ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್‌: ಭಾನುವಾರದ ಫೈನಲ್‌ಗೆ ರಂಗು ಬಳಿಯಲಿರುವ ಹೊಸ ಹುರುಪು

By Staff
|
Google Oneindia Kannada News

*ಡಿ. ರಾಮರಾಜ್‌

ಬೆಂಗಳೂರು : ಭಾನುವಾರ 12 ಗಂಟೆಗ ಪ್ರಾರಂಭವಾಗುವ ನ್ಯೂಜಿಲ್ಯಾಂಡ್‌ ಮತ್ತು ಭಾರತ ತಂಡಗಳ ಕ್ರಿಕೆಟ್‌ ಫೈನಲ್‌ ಮೇಲೆ ಎಲ್ಲರ ಈಗ ಕಣ್ಣು ಬಿದ್ದಿದೆ. ಮ್ಯಾಚ್‌ ಫಿಕ್ಸಿಂಗ್‌ನ ನಂತರ ಬಹುಶಃ ಹೆಚ್ಚು ಮಂದಿ ಭಾರತೀಯರು ನೋಡಬಹುದಾದ ಪಂದ್ಯ ಇದು ಎಂದು ಧಾರಾಳವಾಗಿ ಹೇಳಬಹುದು. ಹಾಗಾಗಿ ಎಂದಿನಂತೆ ಇತರೆ ಟಿವಿ ಕಾರ್ಯಕ್ರಮಗಳು ಮತ್ತು ಚಿತ್ರಮಂದಿರಗಳು ಒಂದು ದಿನದ ಮಟ್ಟಿಗೆ ಪ್ರೇಕ್ಷಕರ ಕೊರತೆ ಕಾಣಲಿವೆ.

ಬೆಳಯುತ್ತಲೇ ಇದ್ದ ಕ್ರಿಕೆಟ್‌ ನೋಡುವ ದಾಹಕ್ಕೆ ಕಡಿವಾಣ ಹಾಕಿದ್ದ, ದೆಹಲಿ ಪೊಲೀಸರು ಭೇದಿಸಿದ ಮ್ಯಾಚ್‌ ಫಿಕ್ಸಿಂಗ್‌ ಹಗರಣದ ನಂತರ, ಭಾರತ ಕ್ರಿಕೆಟ್‌ ಜಗತ್ತಿನ ಮೇಲೂ ಬಿರುಗಾಳಿ ಎದ್ದಿತ್ತು. ಇದಕ್ಕೆ ಕಾರಣವಾದದ್ದು ತಂಡದ ಹಾಲಿ ಮತ್ತು ಮಾಜಿ ಆಟಗಾರರು ಭಾಗಿಗಳು ಎಂಬ ಆರೋಪ.

ಹಗರಣದ ಬಿರುಗಾಳಿ ಪ್ರಪಂಚದ ಕ್ರಿಕೆಟ್‌ ಜಗತ್ತನ್ನು ಅಪ್ಪಳಿಸಿದಾಗ ಭಾರತದ ಮುಖ್ಯ ಆಟಗಾರರಾದ ಸೌರವ್‌, ದ್ರಾವಿಡ್‌ ಹಾಗೂ ಕುಂಬ್ಳೆ ಇಂಗ್ಲಿಷ್‌ ಕೌಂಟಿಯಲ್ಲಿ ಆಡುತ್ತಿದ್ದರು. ಹಗರಣದ ಹಿನ್ನಲೆಯಲ್ಲಿ ಅನೇಕ ಕ್ರಿಕೆಟಿಗರ ಮನೆ ಮೇಲೆ ದಾಳಿ ಮಾಡಿದ ಕೇಂದ್ರೀಯ ತನಿಖಾ ದಳ (ಸಿಬಿಐ) ಹಾಗೂ ವರಮಾನ ತೆರಿಗೆ ಇಲಾಖೆ ಅಧಿಕಾರಿಗಳು ಈ ಸಂಬಂಧದ ವರದಿಗಳನ್ನು ಇನ್ನೂ ಬಹಿರಂಗಗೊಳಿಸಬೇಕಿದೆ.

ಹೊಸಬರಿಗೆ ಅವಕಾಶ: ಹಗರಣದ ಚಂಡಮಾರುತದಲ್ಲಿ ಕೆಲವು ಹಿರಿಯ ಆಟಗಾರರು ಕೊಚ್ಚಿಹೋದದ್ದರಿಂದ ಕಿರಿಯರಿಗೆ ಅವಕಾಶ ಸಿಕ್ಕಿದ್ದು ಒಂದು ಮಹತ್ತರ ಬೆಳವಣಿಗೆ. ಹಾಗೆಯೇ ಆಯ್ಕೆದಾರರ ತಲೆ ಬಿಸಿ ಒಂದು ಅರ್ಥದಲ್ಲಿ ಕಡಿಮೆಯಾದದ್ದು , ಇನ್ನೊಂದು ಅರ್ಥದಲ್ಲಿ ಹೆಚ್ಚು ಜವಾಬ್ಧಾರಿಯುತವಾಗಿ ಹೊಸಬರನ್ನು ಆರಿಸಬೇಕಾದ ಅನಿವಾರ್ಯತೆಗೆ ಕಾರಣವಾಯಿತು.

ಆಯ್ಕೆದಾರರ ನಿರ್ಧಾರವನ್ನು ನೈರೋಬಿಯಲ್ಲಿನ ಪ್ರಸಕ್ತ ಟೂರ್ನಿಯಲ್ಲಿ ಗಟ್ಟಿಯಾಗಿ ಸಮರ್ಥಿಸಿಕೊಂಡಿರುವ ಮೂರು ಹೊಸ ಮುಖಗಳಾದ ವಿಕೆಟ್‌ ಕೀಪರ್‌ ವಿಜಯ್‌ ದಹಿಯಾ, ಯುವರಾಜ್‌ ಸಿಂಗ್‌ ಹಾಗೂ ಜಾಹಿರ್‌ಖಾನ್‌ ಎರಡೂ ಕೈಗಳಿಂದ ಅವಕಾಶಗಳನ್ನು ಬಾಚಿಕೊಂಡಿದ್ದಾರೆ.

ಈಗ ಈ ಮೂವರು ಹೊಸಬರು ಮತ್ತು ತೆಂಡೂಲ್ಕರ್‌, ದ್ರಾವಿಡ್‌, ಕುಂಬ್ಳೆ ಮತ್ತು ಗಂಗೂಲಿ ಅವರಂಥ ಅನುಭವಿಗಳಿಂದ ಕೂಡಿರುವ ತಂಡ ಯಶಸ್ಸನ್ನು ಹೆಗಲ ಮೇಲಿಟ್ಟುಕೊಂಡು ಎಲ್ಲರ ಆಶಾವಾದದ ಕಣ್ಣುಳಿಗೆ ಗುರಿಯಾಗಿದೆ. ತಂಡದ ಸಾಮರ್ಥ್ಯ ಬಲಿಷ್ಟ ತಂಡಗಳಾದ ಆಷ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾಗಳನ್ನು ಸೋಲಿಸುವಲ್ಲಿ ಸಾಬೀತಾಗಿದೆ.

ಹೆಚ್ಚಿದ ಜವಾಬ್ಧಾರಿ: ಭಾನುವಾರದ ಐಸಿಸಿ ಕ್ರಿಕೆಟ್‌ ಟ್ರೋಫಿಯ ಫೈನಲ್‌ನಲ್ಲಿ ನ್ಯೂಜಿಲ್ಯಾಂಡನ್ನು ಭಾರತ ತಂಡ ಎದುರಿಸಲಿದೆ. ಈವರೆಗೆ ಅಂತಾರಾಷ್ಟ್ರೀಯ ಮಟ್ಟದ ಯಾವುದೇ ಮಹತ್ವದ ಪ್ರಶಸ್ತಿಗಳನ್ನು ನ್ಯೂಜಿಲ್ಯಾಂಡ್‌ ಗೆದ್ದಿಲ್ಲದಿದ್ದರೂ ಸಧ್ಯದ ಸ್ಥಿತಿಯಲ್ಲಿ ಬಲಿಷ್ಠವಾಗೇ ಇದೆ. ಪ್ರಬಲ ಪಾಕಿಸ್ತಾನವನ್ನು ಸೋಲಿಸಿರುವ ತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ. ಹಾಗಾಗಿ ಮತ್ತೊಮ್ಮೆ ಆಲ್‌ರೌಂಡ ಪ್ರದರ್ಶನ ನೀಡಬೇಕಾದ ಜವಾಬ್ದಾರಿ ಭಾರತ ತಂಡದ ಮೇಲೆ ಇದೆ.

ಸ್ಪಿನ್‌ಗೆ ಅಳುಕುತ್ತಲೇ ಆಡುವ ಕಿವೀಸ್‌ ಆಟಗಾರರೆದುರು ಬೌಲಿಂಗ್‌ಗೆ ಅಗರ್‌ಕರ್‌ ಬದಲಿಗೆ ಸುನಿಲ್‌ ಜೋಷಿ ಆಡಿಸಿದರೆ ಉತ್ತಮ. ಆದರೆ ಗೆದ್ದಿರುವ ತಂಡವನ್ನೇ ಮುಂದುವರಿಸುವ ಹಳೆಯ ಸಂಪ್ರದಾಯವನ್ನು ಮುರಿಯಬೇಕಷ್ಟೆ.

ಈಗ ಬೀಸುತ್ತಿರುವ ಹೊಸ ಹುರುಪಿನ ಗಾಳಿ ಮರೀಚಿಕೆಯಾಗದಿರಲಿ ಎಂದು ಹಾರೈಸೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X