ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಯುಧ ಪೂಜೆಯ ಸಡಗರ, ಕರ್ನಾಟಕದಲೆಲ್ಲ ಸಂಭ್ರಮ

By Staff
|
Google Oneindia Kannada News

ಬೆಂಗಳೂರು : ಶನಿವಾರ ಮಹಾನವಮಿ, ಶರನ್ನವರಾತ್ರಿಯ ಸಾಲಿನಲ್ಲಿ ಮಹತ್ವದ ದಿನ. ಅಂದೇ ಆಯುಧ ಪೂಜೆ. 400 ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರಾದಾಯದಂತೆ ಶನಿವಾರ ಎಲ್ಲರೂ ತಮ್ಮ ವಾಹನಗಳನ್ನು ತೊಳೆದು, ಹೂವಿನ ಮಾಲೆ ಯಿಂದ ಸಿಂಗರಿಸಿ, ಹರಿಶಿನ - ಕುಂಕುಮದಿಂದ ಪೂಜಿಸಿ, ಬೂದಗುಂಬಳವನ್ನೋ, ನಿಂಬೆ ಹಣ್ಣನ್ನೋ ಬಲಿ ನೀಡಿ ಮುಂದೆ ಎಂದೆಂದೂ ತಮಗೆ ರಸ್ತೆಯಲ್ಲಿ ಯಾವುದೇ ತೊಂದರೆ ಆಗದಿರಲೆಂದು ವಾಹನೇಶ್ವರನ ಪೂಜಿಸುತ್ತಾರೆ.

ಈ ಪೂಜೆಗೆ ನೀಡುವ ಬಲಿಗಾಗಿ ಈಗಾಗಲೇ ರಾಜ್ಯದ ಎಲ್ಲ ರಸ್ತೆಗಳಲ್ಲೂ ಬಿಕರಿಗೆಂದು ಬೂದ ಗುಂಬಳ, ಬಾಳೆಕಂದು, ರಾಶಿರಾಶಿ ಮಾವಿನ ಸೊಪ್ಪು, ಹೂವು, ನಿಂಬೇಹಣ್ಣು ಬಂದಾಗಿದೆ. ಹಬ್ಬ ಎಂದ ಮೇಲೆ ಕೇಳಬೇಕೆ. ಎಂದಿನಂತೆ ಬೆಲೆಗಳು ಗಗನಕ್ಕೇರಿವೆ. ಇತ್ತೀಚೆಗಷ್ಟೇ ಹೆಚ್ಚಾದ ಪೆಟ್ರೋಲ್‌ ಉತ್ಪನ್ನಗಳ ಬೆಲೆ ಆಯುಧ ಪೂಜೆಯ ಪೂಜಾ ಸಾಮಗ್ರಿಗಳ ಬೆಲೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ಆದರೂ ವಾಹನ ಸಿಂಗಾರಕ್ಕಾಗಿ ಚಿನ್ನಾರಿ ಕಾಗದ, ಬಣ್ಣದ ಕಾಗದದ ಹೂಗಳು ಪ್ರದರ್ಶನಗೊಂಡಿವೆ.

ಕುಂಬಳಕಾಯಿ ತನ್ನ ಸೈಜಿಗನುಗುಣವಾಗಿ 15 ರುಪಾಯಿಯಿಂದ 50 ರುಪಾಯಿವರೆಗೆ ಮಾರಾಟವಾಗುತ್ತಿದೆ. ಬಾಳೆ ಕಂದುಗಳೂ ತಮ್ಮ ಎತ್ತರಕ್ಕೆ ತಕ್ಕಂತೆ ಬೆಲೆ ನಿಗದಿ ಮಾಡಿಕೊಂಡಿವೆ. ಸೇವಂತಿಗೆ ಹೂವು ಒಂದು ಮಾರಿಗೆ 15 ರುಪಾಯಿ ಆದರೆ, ಮಲ್ಲಿಗೆಯನ್ನು ಮಾತಾಡಿಸಲೂ ಆಗುತ್ತಿಲ್ಲ.

ಹಿಂದಿನ ದಿನವೇ ಆಯುಧ ಪೂಜೆ : ಆಯುಧ ಪೂಜೆಯ ನಿಮಿತ್ತ ಕಚೇರಿಗಳಿಗೆ ಸರಕಾರಿ ರಜೆ. ಕಾರ್ಖಾನೆಗಳಿಗೂ ರಜೆ. ಹೀಗಾಗಿ ಶುಕ್ರವಾರವೇ ಹಲವು ಕಚೇರಿ, ಕಾರ್ಖಾನೆಗಳಲ್ಲಿ ಆಯುಧ ಪೂಜೆ ನಡೆದುಹೋಗಿದೆ. ಸಾರ್ವಜನಿಕ ವಲಯದ ಉದ್ದಿಮೆಗಳ, ಖಾಸಗಿ ಕಂಪನಿಗಳ ಬಸ್‌, ಕಾರು, ವ್ಯಾನ್‌ಗಳು ಹೂವಿನಿಂದ ಅಲಂಕೃತಗೊಂಡು ದೊಡ್ಡ ಧ್ವನಿವರ್ಧಕಗಳನ್ನೂ ಹಾಕಿಕೊಂಡು ನಗರದಲ್ಲೆಲ್ಲಾ ಸುತ್ತಾಡುತ್ತಿವೆ.

ನಗರ ಸಾರಿಗೆ ವಾಹನಗಳ ಕಂಡಕ್ಟರ್‌, ಡ್ರೆೃವರ್‌ಗಳೂ ತಮ್ಮ ವಾಹನಗಳಿಗೆ ತಮ್ಮ ಮನಸ್ಸಿಗೆ ತೃಪ್ತಿ ಆಗುವ ರೀತಿಯಲ್ಲಿ ಅಲಂಕಾರ ಮಾಡಿದ್ದಾರೆ. ಕನ್ನಡ ಬಾವುಟಗಳು, ವೀರಪ್ಪನ್‌ ಅಪಹರಿಸಿರುವ ಡಾ. ರಾಜ್‌ಕುಮಾರ್‌ ಅವರ ವರ್ಣಚಿತ್ರಗಳು ಬಸ್‌ಗಳ ಗ್ಲಾಸ್‌ನ್ನು ಮುಚ್ಚಿವೆ. ಕೆಲವು ಬಸ್‌ಗಳಂತೂ ಸಂಪೂರ್ಣ ಹೂವಿನಿಂದ ಮುಚ್ಚಿ ಹೋಗಿವೆ. ವಾಹನ ಚಾಲಕರಿಗೆ ರಸ್ತೆಯೂ ಕಾಣದ ರೀತಿಯಲ್ಲಿ ಹೂವಿನಿಂದ ಮುಚ್ಚಲಾಗಿದೆ.

ಕೆಲವು ಕಾರ್ಖಾನೆಗಳಲ್ಲಿ ಶನಿವಾರವೇ ಆಯುಧ ಪೂಜೆ. ಎಲ್ಲ ಕಾರ್ಮಿಕರನ್ನೂ ಹಬ್ಬದ ದಿನ ಕಾರ್ಖಾನೆಗೆ ಬರಮಾಡಿಕೊಂಡು ಪೂಜೆಯ ನಂತರ ಸಿಹಿಯ ಪೊಟ್ಟಣಗಳನ್ನು ನೀಡಿ, ಬೋನಸ್‌ ನೀಡುವುದೂ ವಾಡಿಕೆ. ಇನ್ನು ಕೆಲವೆಡೆ ಶನಿವಾರ ರಜೆ ಇರುವ ಕಾರಣ ಶುಕ್ರವಾರ ರಾತ್ರಿಯೇ ಪೂಜೆ ಮಾಡುವುದೂ ಉಂಟು. ಒಟ್ಟಿನಲ್ಲಿ ರಾಜ್‌ ಅಪಹರಣವನ್ನು ಮರೆತಿರುವ ಮಂದಿ ಸಂಭ್ರಮದಿಂದ ತಮ್ಮ ವಾಹನಗಳನ್ನು ಶುಚಿ ಮಾಡಿಸಲು ಸರ್ವೀಸ್‌ ಸೆಂಟರ್‌ಗಳ ಮುಂದೆ ಕ್ಯೂ ನಿಂತಿದ್ದಾರೆ. ಹೂ, ಹಣ್ಣು, ಬಾಳೆಕಂದು, ಬೂದು ಗುಂಬಳ ತರಲು ಮಾರ್ಕೆಟ್‌ಗೆ ಬ್ಯಾಗ್‌ ಹಿಡಿದು ಹೊರಟಿದ್ದಾರೆ.

ಮಾರ್ಕೆಟ್‌ಗೆ ಹೋಗಲು ಮನಸ್ಸಿಲ್ಲದವರು, ತಮ್ಮ ಮನೆಯ ಹತ್ತಿರವೇ ರಸ್ತೆಯ ಬದಿಯಲ್ಲಿ ಬೂದುಗುಂಬಳ ರಾಶಿಹಾಕಿ ಕುಳಿತಿರುವ ವ್ಯಾಪಾರಿಯ ಬಳಿ ಚೌಕಾಸಿ ಮಾಡುತ್ತಿದ್ದಾರೆ. ನಿಮ್ಮ ಸಿದ್ಧತೆ ಹೇಗಿದೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X