದು ಅನುಮೋದನೆ ದೊರೆತ ನಂತರ ಜೂನ್‌ 9ರಂದು ರಾಷ್ಟ್ರಪತಿಗಳು ಅಂಕಿತ ಹಾಕಿದ್ದರು. ಮಾಹಿತಿ ತಂತ್ರಜ್ಞಾನ ಸಚಿವರು ಈ ಕಾಯಿದೆಯ ಕರಡು ಹಾಗೂ ಮಾರ್ಗಸೂಚಿಗಳನ್ನು ವೆಬ್‌ಸೈಟ್‌ನಲ್ಲಿ ಹಾಕುವ ಮೂಲಕ ಸಾರ್ವಜನಿಕರ ಪ್ರತಿಕ್ರಿಯೆಯನ್ನು ಪಡೆದಿದ್ದರು. ಸಾವಿರಾರು ಜನರ ಅಮೂಲ್ಯ ಸಲಹೆಗಳನ್ನು ಕ್ರೋಡೀಕರಿಸಿದ ನಂತರ ಈ ಕಾಯಿದೆಗೆ ಅಂತಿಮ ರೂಪ ನೀಡಲಾಗಿದೆ ಎಂದು ಮಹಾಜನ್‌ ಹೇಳಿದರು.

ಮುಂದಿನ ಅಧಿವೇಶದಲ್ಲಿ ಈ ಕಾಯಿದೆಯ ಜಾರಿ ಸಂಬಂಧದ ಪ್ರಕ್ರಿಯೆಗಳಿಗೆ ಹಾಗೂ ಮಾನ್ಯತಾ ಸಮಿತಿಯ ಹುದ್ದೆಗಳಿಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಮಾರ್ಪಾಟು ಮಾಡಲು ಯೋಜಿಸಲಾಗಿದೆ ಎಂದ ಅವರು, ಸೈಬರ್‌ ಲೋಕದಲ್ಲಿ ಹ್ಯಾಕಿಂಗ್‌, ಟ್ಯಾಂಪರಿಂಗ್‌, ಅಶ್ಲೀಲ ಮಾಹಿತಿ ನೀಡುವುದರ ವಿರುದ್ಧ ಡೆಪ್ಯೂಟಿ ಪೊಲೀಸ್‌ ಸೂಪರಿಂಟೆಂಡೆಂಟ್‌ ಹುದ್ದೆ ಹಾಗೂ ಮೇಲಿನ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವ ಅಧಿಕಾರ ಕಾಯಿದೆ ನೀಡುತ್ತದೆ ಎಂದರು. (ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X